

ಚಿಕ್ಕಮಗಳೂರು: ಈಶ ಫೌಂಡೇಷನ್‌ನಿಂದ ಆ.27ರಂದು ಜಿಲ್ಲಾ ಆಟದ ಮೈದಾನದಲ್ಲಿ ಗ್ರಾಮೀಣ ಆಟಗಳ ಬೃಹತ್ ಉತ್ಸವ ಆಯೋಜಿಸಲಾಗಿದೆ ಎಂದು ಈಶ ಗ್ರಾಮೋತ್ಸವ ರಾಜ್ಯ ಸಂಯೋಜಕ ಕೊಟ್ರೇಶ್ ತಿಳಿಸಿದರು.
15ನೇ ಗ್ರಾಮೋತ್ಸವ ಅಂಗವಾಗಿ ಕ್ರೀಡಾಕೂಟ ಆಯೋಜಿಸಲಾಗಿದ್ದು, ಕ್ಲಸ್ಟರ್, ವಿಭಾಗೀಯ ಹಾಗೂ ಅಂತಿಮ ಹೀಗೆ ಮೂರು ಹಂತಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಹಿಳೆಯರಿಗೆ ಥ್ರೋಬಾಲ್ ಹಾಗೂ ಪುರುಷರಿಗೆ ವಾಲಿಬಾಲ್ ಸ್ಪರ್ಧೆ ಆಯೋಜಿಸಲಾಗಿದೆ. ಗ್ರಾಪಂ ವ್ಯಾಪ್ತಿಯ ಸ್ಥಳೀಯರು ಕ್ರೀಡಾಕೂಟದಲ್ಲಿ ಭಾಗವಹಿಸಬಹುದು. ಆನ್‌ಲೈನ್ ವೆಬ್‌ಸೈಟ್: www.isha.co/sports ಮೂಲಕ ನೋಂದಣಿಯಾಗಬೇಕು ಎಂದು ಹೇಳಿದರು.
ಮೊದಲ ಹಂತದಲ್ಲಿ ವಾಲಿಬಾಲ್ ಸ್ಪರ್ಧೆ ವಿಜೇತರಿಗೆ ಪ್ರಥಮ ಬಹುಮಾನ 9 ಸಾವಿರ ರೂ., ದ್ವಿತೀಯ 6 ಸಾವಿರ, ತೃತೀಯ 3 ಸಾವಿರ ಹಾಗೂ ಚತುರ್ಥ 2 ಸಾವಿರ ರೂ. ಬಹುಮಾನ ನೀಡಲಾಗುವುದು. ಥ್ರೋಬಾಲ್ ಟೂರ್ನಿ ಪ್ರಥಮ 5 ಸಾವಿರ, ದ್ವಿತೀಯ 3 ಸಾವಿರ ಹಾಗೂ ತೃತೀಯ 2 ಸಾವಿರ, ಚತುರ್ಥ 1,500 ರೂ. ಬಹುಮಾನ ವಿತರಿಸಲಾಗುವುದು. ವಾಲಿಬಾಲ್ ಪಂದ್ಯದಲ್ಲಿ ಕನಿಷ್ಠ 14 ವರ್ಷ ದಾಟಿದವರು ಭಾಗವಹಿಸಬಹುದು. ತಂಡದಲ್ಲಿ 6 ಮಂದಿ ಹಾಗೂ ಒಬ್ಬ ಬದಲಿ ಆಟಗಾರನಿಗೆ ಅವಕಾಶ, ಥ್ರೋಬಾಲ್‌ನಲ್ಲಿ 7 ಮಂದಿ, ಬದಲಿ ಒಬ್ಬರಿಗೆ ಅವಕಾಶವಿದೆ ಎಂದು ಹೇಳಿದರು.
ಅಂತಿಮ ಪಂದ್ಯಾವಳಿ ಸೆ.23ರಂದು ತಮಿಳುನಾಡಿನ ಕೊಯಮತ್ತೂರಿನ ಈಶ ಯೋಗಕೇಂದ್ರದಲ್ಲಿ ನಡೆಯಲಿದೆ. ವಾಲಿಬಾಲ್ ವಿಜೇತ ತಂಡಕ್ಕೆ 5 ಲಕ್ಷ ರೂ. ಹಾಗೂ ಥ್ರೋಬಾಲ್ 2 ಲಕ್ಷ ರೂ. ಬಹುಮಾನ ನೀಡಲಾಗುವುದು. ಪಂದ್ಯಾವಳಿಯಲ್ಲಿ ಭಾಗವಹಿಸುವವರು ಗ್ರಾಮೀಣ ಭಾಗದವರಾಗಿರಬೇಕು. ಅಂತಾರಾಷ್ಟ್ರೀಯ, ರಾಜ್ಯಮಟ್ಟ, ವಿಶ್ವವಿದ್ಯಾಲಯ ಮಟ್ಟದಲ್ಲಿ ದಕ್ಷಿಣ ವಲಯಕ್ಕೆ ಆಯ್ಕೆಯಾಗಿರುವ ಹಾಗೂ ಸರ್ಕಾರಿ, ಖಾಸಗಿ ಕಂಪನಿ ತಂಡದ ಪರವಾಗಿ ಆಡಿದ ಆಟಗಾರರಿಗೆ ಅವಕಾಶವಿಲ್ಲ ಎಂದು ಮಾಹಿತಿ ನೀಡಿದರು. ಶಾಂತರಾಮ ಶೆಟ್ಟಿ, ಸಚ್ಚಿದಾನಂದ ಇದ್ದರು.