13 ಕಡೆ ಏಕಾಕಾಲಕ್ಕೆ ನಾಳೆ ಕರೊನಾ ಲಸಿಕೆ ವಿತರಣೆ ; ಎಲ್ಲ ತಾಲೂಕು ಕೇಂದ್ರಗಳಲ್ಲಿ ಸಿದ್ಧತೆ

14Tmk_Covid_Vaccine
Published on

ತುಮಕೂರು: ಸಂಕ್ರಾಂತಿ ಸಂಭ್ರಮದ ಸಂದರ್ಭದಲ್ಲೇ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಕರೊನಾ ನಿರೋಧಕ ಲಸಿಕೆ ವಿತರಣೆಗೆ ಕ್ಷಣಗಣನೆ ಆರಂಭವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಜ.16ರಂದು ಲಸಿಕೆ ಅಭಿಯಾನಕ್ಕೆ ಆನ್‌ಲೈನ್‌ನಲ್ಲಿ ಚಾಲನೆ ನೀಡಲಿದ್ದು, ಈ ಸಂದರ್ಭದಲ್ಲಿ ಜಿಲ್ಲೆಯ 13 ಕಡೆ ಏಕಾಕಾಲಕ್ಕೆ ಲಸಿಕೆ ವಿತರಣೆ ಕಾರ್ಯಕ್ರಮ ಆರಂಭವಾಗಲಿದೆ.  ಬುಧವಾರ ರಾತ್ರಿ 12000 ಡೋಸ್ ಕೋವಿಶೀಲ್ಡ್ ವ್ಯಾಕ್ಸಿನ್ ಬೆಂಗಳೂರಿನಿಂದ ಜಿಲ್ಲೆಗೆ ಬಂದಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಜ.16ರಿಂದ 13 ಕೇಂದ್ರಗಳಲ್ಲಿ ಲಸಿಕೆ ವಿತರಣೆ ಮಾಡಲಾಗುವುದು. ಮೊದಲ ಹಂತದಲ್ಲಿ 12 ಸಾವಿರ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲಿದ್ದಾರೆ.

13 ಕಡೆ ಲಸಿಕೆ ವಿತರಣೆ: ಜಿಲ್ಲೆಯಲ್ಲಿ 13 ಕಡೆ ಲಸಿಕೆ ವಿತರಣೆ ಮಾಡಲಾಗುವುದು. ಜಿಲ್ಲಾ ಆಸ್ಪತ್ರೆ, ಎಲ್ಲಾ ತಾಲೂಕು ಆಸ್ಪತ್ರೆಗಳು, ನಗರ ಆರೋಗ್ಯ ಕೇಂದ್ರ ಹಾಗೂ ಕ್ಯಾತಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ವಿತರಿಸಲಾಗುವುದು.

ಕೋವಿನ್ ಆ್ಯಪ್ ತಂತ್ರಾಂಶದ ಮೂಲಕ ಲಸಿಕೆ ವಿತರಣೆ, ಫಲಾನುಭವಿಗಳಿಗೆ ಸಂದೇಶ, ಲಸಿಕಾ ಮಾಹಿತಿ ನಮೂದಿಸುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಗೆ ಬಂದ ಕೋವಿಶೀಲ್ಡ್ ಲಸಿಕೆಯನ್ನು ಜಿಲ್ಲಾಸ್ಪತ್ರೆಯ ಶೀತಲಕೇಂದ್ರದಲ್ಲಿ ಶೇಖರಿಸಿಡಲಾಗಿದ್ದು, ಬಿಗಿ ಪೊಲೀಸ್ ಕಾವಲು ಹಾಕಲಾಗಿದೆ. ಲಸಿಕೆ ವಿತರಣೆ ಸಂದರ್ಭದಲ್ಲೂ ಎಲ್ಲೆಡೆ ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗುವುದು.

ಮೊದಲ ದಿನ 1300 ಮಂದಿಗೆ ಲಸಿಕೆ ! : ಶನಿವಾರ ಮೊದಲ ದಿನ 1300 ಮಂದಿಗೆ ಕರೊನಾ ಲಸಿಕೆ ವಿತರಣೆ ಮಾಡಲಾಗುವುದು. 13 ಕಡೆ ತಲಾ 100 ಮಂದಿಯಂತೆ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು. 1200-1300 ಮಂದಿ ಮೊದಲ ದಿನ ಲಸಿಕೆ ಪಡೆಯಲಿದ್ದಾರೆ.

ಕರೊನಾ ಲಸಿಕೆ ವಿತರಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. 13 ಕಡೆ ಲಸಿಕೆ ವಿತರಿಸಲಾಗುವುದು. ಮೊದಲ ದಿನ 1300 ಮಂದಿ ಲಸಿಕೆ ಪಡೆಯಲಿದ್ದು ಒಟ್ಟಾರೆ 12 ಸಾವಿರ ಮಂದಿ ಫಲಾನುಭವಿಗಳಿಗೆ ಲಸಿಕೆ ನೀಡಲಾಗುವುದು. ಡಾ.ನಾಗೇಂದ್ರಪ್ಪ ಜಿಲ್ಲಾ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net