

ಬೆಂಗಳೂರು: ಸಿಎಎ, ಎನ್ಆರ್ಸಿ ಮತ್ತು ಎನ್ಪಿಆರ್ ಕಾಯ್ದೆ ಹಿಂಪಡೆಯಬೇಕು. ಸಂವಿಧಾನತಜ್ಞರು, ಸಾಮಾಜಿಕ ಹೋರಾಟಗಾರರು, ಪ್ರಗತಿಪರರು, ವಿವಿಧ ರಾಜಕೀಯ ಪಕ್ಷಗಳ ನಾಯಕರ ಜತೆ ಸಮಾಲೋಚನಾ ಸಭೆ ನಡೆಸಬೇಕು. ಸುಪ್ರೀಂಕೋರ್ಟ್ನಲ್ಲಿರುವ ಸಿಎಎ ಮತ್ತು ಎನ್ಆರ್ಸಿಗೆ ಸಂಬಂಧಪಟ್ಟ ಅರ್ಜಿಗಳನ್ನು ಶೀಘ್ರ ಇತ್ಯರ್ಥಗೊಳಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯಗಳನ್ನು ಕೆಪಿಸಿಸಿ ಕೈಗೊಂಡಿದೆ.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸಿಎಎ ಹಾಗೂ ಎನ್ಆರ್ಸಿ ವಿರುದ್ಧದ ವಿಚಾರಸಂಕಿರಣದಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ದೇಶದ ಹಾದಿ ತಪ್ಪಿಸುತ್ತಿರುವುದು ಸ್ಪಷ್ಟ. ಎನ್ಪಿಆರ್ನಲ್ಲಿ ರಾಕ್ಷಸೀ ಉದ್ದೇಶವಿದೆ. ಸಿಎಎ ಮತ್ತು ಎನ್ಆರ್ಸಿ ಮೇಲ್ನೋಟಕ್ಕೆ ಸಂವಿಧಾನ ವಿರೋಧಿಯಾಗಿವೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಸಂವಿಧಾನದ ಮೂಲ ಉದ್ದೇಶಗಳನ್ನೇ ಅಳಿಸಿಹಾಕಿದೆ. ದೇಶದಲ್ಲಿ ಹಲವು ಸಮಸ್ಯೆಗಳಿವೆ. ಅವುಗಳ ಬಗ್ಗೆ ಮಾತೇ ಆಡಲ್ಲ್ಲ ಪ್ರಣಾಳಿಕೆಯಲ್ಲಿ ಹೇಳಿದ ಬೇರೆ ವಿಷಯಗಳನ್ನು ಏಕೆ ಜಾರಿಗೆ ತರಲಿಲ್ಲ ಎಂದು ಹರಿಹಾಯ್ದರು.
ಹಿಂದು ರಾಷ್ಟ್ರ ನಿರ್ಮಾಣ ಮಾಡಲು ನಾವು ಬಿಡುವುದಿಲ್ಲ. ಸಾವರ್ಕರ್ ಏನೇನು ಮಾಡಿದರು ಎಂಬುದು ಗೊತ್ತಿದೆ. ಪ್ರಜಾಪ್ರಭುತ್ವದಲ್ಲಿ ಎಷ್ಟೇ ಬಹುಮತ ಇದ್ದರೂ ಜನವಿರೋಧಿ ಕಾನೂನು ತರಬಾರದು. ಎಲ್ಲರೂ ಇದನ್ನು ವಿರೋಧಿಸಲೇಬೇಕು ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಂವಿಧಾನ ವಿರುದ್ಧವಾಗಿ ಕಾಯ್ದೆ ತರುತ್ತಿದ್ದಾರೆ ಎಂದು ಕಿಡಿಕಾರಿದರು.
ಮಾಜಿ ಸಂಸದ ಕೆ.ಎಚ್. ಮುನಿಯಪ್ಪ, ರಾಜ್ಯಸಭಾ ಸದಸ್ಯರಾದ ಎಲ್. ಹನುಮಂತಯ್ಯ, ಪೊ›. ರಾಜೀವ್ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿಯನ್ನು ವಿರೋಧ ಮಾಡಿದರೆ ದೇಶದ್ರೋಹಿಗಳು, ಪರವಾಗಿದ್ದರೆ ದೇಶಪ್ರೇಮಿ ಎಂಬ ಪರಿಸ್ಥಿತಿ ಇದೆ. ಸಿಎಎಯಿಂದ ಏನು ಲಾಭ ಎಂಬುದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳುತ್ತಿಲ್ಲ. ರಾಜ್ಯಸಭೆಯಲ್ಲಿ ಗೊಂದಲ ಸೃಷ್ಟಿಸಿ ಈ ಮಸೂದೆಗೆ ಅಂಗೀಕಾರ ಪಡೆದುಕೊಂಡಿದ್ದಾರೆ. ಈ ಕಾಯ್ದೆಯಿಂದ ದೇಶ ಛಿದ್ರವಾಗುತ್ತಿದೆ. ಹಿಂಸಾಚಾರ ಹೆಚ್ಚುತ್ತಿದೆ. | ದಿನೇಶ್ ಗುಂಡೂರಾವ್ ಕಾಂಗ್ರೆಸ್ ಮುಖಂಡ