

ಬೆಂಗಳೂರು: ಪಕ್ಕದ ಮನೆಯ ಹುಡುಗನ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದ ಯುವತಿಗೆ ಬೇರೊಬ್ಬ ಹುಡುಗನ ಜೊತೆ ನಿಶ್ಚಿತಾರ್ಥವಾಗಿದ್ದು, ಪ್ರೀತಿಸಿದ ಯುವಕನ ಕಿರುಕುಳ ತಾಳದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರು ದಕ್ಷಿಣದ ಗೊಟ್ಟಿಗೆರೆ ಗ್ರಾಮದಲ್ಲಿ ವಾಸವಿದ್ದ ಚಂದ್ರಕಲಾ (19) ನೇಣು ಬಿಗಿದುಕೊಂಡು ಮೃತಪಟ್ಟ ಯುವತಿ. ಪಿಯುಸಿ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿಯೇ ಇದ್ದ ಚಂದ್ರಕಲಾ ಪಕ್ಕದ ಮನೆಯ ಅರುಣ್ ಕುಮಾರ್ ಎಂಬಾತನ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದಳು. ಹುಡುಗಿಯ ಮನೆಯವರಿಗೆ ವಿಷಯ ಗೊತ್ತಾಗಿ ಹುಡುಗಿಗೆ ಬುದ್ಧಿವಾದ ಹೇಳಿದ್ದರು. ಆ ಹುಡುಗ ಜೈಲಿಗೆ ಹೋಗಿ ಬಂದಿದ್ದು ವ್ಯಕ್ತಿತ್ವ ಸರಿ ಇಲ್ಲ ಎಂದು ಮನವೊಲಿಸಿ ಕನಕಪುರದ ಪರಿಚಿತರ ಸಂಬಂಧದಲ್ಲಿ ಹುಡುಗನನ್ನು ನೋಡಿ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿದ್ದರು.
ಆದರೆ ಜಿಗಣೆ ಬಳಿಯ ನಂಜಾಪುರದ ನೆಂಟರ ಮನೆಗೆ ಹೋಗಿದ್ದ ಚಂದ್ರಕಲಾ ಅಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಬೇರೆ ಮದುವೆಯಾದರೆ ಕೊಲ್ಲುವುದಾಗಿ ಪ್ರಿಯಕರ ಅರುಣ್ ಕುಮಾರ್ ನಮ್ಮ ಮಗಳಿಗೆ ಬೆದರಿಕೆ ಹಾಕುತ್ತಿದ್ದ, ಮಗಳ ಸಾವಿಗೆ ಆತನೇ ಕಾರಣವೆಂದು ಪೊಲೀಸ್ ಠಾಣೆಯಲ್ಲಿ ದೂರು ಯುವತಿ ಪಾಲಕರು ದೂರು ನೀಡಿದ್ದಾರೆ. ಜಿಗಣೆ ಮತ್ತು ಕೋಣನಕುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.