ಜಿಲ್ಲೆಯಲ್ಲಿ ಪ್ರವಾಸಿ ಸರ್ಕೀಟ್ ರಚನೆ : ಸ್ಥಳೀಯರಿಗೆ ಉದ್ಯೋಗ ಮತ್ತು ಆರ್ಥಿಕ ಚೇತರಿಕೆಗೆ ಯೋಜನೆ ಸಹಕಾರಿ

10-03-rama-Manchana bele
Published on

ರಾಮನಗರ : ಪ್ರವಾಸಿ ವೈವಿಧ್ಯದಿಂದಲೇ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ರಾಮನಗರ ಜಿಲ್ಲೆಯನ್ನು ಮತ್ತಷ್ಟು ಪ್ರವಾಸಿ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ ‘ಪ್ರವಾಸಿ ಸರ್ಕೀಟ್’ ರಚನೆ ಮಾಡುವತ್ತ ಮಹತ್ವದ ಹೆಜ್ಜೆ ಇಟ್ಟಿದೆ.

ಮೇಕೆದಾಟು, ಸಂಗಮ, ಕಣ್ವ, ಮಂಚನಬೆಲೆ ಯಂತಹ ಜಲ ಪ್ರದೇಶಗಳು, ಸಾವನದುರ್ಗ, ರಾಮದೇವರ ಬೆಟ್ಟ, ರೇವಣಸಿದ್ದೇಶ್ವರ ಬೆಟ್ಟದಂತಹ ಬೃಹತ್ ಬಂಡೆಗಳ ಅದ್ಬುತ ತಾಣಗಳು, ಕೆಂಗಲ್, ರಂಗನಾಥ ಸ್ವಾಮಿ, ಕಬ್ಬಾಳು, ಅಪ್ರೇಮಯಸ್ವಾಮಿ ದೇವಾಲಯದ ಪವಿತ್ರ ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡ ಜಿಲ್ಲೆ ರಾಮನಗರವಾಗಿದೆ.

ಈ ಹಿನ್ನೆಲೆಯಲ್ಲಿ ರಾಮನಗರಕ್ಕೆ ಪ್ರತಿ ದಿನ ನೂರಾರು ಮಂದಿ ಪ್ರವಾಸಕ್ಕೆಂದು ಬಂದು ಇಲ್ಲಿ ಸಮಯ ಕಳೆಯುತ್ತಿದ್ದಾರೆ. ಇದಕ್ಕೆ ಪೂರಕವೆಂಬತೆ ಪ್ರವಾಸಿಗರಿಗೆ ಮತ್ತಷ್ಟು ಸೌಲಭ್ಯ ನೀಡುವ ಜತೆಗೆ, ಪ್ರವಾಸವನ್ನು ಆಕರ್ಷಣೀಯಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯವರೇ ಆದ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ವಿವಿಧ ಕ್ಷೇತ್ರಗಳನ್ನು ಒಳಗೊಂಡ ಪ್ರವಾಸಿ ಸರ್ಕೀಟ್ ಯೋಜನೆ ಜಾರಿಗೆ ಮುಂದಾಗಿದ್ದಾರೆ.

ಯಾವ ಯಾವ ತಾಣಗಳು: ಬಹುತೇಕ ಬೆಂಗಳೂರು ಸೇರಿ ಹೆಚ್ಚಿನ ಪ್ರವಾಸಿಗರು ನೀರು ಹೆಚ್ಚು ಇರುವ ಕಡೆಗೆ ಪ್ರವಾಸಕ್ಕೆ ಚಿಂತನೆ ಮಾಡುತ್ತಾರೆ. ಕೆಲವರು ಒಂದು ದಿನದ ಪ್ರವಾಸ ಯೋಜನೆ ರೂಪಿಸಿದರೆ ಅವರ ಆಯ್ಕೆ ರಾಮನಗರವೇ ಆಗಿರುತ್ತದೆ. ಕನಕಪುರದ ಸಂಗಮ, ಮೇಕೆದಾಟಿಗೆ ತಪ್ಪದೇ ಭೇಟಿ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಈ ಎರಡು ತಾಣಗಳ ಜತೆಗೆ ಮಾಗಡಿಯ ಮಂಚನಬೆಲೆ ಜಲಾಶಯ, ಚನ್ನಪಟ್ಟಣದ ಕಣ್ವದಲ್ಲಿ ವಾಟರ್ ಟೂರಿಸಂಗೆ ಉತ್ತೇಜನ ನೀಡುವ ಜತೆಗೆ, ಮಾಗಡಿ ಸಾವನದುರ್ಗ ಬೆಟ್ಟದಲ್ಲಿ ಟ್ರಕಿಂಗ್‌ಗೆ ಅವಕಾಶ ಕಲ್ಪಿಸಿಕೊಡಲು ಯೋಜನೆ ರೂಪಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪ್ರವಾಸಿ ತಾಣಗಳ ಅಭಿವೃದ್ಧಿ: ವೀಕೆಂಡ್ ಟೂರಿಸಂ ಸರ್ಕೀಟ್ ನಿರ್ಮಾಣದ ಹಿಂದೆ ಪ್ರಮುಖವಾಗಿ ಪ್ರವಾಸಿ ತಾಣಗಳ ಅಭಿವೃದ್ಧಿಯ ಮೂಲ ಉದ್ದೇಶವಿದೆ. ಈ ಯೋಜನೆಯಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿ ಜತೆಗೆ, ಪ್ರವಾಸಿಗರಿಗೆ ವಿಶ್ರಾಂತಿ ತಾಣ, ಡ್ರೆಸಿಂಗ್ ರೂಂಗಳ ನಿರ್ಮಾಣ ಹೀಗೆ ಹಲವು ಸೌಲಭ್ಯಗಳನ್ನು ಒದಗಿಸಲಿದ್ದಾರೆ. ಈ ಸಂಬಂಧ ಈಗಾಗಲೇ ಡಿಪಿಆರ್ ತಯಾರು ಮಾಡುವ ಸಂಬಂಧ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಯೋಗೇಶ್ವರ್ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದ್ದು, ಇನ್ನು 6 ತಿಂಗಳಲ್ಲಿ ಜಿಲ್ಲೆಯಲ್ಲಿ ಈ ಯೋಜನೆ ಜಾರಿಗೆ ಬರಲಿದೆ ಎಂದು ಮೂಲಗಳು ಖಚಿತ ಪಡಿಸಿವೆ.

ಅಗ್ರಿ ಟೂರಿಸಂಗೆ ಉತ್ತೇಜನ : ಎಕೋ ಟೂರಿಸಂ, ವಾಟರ್ ಟೂರಿಸಂ ಹೋಗಿ ಪ್ರವಾಸೋದ್ಯಮದ ಆಯಾಮ ಬದ ಲಾಗುತ್ತಲೇ ಇದ್ದು, ಅಷ್ಟೇ ವೇಗವಾಗಿ ಅಭಿವೃದ್ಧಿ ಕಾಣುತ್ತಿದೆ. ಇದೇ ಹಾದಿಯಲ್ಲಿ ಅಗ್ರಿಂ ಟೂರಿಸಂ ಸಹ ಇದೆ. ಕೃಷಿ ಚಟುವಟಿಕೆಯ ಬಗ್ಗೆ ತಿಳಿದು ಕೊಂಡು ಪ್ರವಾಸದ ಸವಿಯನ್ನು ಸವಿಯುವಂತೆ ಮಾಡುವ ನಿಟ್ಟಿನಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ರೂಪಿಸಲಾಗಿದೆ. ಬಹುತೇಕ ಬೆಂಗಳೂರು - ಮೈಸೂರು ನಡುವೆ ಸಂಚರಿಸುವ ಪ್ರವಾಸಿಗರು, ಬೆಂಗಳೂರಿನ ಐಟಿ ಬಿಟಿ ಕ್ಷೇತ್ರದ ಉದ್ಯೋಗಿಗಳು ಹಾಗೂ ಹೊರ ರಾಜ್ಯಗಳಿಂದಲೂ ಬರುವ ಪ್ರವಾಸಿಗರನ್ನು ನೇರವಾಗಿ ಆಯ್ಕೆ ಮಾಡಿಕೊಂಡ ರೈತರ ಜಮೀನುಗಳಿಗೆ ಕರೆದುಕೊಂಡು ಹೋಗಿ ಅಲ್ಲಿ ಅವರಿಗೆ ಕೃಷಿ ಚಟುವಟಿಕೆಯ ಬಗ್ಗೆ ಮಾಹಿತಿ ನೀಡುವ ಜತಗೆ ಸ್ವತಃ ಕೃಷಿ ಅನುಭವವನ್ನು ನೀಡಲಾಗುತ್ತದೆ.

ಪ್ರತಿ ಜಿಲ್ಲೆಯನ್ನು ಪ್ರವಾಸಿ ಬ್ರಾೃಂಡ್ ಮಾಡಲಾಗುತ್ತಿದೆ. ಬೆಂಗಳೂರು - ಮೈಸೂರು ನಡುವಿನ ಪ್ರವಾಸಿಗರನ್ನು ರಾಮನಗರದತ್ತ ಆಕರ್ಷಿಸಲು ರಾಮನಗರದಲ್ಲೂ ಸಹ ಟೂರಿಸಂ ಸರ್ಕೀಟ್ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ಮತ್ತು ಆರ್ಥಿಕ ಚೇತರಿಕೆಯೂ ಆಗುತ್ತದೆ. ಸಿ.ಪಿ.ಯೋಗೇಶ್ವರ್ ಪ್ರವಾಸೊದ್ಯಮ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net