

ನವದೆಹಲಿ: ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಮೇ 7ರಂದು ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಐದು ಪ್ರಮುಖ ಉಗ್ರರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಉಗ್ರರ ಅಂತ್ಯಕ್ರಿಯೆಯಲ್ಲಿ ಪಾಕ್ನ ಉನ್ನತ ಅಧಿಕಾರಿಗಳು ಭಾಗವಹಿಸಿದ್ದ ಫೋಟೋಗಳು ವೈರಲ್ ಆಗಿವೆ. ಇದು ಪಾಕ್ ಸೇನೆ ಮತ್ತು ಭಯೋತ್ಪಾದಕರ ನಡುವಿನ ನಂಟನ್ನು ಬಯಲುಗೊಳಿಸಿದೆ. ಈ ಭಯೋತ್ಪಾದಕರು ಜೈಷ್ ಎ ಮೊಹಮದ್ (ಜೆಇಎಂ) ಮತ್ತು ಲಷ್ಕರ್ ಎ ತೊಯ್ಬಾದ ಬಹಳ ಪ್ರಮುಖ ಸ್ಥಾನಗಳಲ್ಲಿದ್ದು ಚಟುವಟಿಕೆಗಳನ್ನು ನಡೆಸುತ್ತಿದ್ದರು. ಈ ಐದು ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಪಾಕ್ನ ಉನ್ನತ ಅಧಿಕಾರಿಗಳು ಮಿಲಿಟರಿ ಸಮವಸ್ತ್ರದಲ್ಲಿ ಭಾಗವಹಿಸಿದ್ದರು.
ಮೃತ ಉಗ್ರರು
ಮುದಸ್ಸರ್ ಖದಿಯಾನ್ ಖಾಸ್: ಮುದಸ್ಸರ್ ಅಥವಾ ಅಬು ಜುಂದಾಲ್ ಎಂಬ ಹೆಸರಿನಿಂದಲೂ ಪರಿಚಿತನಾದ ಖಾಸ್, ಲಷ್ಕರ್ ಸಂಘಟನೆಯ ಸದಸ್ಯನಾಗಿದ್ದ. ಆತ, ಭಾರತ ಗಡಿಯಿಂದ 25 ಕಿಮೀ ದೂರದಲ್ಲಿರುವ ಪಾಕ್ನ ಮುರಿಡ್ಕೆಯಲ್ಲಿರುವ ಉಗ್ರರ ಶಿಬಿರ ಮರ್ಕಜ್ ತೊಯ್ಬಾದ ಉಸ್ತುವಾರಿಯಾಗಿದ್ದ. ಅದು ಎಲ್ಇಟಿಯ ಕೇಂದ್ರ ಕಚೇರಿಯಾಗಿಯೂ ಕಾರ್ಯ ನಿರ್ವಹಿಸುತ್ತಿತ್ತು. ಖಾಸ್ನ ಅಂತ್ಯಕ್ರಿಯೆಯನ್ನು ನಿಯೋಜಿತ ಜಾಗತಿಕ ಭಯೋತ್ಪಾದಕ ಹಫೀಜ್ ಅಬ್ದುಲ್ ರವೂಫ್ ಸರ್ಕಾರಿ ಶಾಲೆಯೊಂದರ ಆವರಣದಲ್ಲಿ ನೆರವೇರಿಸಿದನೆಂದು ಮೂಲಗಳು ಹೇಳಿವೆ. ಪಾಕ್ ಸೇನೆ ಗೌರವ ವಂದನೆ ನೀಡಿದ್ದು ಸೇನಾ ಮುಖ್ಯಸ್ಥ ಅಸಿಂ ಮುನೀರ್ ಮತ್ತು ಪಂಜಾಬ್ ಪ್ರಾಂತ್ಯದ ಸಿಎಂ ಮರಿಯಂ ನವಾಜ್ ಪರವಾಗಿ ಪುಷ್ಪಗುಚ್ಛ ಇರಿಸಲಾಗಿತ್ತು.
ಹಫೀಜ್ ಮಹಮದ್ ಜಮೀಲ್: ಜೈಷ್ ಸಂಘಟನೆಯವನಾದ ಜಮೀಲ್, ಅದರ ಸಂಸ್ಥಾಪಕ ಮಸೂದ್ ಅಜರ್ನ ಬಾವನೆಂಟ. ಆತ ಬಹಾವಲ್ಪುರದ ಮರ್ಕಜ್ ಸುಭಾನ್ ಅಲ್ಲಾದ ಇನ್ಚಾರ್ಜ್ ಆಗಿದ್ದ. ಯುವಜನರ ತಲೆಕೆಡಿಸಿ ಜೈಷ್ಗೆ ನೇಮಕ ಮಾಡಿಕೊಳ್ಳುವುದಲ್ಲದೆ ಹಣ ಸಂಗ್ರಹದಲ್ಲಿ ಸಕ್ರಿಯನಾಗಿದ್ದ.
ಮಹಮದ್ ಯೂಸುಫ್ ಅಜರ್: ಅಜರ್ ಆಲಿಯಾಸ್ ಉಸ್ತಾದ್ ಜೀ ಯಾನೆ ಮಹಮದ್ ಸಲೀಂ ಕೂಡ ಮಸೂದ್ ಅಜರ್ನ ಬಾವನೆಂಟ. ಜೆಇಎಂನ ತರಬೇತಿಗೆ ಅಗತ್ಯವಾದ ಶಸ್ತ್ರಾಸ್ತ್ರಗಳನ್ನು ಆತ ನಿಭಾಯಿಸುತ್ತಿದ್ದ. ಜಮ್ಮು ಮತ್ತು ಕಾಶ್ಮೀರದಲ್ಲಿ ಅನೇಕ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ. ಕಂದಹಾರ್ ಹೈಜಾಕ್ ಎಂದು ಕುಖ್ಯಾತವಾಗಿರುವ, 1999ರ ಐಸಿ-814 ವಿಮಾನ ಅಪಹರಣದಲ್ಲಿ ಪಾಲ್ಗೊಂಡಿದ್ದ. ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ ಭಾರತ ಮಸೂದ್ ಅಜರ್ನನ್ನು ಬಂಧಮುಕ್ತಗೊಳಿಸುವ ಅನಿವಾರ್ಯತೆ ಉಂಟಾಗಿತ್ತು.
ಅಬು ಅಕಶಾ ಆಲಿಯಾಸ್ ಖಲೀದ್: ಲಷ್ಕರ್ ಉಗ್ರಗಾಮಿಯಾಗಿದ್ದ ಈತ ಜಮ್ಮು-ಕಾಶ್ಮೀರದಲ್ಲಿ ಅನೇಕ ದಾಳಿಗಳಲ್ಲಿ ಭಾಗಿಯಾಗಿದ್ದ. ಸಂಘಟನೆಗಾಗಿ ಆಫ್ಘಾನಿಸ್ತಾನದಿಂದ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ಪ್ರಮುಖ ಪಾತ್ರಧಾರಿ.
ಮಹಮದ್ ಹಸನ್ ಖಾನ್: ನಿಷೇಧಿತ ಜೈಷ್ ಸಂಘಟನೆಗೆ ಸೇರಿದವನಾಗಿದ್ದ ಖಾನ್, ಪಿಒಕೆಯಲ್ಲಿ ಜೆಇಎಂನ ಕಾರ್ಯನಿರ್ವಾಹಕ ಮುಖ್ಯಸ್ಥನಾಗಿದ್ದ. ಜಮ್ಮು-ಕಾಶ್ಮೀರದ ದಾಳಿಗಳನ್ನು ಸಮನ್ವಯ ಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.