

ಬೆಂಗಳೂರು: ರಾಜ್ಯದಲ್ಲಿ ಥಂಡಿ ವಾತಾವರಣ ಸೃಷ್ಠಿಯಾಗಿದ್ದು, ಬಹುತೇಕ ಜಿಲ್ಲೆಗಳಲ್ಲಿ ಮೋಡಗಳು ಮುಸುಕಿದ ಪರಿಣಾಮ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಸರಾಸರಿ 5-6 ಡಿಗ್ರಿ ಸೆಲ್ಸಿಯಸ್ ಕುಸಿತವಾಗಿದೆ. ಇದರಿಂದ ಬೆಳಗ್ಗೆ ಮತ್ತು ರಾತ್ರಿ ಅವಧಿಯಲ್ಲಿ ಜನರಿಗೆ ಮಳೆ ಜತೆಗೆ ಚಳಿ ಅನುಭವವಾಗುತ್ತಿದೆ.
ವಾರದಿಂದ ಕರಾವಳಿ, ಮಲೆನಾಡು, ದಕ್ಷಿಣ ಮತ್ತು ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಜೋರಾಗಿ ಮಳೆಯಾಗುತ್ತಿದೆ. ಗರಿಷ್ಠ ತಾಪಮಾನದಲ್ಲಿ ಬೆಂಗಳೂರು 5, ಕೊಡಗು 4, ಹಾಸನ 3, ಮೈಸೂರು, ಮಂಡ್ಯ, ಹಾಸನ ಮತ್ತು ಬೆಳಗಾವಿಯಲ್ಲಿ ತಲಾ 2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕುಸಿತವಾಗಿದೆ. ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿಯೂ 2-3 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗಿದೆ.
ಅರಬ್ಬಿ ಸಮುದ್ರದಿಂದ ರಾಜ್ಯದ ಕಡೆಗೆ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಚಳಿ ಅನುಭವ ಇದೆ. ಮಳೆಗಾಲದ ವೇಳೆ ಹವಾಮಾನದಲ್ಲಿ ಸಾಮಾನ್ಯವಾಗಿ ಇವೆಲ್ಲಾ ಏರುಪೇರು ಆಗುವುದು ಸಾಮಾನ್ಯ ಎಂದು ಹವಾಮಾನ ವೈಪರೀತ್ಯ ವಿಜ್ಞಾನಿ ಡಾ.ಎಂ.ಬಿ.ರಾಜೇಗೌಡ ಹೇಳಿದ್ದಾರೆ.
ಮಳೆ ಮುಂದುವರಿಕೆ: ರಾಜ್ಯದ ಹಲವೆಡೆ ಆರ್ಭಟಿಸುತ್ತಿರುವ ಮಳೆ ಮುಂದಿನ 5 ದಿನ ಮುಂದುವರಿಯಲಿದೆ. ಶುಕ್ರವಾರ ಭಾಗಮಂಡಲ 14 ಸೆಂಮೀ, ನಾಪೊಕ್ಲು 13 ಸೆಂಮೀ, ಬಬಲೇಶ್ವರ 13 ಸೆಂಮೀ, ಮಂಗಳೂರು 11 ಸೆಂಮೀ, ದೇವರಹಿಪ್ಪರಗಿ 10 ಸೆಂಮೀ ಮತ್ತು ಸುಬ್ರಹ್ಮಣ್ಯ 9 ಸೆಂಮೀ ಮಳೆ ಬಿದ್ದಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಗದಗ, ಧಾರವಾಡ, ಹಾವೇರಿ, ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ ಮತ್ತು ರಾಯಚೂರಿನಲ್ಲಿ ಆ.6ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಅಲ್ಲದೆ, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಆ.7ರಿಂದ ಆ.9ರವರೆಗೆ ಯೆಲ್ಲೋ ಅಲರ್ಟ್ ಇರಲಿದೆ. ಬೆಳಗಾವಿ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಮತ್ತು ಕೋಲಾರದಲ್ಲಿ ಮುಂದಿನ 24 ಗಂಟೆ ಯೆಲ್ಲೋ ಅಲರ್ಟ್ ಇರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.