ಆಪ್ ಬಳಿಕ 5ಜಿ ಸೂಜಿ: ಚೀನಾಗೆ ಶೀಘ್ರ 2ನೇ ಆಘಾತ?

China 1
Published on

ನವದೆಹಲಿ: ಗಡಿ ತಂಟೆ ತೆಗೆದ ಚೀನಾದ ವಿರುದ್ಧ ಪ್ರತೀಕಾರದ ಕ್ರಮವಾಗಿ ಆ ದೇಶದ 59 ಮೊಬೈಲ್ ಆಪ್​ಗಳನ್ನು ನಿಷೇಧಿಸಿ ಸೋಮವಾರವಷ್ಟೇ ಬಿಸಿ ಮುಟ್ಟಿಸಿರುವ ಭಾರತವೀಗ ಡ್ರಾ್ಯಗನ್ ರಾಷ್ಟ್ರದ 5ಜಿ ತಂತ್ರಜ್ಞಾನದ ಮೇಲೆ ದೃಷ್ಟಿ ಹಾಯಿಸಿದೆ. ನೆಟ್​ವರ್ಕ್ ಗಳನ್ನು 5ಜಿಗೆ ಉನ್ನತೀಕರಿಸಲು ಚೀನಾದ ಉಪಕರಣಗಳನ್ನು ಬಳಸದಂತೆ ನಿಷೇಧ ಹೇರುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ. ಭಾರತ ನೀಡಿರುವ ಚಾಟಿ ಏಟಿಗೆ ಬೆಚ್ಚಿರುವ ಚೀನಾ ಅಂತಾರಾಷ್ಟ್ರೀಯ ಕಂಪನಿಗಳ ಹಿತ ಕಾಯುವುದು ಭಾರತದ ಕರ್ತವ್ಯ ಎಂದು ಹೇಳುತ್ತಲೇ ಭಾರತದ ಹೂಡಿಕೆದಾರರಿಗೂ ಸಮಸ್ಯೆ ನಿಶ್ಚಿತ ಎಂಬ ಪರೋಕ್ಷ ಬೆದರಿಕೆ ಒಡ್ಡಿದೆ. ತನ್ನ ಆಪ್​ಗಳ ನಿಷೇಧಕ್ಕೆ ಪ್ರತೀಕಾರವಾಗಿ ಭಾರತದ ದಿನಪತ್ರಿಕೆಗಳ ವೆಬ್​ಸೈಟ್ ಸೇರಿದಂತೆ ಅನೇಕ ವೆಬ್​ಸೈಟ್​ಗಳನ್ನು ನಿರ್ಬಂಧಿಸಿರುವ ಸುದ್ದಿಯೂ ಹರಿದಾಡುತ್ತಿದೆ.

ಹಿತಕಾಯುವುದು ಕರ್ತವ್ಯ: ಮೋದಿ ಸರ್ಕಾರದ ಡಿಜಿಟಲ್ ಸ್ಟ್ರೈಕ್​ನಿಂದ ತತ್ತರಿಸಿರುವ ಚೀನಾ ಭಾರತದ ಹಕ್ಕುಗಳನ್ನು ನೆನಪಿಸುವ ಮೂಲಕ ಅಸಮಾಧಾನ ತೋಡಿಕೊಂಡಿದೆ. ಭಾರತ ಸರ್ಕಾರದ ಈ ನಿರ್ಧಾರದ ಬಗ್ಗೆ ಆತಂಕವಿದ್ದು, ಇದು ಭಾರತೀಯ ಬಳಕೆದಾರರ ಹಿತಾಸಕ್ತಿಗೆ ವಿರುದ್ಧವಾಗಿದೆ. ತಾವು ಸರ್ಕಾರದ ನಿರ್ಧಾರ ಹಾಗೂ ಪರಿಸ್ಥಿತಿ ಪರಿಶೀಲಿ ಸುತ್ತಿರುವುದಾಗಿ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝ್ವಾ ಲಿಜಿಯಾನ್ ಹೇಳಿದ್ದಾರೆ.

ಡಬ್ಲ್ಯೂಟಿಒ ಉಲ್ಲಂಘನೆ: ಚೀನಾ ಆಪ್​ಗಳನ್ನು ನಿಷೇಧಿಸಿರುವ ಭಾರತದ ನಡೆ ವಿಶ್ವ ವ್ಯಾಪಾರ ಸಂಘಟನೆ(ಡಬ್ಲ್ಯೂಟಿಒ)ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಭಾರತದ ಚೀನಾ ರಾಯಭಾರಿ ಕಚೇರಿ ವಕ್ತಾರ ಜಿ ರಾಂಗ್ ಆರೋಪಿಸಿದ್ದಾರೆ. ಭಾರತ ಕೂಡಲೇ ತನ್ನ ನಿರ್ಧಾರ ಪರಿಶೀಲಿಸಿ ಮುಕ್ತ ಹಾಗೂ ನ್ಯಾಯಸಮ್ಮತ ವ್ಯಾಪಾರಕ್ಕೆ ಅಗತ್ಯವಾದ ಪರಿಸರ ನಿರ್ವಿುಸಬೇಕೆಂದು ಆಗ್ರಹಿಸಿದ್ದಾರೆ.

ಏಟಿನ ಮೇಲೆ ಏಟು

5ಜಿ ನೆಟ್​ವರ್ಕ್ ಉನ್ನತೀಕರಣಕ್ಕೆ ಬಹುತೇಕ ಚೀನಾದ ಉಪಕರಣ ಬಳಕೆಯಾಗುತ್ತಿದೆ. ಚೀನಾದ ಹಲವು ರಾಜ್ಯಗಳು ಭಾರತದಲ್ಲಿ ವ್ಯಾವಹಾರಿಕ ನಂಟು ಸಾಧಿಸಿವೆ. ನೇರ ಯುದ್ಧಕ್ಕಿಂತ ಚೀನಾವನ್ನು ಆರ್ಥಿಕವಾಗಿ ಸದೆಬಡಿಯುವ ಪ್ರಯತ್ನವಾಗಿ ಭಾರತ ಆಪ್ ನಿರ್ಬಂಧದ ಬಳಿಕ ಚೀನಾದ 5ಜಿ ಉಪಕರಣಗಳನ್ನು ನಿಷೇಧಿಸುವತ್ತ ಗಮನ ಕೇಂದ್ರೀಕರಿಸಿದೆ. ಚೀನಾ ಉತ್ಪನ್ನಗಳಿಗೆ ಪರ್ಯಾಯವಾಗಿ ಇತರ ಉಪಕರಣ ಬಳಸುವ ಸಂಬಂಧ ಕೇಂದ್ರ ಸರ್ಕಾರ ನಡೆಸಿದ ಉನ್ನತಮಟ್ಟದ ಸಭೆಯಲ್ಲಿ ಚರ್ಚೆಯಾಗಿರುವುದಾಗಿ ತಿಳಿದು ಬಂದಿದೆ. ಸಭೆಯ ಒಟ್ಟಾರೆ ನಿರ್ಧಾರದ ಬಗ್ಗೆ ಸ್ಪಷ್ಟನೆ ಇಲ್ಲವಾದರೂ ಚೀನಾದ ಹುವಾಯಿ ಸೇರಿದಂತೆ ಕೆಲ ಕಂಪನಿಗಳ ಉಪಕರಣಗಳ ಮೇಲೆ ನಿರ್ಬಂಧ ವಿಧಿಸಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.

ಭಾರತದ ಮೇಲೆ ನೆಟ್ ದಾಳಿ

ಭಾರತದಲ್ಲಿ ತನ್ನ ಆಪ್​ಗಳು ನಿರ್ಬಂಧಗೊಳ್ಳುತ್ತಲೇ ಚೀನಾ ವಿಪಿಎನ್ (ವರ್ಚುವಲ್ ಪ್ರೖೆವೇಟ್ ನೆಟ್​ವರ್ಕ್) ನಿರ್ಬಂಧಿಸುವ ಮೂಲಕ ತನ್ನ ದೇಶದಲ್ಲಿ ಭಾರತದ ವೆಬ್​ಸೈಟ್​ಗಳನ್ನು ವೀಕ್ಷಿಸಲು ಸಾಧ್ಯವಾಗದಂತೆ ಪ್ರತೀಕಾರ ಕೈಗೊಂಡಿ ರುವುದಾಗಿ ಮೂಲಗಳು ತಿಳಿಸಿವೆ. ಭಾರತದ ಟಿವಿ ಚಾನಲ್​ಗಳನ್ನು ಐಪಿ ಟಿವಿ ಮೂಲಕ ನೋಡಬಹುದು.

ಆದರೆ ಕಳೆದೆರಡು ದಿನಗಳಿಂದ ಐಫೋನ್ ಮತ್ತು ಡೆಸ್ಕ್​ಟಾಪ್​ಗಳಲ್ಲಿ ಎಕ್ಸ್​ಪ್ರೆಸ್ ವಿಪಿಎನ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿದುಬಂದಿದೆ. ವರ್ಚುವಲ್ ಪ್ರೖೆವೇಟ್ ನೆಟ್​ವರ್ಕ್ ಎಂಬುದು ಸಾರ್ವಜನಿಕ ಅಂತರ್ಜಾಲ ಸಂಪರ್ಕದಿಂದ ಖಾಸಗಿ ನೆಟ್​ವರ್ಕ್ ರಚಿಸುವ ಮೂಲಕ ಬಳಕೆದಾರರಿಗೆ ಆನ್​ಲೈನ್ ಗೌಪ್ಯತೆ ನೀಡುವ ಪ್ರಬಲ ಸಾಧನವಾಗಿದೆ. ವಿಪಿಎನ್​ಗಳು ಇಂಟರ್ನೆಟ್ ಪೋ›ಟೋಕಾಲ್ (ಐಪಿ) ವಿಳಾಸವನ್ನು ಮರೆಮಾಚುವುದರಿಂದ ಬಳಕೆದಾರರ ಆನ್​ಲೈನ್ ಕ್ರಿಯೆಗಳನ್ನು ಗುರುತಿಸಲಾಗುವುದಿಲ್ಲ. ಆದರೆ ಚೀನಾ ಸೆನ್ಸಾರ್​ಶಿಪ್ ಮೀರಿ ನಿರ್ದಿಷ್ಟ ವೆಬ್​ಸೈಟ್​ಗಳಿಗೆ ಭೇಟಿ ನೀಡಲು ಅನುವು ಮಾಡಿಕೊಡುವ ವಿಪಿಎನ್​ಗಳನ್ನೇ ಬ್ಲಾಕ್​ವಾಡಬಲ್ಲ ಅತ್ಯಾಧುನಿಕ ಫೈರ್​ವಾಲ್ ಸೃಷ್ಟಿಸಿದೆ ಎನ್ನಲಾಗಿದೆ.

ಪ್ಲೇಸ್ಟೋರ್​ನಿಂದ ಔಟ್

ಚೀನಾ ಆಪ್​ಗಳನ್ನು ಈಗಾಗಲೇ ಗೂಗಲ್ ಪ್ಲೇಸ್ಟೋರ್ ಮತ್ತು ಮತ್ತು ಆಪಲ್ ಆಪ್ ಸ್ಟೋರ್ ಅಪ್ಲಿಕೇಷನ್​ಗಳಿಂದ ತೆಗೆದು ಹಾಕಲಾಗಿದೆ. ಭಾರತದಲ್ಲಿ ನಿರ್ಬಂಧಿಸಲಾಗಿರುವ ಆಪ್​ಗಳಲ್ಲಿ ಅತೀ ಹೆಚ್ಚು ಜನಪ್ರಿಯವಾಗಿರುವ ಟಿಕ್​ಟಾಕ್, ಶೇರ್​ಇಟ್ ಸೇರಿದಂತೆ ಅಲಿಬಾಬಾದ ಯುಸಿ ಬ್ರೌಸರ್ ಮತ್ತು ಶಿಯೋಮಿಯ ಎರಡು ಅಪ್ಲಿಕೇಶನ್​ಗಳು ಪಟ್ಟಿಯಲ್ಲಿವೆ.

ಮಾಹಿತಿ ಸೋರಿಕೆಯಿಲ್ಲ ಟಿಕ್​ಟಾಕ್ ಸ್ಪಷ್ಟನೆ

59 ಆಪ್​ಗಳಲ್ಲಿ ಅತೀ ದೊಡ್ಡ ನಷ್ಟ ಅನುಭವಿಸಿರುವ ಟಿಕ್​ಟಾಕ್ ಆಪ್ ಭಾರತ ಸರ್ಕಾರದ ಸೂಚನೆಯಂತೆ ಪ್ರತಿಕ್ರಿಯೆ ಹಾಗೂ ಸ್ಪಷ್ಟೀಕರಣ ನೀಡಲು ಸಿದ್ಧತೆ ನಡೆಸಿದೆ. ಚೀನಾ ಸೇರಿದಂತೆ ಯಾವುದೇ ವಿದೇಶಿ ಕಂಪನಿ ಅಥವಾ ಸರ್ಕಾರದ ಜತೆಗೆ ಭಾರತೀಯ ಟಿಕ್​ಟಾಕ್ ಬಳಕೆದಾರರ ಮಾಹಿತಿಗಳನ್ನು ಹಂಚಿಕೊಂಡಿಲ್ಲ ಎಂದು ಟಿಕ್​ಟಾಕ್ ತಿಳಿಸಿದೆ.

ಈ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಬೆಂಬಲಿಸುತ್ತೇವೆ. ಆಪ್ ನಿಷೇಧಿಸುವುದು ಮಾತ್ರ ಚೀನಾಗೆ ತಕ್ಕ ಉತ್ತರವಾಗುವುದಿಲ್ಲ. ನಾವು ಸರಿಯಾದ ತಿರುಗೇಟು ನೀಡಬೇಕಿದೆ. ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಸಿಎಂ

ಕಠಿಣ ಸಂದೇಶ ರವಾನೆ

  • ಯಾವುದೇ ಮಿಲಿಟರಿ ಶಕ್ತಿಗೆ ಭಾರತ ತಲೆಬಾಗಲ್ಲ
  • ಅಗತ್ಯಕ್ಕೆ ತಕ್ಕದಾದ ದೃಢ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಇದೆ
  • ಮಿಲಿಟರಿ ಮಾತ್ರವಲ್ಲ ನಿಮ್ಮ ವ್ಯಾಪಾರಿ ಹಿತಾಸಕ್ತಿಗಳಿಗೂ ಹೊಡೆತ ಕೊಡಬಲ್ಲೆವು

ಚೀನಾಗೆ ಸರಣಿ ಸವಾಲುಗಳು

  • ಭಾರತದೊಂದಿಗೆ ಗಡಿ ಹಂಚಿಕೊಂಡಿರುವ ದೇಶಗಳು ಭಾರತದ ಕಂಪನಿಗಳಲ್ಲಿ ನೇರ ಬಂಡವಾಳ ಹೂಡಿಕೆ ಮಾಡುವ ಮೊದಲು ಸರ್ಕಾರದ ಪೂರ್ವಾನುಮತಿ ಪಡೆದುಕೊಳ್ಳಬೇಕೆಂಬ ಕಡ್ಡಾಯ ನಿಯಮ ಕಳೆದ ಏಪ್ರಿಲ್​ನಲ್ಲಿ ಜಾರಿಯಾಯಿತು
  • ಕೋವಿಡ್ ಪಿಡುಗಿನ ಕಾರಣಕ್ಕೆ ಭಾರತದ ಕಂಪನಿಗಳ ಷೇರು ಬೆಲೆ ಕುಸಿದಿದ್ದ ಹಿನ್ನೆಲೆಯಲ್ಲಿ ಇದು ಮಹತ್ವದ ನಿರ್ಧಾರವಾಗಿತ್ತು
  • ಪರಿಸ್ಥಿತಿಯ ಲಾಭ ಪಡೆದುಕೊಂಡು ದೇಶೀಯ ಕಂಪನಿಗಳಲ್ಲಿ ವಿದೇಶಿಯರು ಗಮನಾರ್ಹ ಪ್ರಮಾಣದಲ್ಲಿ ಬಂಡವಾಳ ತೊಡಗಿಸುವುದಕ್ಕೆ ಇದು ಕಡಿವಾಣ ಹಾಕಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net