25 ಸಾವಿರ ಶಿಕ್ಷಕರ ವಜಾ! ಕೋಲ್ಕತ ಹೈಕೋರ್ಟ್​ ಆದೇಶ ಎತ್ತಿಹಿಡಿದ ಸುಪ್ರೀಂಕೋರ್ಟ್​ | Bengal teachers

Bengal teachers
Published on

Bengal teachers : ಪಶ್ಚಿಮ ಬಂಗಾಳದಲ್ಲಿ 2016ರಲ್ಲಿ ನಡೆದ ಶಿಕ್ಷಕರ ನೇಮಕಾತಿಯನ್ನು ರದ್ದು ಮಾಡಿದ ಕೋಲ್ಕತ್ತ ಹೈಕೋರ್ಟ್​ ಕ್ರಮವನ್ನು ದೇಶದ ಉನ್ನತ ನ್ಯಾಯಾಲಯ ಸುಪ್ರೀಂಕೋರ್ಟ್​ ಗುರುವಾರ (ಏಪ್ರಿಲ್​ 03) ಎತ್ತಿ ಹಿಡಿದಿದೆ.

ಹಣಕ್ಕಾಗಿ ಶಿಕ್ಷಕರ ಹುದ್ದೆಯನ್ನು ಮಾರಾಟ ಮಾಡಿದ ಹಗರಣಕ್ಕೆ ಸಂಬಂಧಿಸಿದಂತೆ 2016ರಲ್ಲಿ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ (WBSSC)ದ 25,000ಕ್ಕೂ ಹೆಚ್ಚು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ನೇಮಕಾತಿಗಳನ್ನು ಕೊಲ್ಕತ್ತ ಹೈಕೋರ್ಟ್‌ ವಜಾ ಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಇಂದು ತೀರ್ಪು ನೀಡಿದ ಉನ್ನತ ನ್ಯಾಯಾಲಯ, ಹೈಕೋರ್ಟ್​ ತೀರ್ಪನ್ನು ಎತ್ತಿ ಹಿಡಿದಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಪಿ.ವಿ. ಸಂಜಯ್ ಕುಮಾರ್ ಅವರಿದ್ದ ದ್ವಿಸದಸ್ಯ ಪೀಠವು ಶಿಕ್ಷಕರ ಆಯ್ಕೆ ಪ್ರಕ್ರಿಯೆಯ ಬಗ್ಗೆ ಬಲವಾದ ಅವಲೋಕನಗಳನ್ನು ಮಾಡಿತು. ಈ ವೇಳೆ ನೇಮಕಾತಿಯಲ್ಲಿ ಭಾರಿ ವಂಚನೆ ನಡೆದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಹೈಕೋರ್ಟ್​ ತೀರ್ಪು ಸರಿ ಎಂದು ಹೇಳಿದೆ.

ಕಳಂಕಿತ ಅಭ್ಯರ್ಥಿಗಳ ಸೇವೆ ಮತ್ತು ಅವರ ನೇಮಕಾತಿಯನ್ನು ಕೊನೆಗೊಳಿಸಬೇಕು ಎಂಬ ಹೈಕೋರ್ಟ್‌ನ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ನಮಗೆ ಯಾವುದೇ ಕಾರಣವಿಲ್ಲ. ಅವರ ನೇಮಕಾತಿಯಲ್ಲಿ ವಂಚನೆಯಿಂದ ಆಗಿರುವುದರಿಂದ, ಈ ತೀರ್ಪು ಸರಿಯಾಗಿಯೇ ಇದೆ ಎಂದು ನ್ಯಾಯಪೀಠವು ಹೇಳಿತು. ಅಲ್ಲದೆ, ಈಗಾಗಲೇ ನೇಮಕಗೊಂಡ ಅಭ್ಯರ್ಥಿಗಳು ಇಲ್ಲಿಯವರೆಗೆ ತಮಗೆ ನೀಡಲಾದ ಸಂಬಳವನ್ನು ಮತ್ತೆ ಹಿಂತಿರುಗಿಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತು.

2016ರಲ್ಲಿ ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಿಗೆ ನೇಮಕಾತಿ ನಡೆದಿತ್ತು. ಈ ವೇಳೆ 25 ಸಾವಿರಕ್ಕೂ ಅಧಿಕ ಮಂದಿ ಆಯ್ಕೆಯಾಗಿದ್ದರು. ಈ ನೇಮಕಾತಿಯಲ್ಲಿ ಅಕ್ರಮ ನಡೆದಿತ್ತು. ಒಎಂಆರ್ ಶೀಟ್ ತಿರುಚಿರುವುದು ಮತ್ತು ರ‍್ಯಾಂಕ್​ನಲ್ಲಿ ಮೋಸ ನಡೆದಿರುವುದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್​ ಶಿಕ್ಷಕರ ನೇಮಕಾತಿ ರದ್ದು ಮಾಡಿತು. ಅಲ್ಲದೆ, ಶಾಲಾ ಶಿಕ್ಷಕರು ನಾಲ್ಕು ವಾರಗಳಲ್ಲಿ ತಮ್ಮ ವೇತನವನ್ನು ಬಡ್ಡಿ ಸಮೇತ ಹಿಂದಿರುಗಿಸಬೇಕು ಎಂದು ಕೋಲ್ಕತ್ತ ಹೈಕೋರ್ಟ್​ ನ್ಯಾಯಮೂರ್ತಿಗಳಾದ ದೇಬಂಗ್ಸು ಬಸಾಕ್ ಮತ್ತು ಎಂಡಿ ಶಬ್ಬರ್ ರಶೀದಿ ಅವರನ್ನೊಳಗೊಂಡ ವಿಭಾಗೀಯ ಪೀಠ 2024, ಏಪ್ರಿಲ್​ 22ರಂದು ಆದೇಶಿಸಿತ್ತು.

ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರಕ್ಕೆ ಈ ತೀರ್ಪು ಮುಖಭಂಗವಾಗಿದ್ದು, ಈ ಆದೇಶವನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಆದರೆ, ಇದೀಗ ಸುಪ್ರೀಂಕೋರ್ಟಿನಲ್ಲೂ ಮುಖಭಂಗವಾಗಿದೆ. ಈಗಾಗಲೇ ಶಿಕ್ಷಕರ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಸೇರಿದಂತೆ ಹಲವು ತೃಣಮೂಲ ನಾಯಕರು ಮತ್ತು ಮಾಜಿ ಅಧಿಕಾರಿಗಳು ಜೈಲಿನಲ್ಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net