

ಬೆಂಗಳೂರು: ಸತತ ಎರಡು ದಿನ ಟೊಮ್ಯಾಟೊ ಕಳ್ಳತನ ಮಾಡಿರುವ ಖದೀಮರು, ಆ ನಂತರ ತೋಟ ಖಾಲಿ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಲಕ್ಷ್ಮಿದೇವಿಪುರ ಗ್ರಾಮದಲ್ಲಿ ನಡೆದಿದೆ.
ತೋಟವು ಇದೇ ಗ್ರಾಮದ ಜಗದೀಶ್ ಎಂಬ ರೈತರಿಗೆ ಸೇರಿದ್ದು, ಜಗದೀಶ್ ಅವರು ಒಂದು ಎಕರೆ ಜಮೀನಿನಲ್ಲಿ ಟೊಮ್ಯಾಟೊ ಬೆಳೆದಿದ್ದರು. ತೋಟವು ಊರಿಂದ ೧.೫ ಕಿಮೀ ದೂರದಲ್ಲಿದ್ದರಿಂದ ಸುಮಾರು 80 ರಿಂದ 100 ಬಾಕ್ಸ್ ಟೊಮ್ಯಾಟೊವನ್ನು ಕಳ್ಳರು ಕಳ್ಳತನ ಮಾಡಿದ್ದಾರೆ.
ಒಂದು ಬಾಕ್ಸ್ನಲ್ಲಿ 22 ಕೆಜಿ ಟೊಮ್ಯಾಟೊ ಹಾಕಲಾಗುತ್ತಿದ್ದರಿಂದ ಕಳ್ಳರು, ಕಾಯಿ ಸಮೇತ ಟೊಮ್ಯಾಟೊ ಕಿತ್ತುಕೊಂಡು ಹೋಗಿದ್ದಾರೆ. ಬೆಳಗ್ಗೆ ವೇಳೆ ಬಂದು ತೋಟ ನೋಡಿಕೊಂಡು ಹೋಗಿದ್ದ ಕಳ್ಳರು ರಾತ್ರಿ ಬಂದು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.
ಟೊಮ್ಯಾಟೊಗೆ ಹೆಚ್ಚಿನ ಬೆಲೆ ಇರುವ ಕಾರಣ ಕಾಯಿ ಸಮೇತ ಕಳ್ಳತನ ಮಾಡಲಾಗಿದೆ. ರೈತ ಜಗದೀಶ್ ಇದುವರೆಗೆ ಒಂದು ಬಾರಿ ಮಾತ್ರ ಕಟಾವು ಮಾಡಿದ್ದರು ಎಂದು ತಿಳಿದು ಬಂದಿದೆ.