

ಕೋಲಾರ : ಕೋಲಾರ ಎಪಿಎಂಸಿಯಲ್ಲಿ ಕಳೆದ ವರ್ಷ ಇದೇ ಸಮಯಕ್ಕೆ ಕೆಜಿಗೆ 43 ರೂ. ಇದ್ದ ಟೊಮ್ಯಾಟೊ ಬೆಲೆ ಈ ವರ್ಷ ಕೇವಲ 12 ರೂ. ಆಗಿದೆ. ಬೆಲೆ ಕುಸಿತದಿಂದಾಗಿ ಟೊಮ್ಯಾಟೊ ಬೆಳೆಗಾರನ ಆಶಾಗೋಪುರ ಕುಸಿದಿದೆ.
ಏಷ್ಯಾದಲ್ಲೇ ಟೊಮ್ಯಾಟೊಗೆ ಕೋಲಾರದ ಎಪಿಎಂಸಿ ಎರಡನೇ ಅತಿದೊಡ್ಡ ಮಾರುಕಟ್ಟೆ, ಇಲ್ಲಿಂದ ರಾಜ್ಯ ಸೇರಿ ಉತ್ತರ ಭಾರತದ ಅನೇಕ ರಾಜ್ಯಗಳಿಗೆ ವರ್ಷವಿಡೀ ಟೊಮ್ಯಾಟೊ ರವಾನೆಯಾಗುವುದರಿಂದ ಟೊಮ್ಯಾಟೊ ಬೆಳೆಗಾರನಿಗೆ ಮಾರುಕಟ್ಟೆ ವ್ಯವಸ್ಥೆಗೆ ತೊಂದರೆ ಇಲ್ಲ. ಆದರೆ ನೆರೆ ರಾಜ್ಯಗಳಲ್ಲಿನ ಟೊಮ್ಯಾಟೊ ಆವಕ, ಹವಾಮಾನ ವೈಪರೀತ್ಯಗಳು ಟೊಮ್ಯಾಟೊ ಧಾರಣೆಯನ್ನು ಏರುಪೇರು ಮಾಡುತ್ತಿದೆ.
ಕಳೆದ ವರ್ಷ ಈ ಅವಧಿಯಲ್ಲಿ 15 ಕೆಜಿ ಬಾಕ್ಸ್‌ಗೆ ಗರಿಷ್ಠ 645 ರೂಪಾಯಿ (ಕೆಜಿಗೆ 43 ರೂ. ) ಇತ್ತು. ಈ ವರ್ಷವೂ ಉತ್ತಮ ಧಾರಣೆ ನಿರೀಕ್ಷೆಯಲ್ಲಿದ್ದ ರೈತ ಇದೇ ಅವಧಿಗೆ ಟೊಮ್ಯಾಟೊ ಇಳುವರಿ ಬರುವಂತೆ ನೋಡಿಕೊಂಡು ಬೆಳೆ ಇಟ್ಟಿದ್ದಾನೆ. ಬಂಪರ್ ಫಸಲು ಬಂದಿದೆ. ಪ್ರಸ್ತುತ ಪ್ರತಿದಿನ 100 ಲೋಡ್ ಅಧಿಕ ಟೊಮ್ಯಾಟೊ ಆವಕ ಆಗುತ್ತಿದೆ. ಮುಳಬಾಗಿಲಿನ ವಡ್ಡಹಳ್ಳಿ ಮಾರುಕಟ್ಟೆಯಲ್ಲೂ ನಿತ್ಯ 4000 ಕ್ವಿಂಟಾಲ್‌ಗೂ ಅಧಿಕ ಆವಕ ಆಗುತ್ತಿದೆ.
ಜಿಲ್ಲೆಯಾದ್ಯಂತ ಬೆಳೆಯುವ ಟೊಮ್ಯಾಟೊಗೆ ನೆರೆ ರಾಜ್ಯಗಳೇ ಮಾರುಕಟ್ಟೆ. ಪ್ರಮುಖವಾಗಿ ಮಹಾರಾಷ್ಟ್ರ, ಒಡಿಶಾ, ಪಶ್ಚಿಮಬಂಗಾಳ, ಉತ್ತರಪ್ರದೇಶ ಇನ್ನಿತರ ಉತ್ತರ ಭಾರತದ ರಾಜ್ಯಗಳು ಹಾಗೂ ದಕ್ಷಿಣ ಭಾರತದಲ್ಲಿ ಪ್ರಮುಖವಾಗಿ ತಮಿಳುನಾಡು, ಆಂಧ್ರಪ್ರದೇಶ. ಇಲ್ಲಿನ ವ್ಯಾಪಾರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಟೊಮ್ಯಾಟೊ ಧಾರಣೆ ಗಗನಮುಖಿಯಾಗುತ್ತದೆ.
ಕುಸಿತಕ್ಕೆ ಕಾರಣ: ಜಿಲ್ಲೆಯಲ್ಲಿ ಸುಮಾರು 3000 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಟೊಮ್ಯಾಟೊ ಇಳುವರಿ ಬಂದಿದೆ. ಕೋಲಾರ ಎಪಿಎಂಸಿಗೆ ಪ್ರತಿದಿನ ಕನಿಷ್ಠ 14,000 ಕ್ವಿಂಟಾಲ್‌ನಿಂದ ಗರಿಷ್ಠ 16,000 ಕ್ವಿಂಟಾಲ್ ಟೊಮ್ಯಾಟೊ ಆವಕ ಆಗುತ್ತಿದೆ.
ಟೊಮ್ಯಾಟೊ ವಹಿವಾಟಿನಲ್ಲಿ ಮಹಾರಾಷ್ಟ್ರದ ನಾಸಿಕ್ ನಂ.1 ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ ಕಳೆದ ವರ್ಷ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಭಾರಿ ಮಳೆ ಸುರಿದು ಟೊಮ್ಯಾಟೊ ಬೆಳೆ ಹಾನಿಯಾಗಿತ್ತು. ಹೀಗಾಗಿ ಅಲ್ಲಿನ ವ್ಯಾಪಾರಸ್ಥರು ಇಲ್ಲಿನ ಮಾರುಕಟ್ಟೆಗೆ ಬಂದಿದ್ದರಿಂದ ಗುಣಮಟ್ಟದ ಧಾರಣೆ 15 ಕೆಜಿ ಬಾಕ್ಸ್ ಬೆಲೆ 635ರಿಂದ 650ರ ಆಸುಪಾಸಿನಲ್ಲಿತ್ತು. ಆದರೆ ಈ ವರ್ಷ ಅಂತಹ ವಾತಾವರಣ ಇಲ್ಲದೆ ಭರಪೂರ ಆವಕ ಆಗುತ್ತಿರುವುದರಿಂದ ಗುಣಮಟ್ಟದ ಟೊಮ್ಯಾಟೊ ಪ್ರತಿ ಕೆಜಿಗೆ 2 ರಿಂದ 4 ರೂ.ಗಳಿವೆ. ಹೀಗಾಗಿ ಅಲ್ಲೇ ಬೆಲೆ ಇಳಿದಿದೆ. ಮಹಾರಾಷ್ಟ್ರದಿಂದಲೂ ಮಧ್ಯಪ್ರದೇಶ ಇತರ ರಾಜ್ಯಗಳಿಗೆ ಟೊಮ್ಯಾಟೊ ಆವಕ ಆಗುತ್ತಿರುವುದರಿಂದ ಇಲ್ಲಿನ ಟೊಮ್ಯಾಟೊಗೆ ಹೆಚ್ಚಿನ ಬೇಡಿಕೆ ಇಲ್ಲದಿರುವುದು ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ವ್ಯಾಪಾರಸ್ಥರು.
ಗುಣಮಟ್ಟ ಕುಸಿತ: ಜಿಲ್ಲಾದ್ಯಂತ ವಾರದಿಂದ ಮಳೆಯಾಗುತ್ತಿದ್ದು, ಕೆಲ ತಳಿಯ ಟೊಮ್ಯಾಟೊ ನೀರು ಹೀರಿಕೊಂಡಿವೆ. ಕೊಯ್ಲಿನ ಕಡೇ ಹಂತದಲ್ಲಿರುವ ಟೊಮ್ಯಾಟೊ ಗುಣಮಟ್ಟವಿಲ್ಲ. ರೈತರ ತೋಟದಿಂದ ಎಪಿಎಂಸಿ ಪ್ರಾಂಗಣಕ್ಕೆ ಬಂದು ಅಲ್ಲಿಂದ ವ್ಯಾಪಾರಸ್ಥರ ಮೂಲಕ ಹೊರ ರಾಜ್ಯ ತಲುಪುವಷ್ಟರಲ್ಲಿ ಟೊಮ್ಯಾಟೊ ನೀರು ಬಿಟ್ಟುಕೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದ ಗುಣಮಟ್ಟದ ಟೊಮ್ಯಾಟೊಗಷ್ಟೇ ಬೇಡಿಕೆ ಇದೆ. ಎರಡ್ಮೂರು ದಿನಗಳಿಂದ ಕಳಪೆಯಾದ 2000 ಕ್ವಿಂಟಾಲ್‌ಗೂ ಅಧಿಕ ಟೊಮ್ಯಾಟೊ ಸಕಾಲದಲ್ಲಿ ಮಾರಾಟವಾಗದೆ ಉಳಿಯುತ್ತಿದೆ.
ಗ್ರಾಹಕನಿಗಿಲ್ಲ ಲಾಭ: ಎಪಿಎಂಸಿಯಲ್ಲಿ 15 ಕೆಜಿ ಬಾಕ್ಸ್ ಕನಿಷ್ಠ ಬೆಲೆ 40 ರೂ.ಗಳಿಂದ ಗರಿಷ್ಠ 180 ರೂ.ಗಳು. ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 12ರಿಂದ 20 ರೂ.ಗಳಿವೆ. ಬೆಲೆ ಕುಸಿತದ ಲಾಭ ಗ್ರಾಹಕನಿಗೆ ಮಾತ್ರ ಸಿಗುತ್ತಿಲ್ಲ.
ನೆರೆಯ ಮಹಾರಾಷ್ಟ್ರದಲ್ಲಿ ಟೊಮ್ಯಾಟೊ ಆವಕ ಆಗುತ್ತಿರುವುದರಿಂದ ಆ ಭಾಗದಿಂದ ಬೇಡಿಕೆ ಇಲ್ಲದಿರುವುದರಿಂದ ಸ್ಥಳೀಯ ಎಪಿಎಂಸಿಯಲ್ಲೂ ಧಾರಣೆ ಕುಸಿದಿದೆ. ಕಳೆದ ವರ್ಷ ಇದೇ ದಿನಕ್ಕೆ ಕೆಜಿಗೆ 43 ರೂ. ಇತ್ತು. ಈಗ 12 ರೂ.ಗೆ ಇಳಿದಿದೆ, ಮಳೆಯಿಂದಾಗಿ ಟೊಮ್ಯಾಟೊ ಗುಣಮಟ್ಟ ಕಳೆದುಕೊಳ್ಳುತ್ತಿರುವುದು ಬೆಲೆ ಕುಸಿತಕ್ಕೆ ಮತ್ತೊಂದು ಕಾರಣ. ಟಿ.ಎಸ್. ರವಿಕುಮಾರ್, ಕಾರ್ಯದರ್ಶಿ, ಎಪಿಎಂಸಿ, ಕೋಲಾರ ಉತ್ತಮ ಧಾರಣೆ ನಿರೀಕ್ಷೆಯಲ್ಲಿ ಎಕರೆಗೆ 3 ಲಕ್ಷ ರೂ. ವೆಚ್ಚ ಮಾಡಿ ಟೊಮ್ಯಾಟೊ ಬೆಳೆದರೆ ಈಗಿನ ಧಾರಣೆಗೆ 40ರಿಂದ 50,000 ರೂ ಕೈಗೆ ಸಿಗುತ್ತದೆ. ನಾಸಿಕ್, ಅನಂತಪುರ ಇನ್ನಿತರೆಡೆ ಯಥೇಚ್ಛವಾಗಿ ಟೊಮ್ಯಾಟೊ ಬೆಳೆದಿರುವುದರಿಂದ ಇಲ್ಲಿನ ಟೊಮ್ಯಾಟೊಗೆ ಬೆಲೆ ಇಲ್ಲ. ಊಜಿ ನೊಣದ ಹಾವಳಿ ಜಾಸ್ತಿ, ಮಳೆಯಿಂದ ಗುಣಮಟ್ಟ ಕಳೆದುಕೊಂಡಿದೆ. 8 ಎಕರೆಯಲ್ಲಿ ಟೊಮ್ಯಾಟೊ ಬೆಳೆದು ಇನ್ನೂ 5 ಎಕರೆಯಲ್ಲಿ ಫಸಲು ಇದೆ. ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದೇನೆ. ಅಂಬರೀಶ್, ಉರಟಿ ಅಗ್ರಹಾರ, ಕೋಲಾರ