ಬೆಂಗಳೂರು-ಮೈಸೂರು ದಶಪಥ: ನಾಳೆಯಿಂದಲೇ ಟೋಲ್ ಕಲೆಕ್ಷನ್; ಪೊಲೀಸ್ ಭದ್ರತೆಯಲ್ಲಿ ಹಣ ಸಂಗ್ರಹಕ್ಕೆ ಸಜ್ಜು

Bangalore Mysore Expressway (1)
Published on

ರಾಮನಗರ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ನಿನ್ನೆಯಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡಿದ್ದು, ಅಲ್ಲಿ ನಾಳೆಯಿಂದಲೇ ಟೋಲ್ ಸಂಗ್ರಹ ಕೂಡ ಆರಂಭವಾಗಲಿದೆ. ಟೋಲ್​ ಸಂಗ್ರಹಕ್ಕೆ ವಿರೋಧ ಇರುವುದರಿಂದ ಮತ್ತು ನಾಳೆ ಪ್ರತಿಭಟನೆ ಆಗಲಿರುವ ಸಾಧ್ಯತೆ ಇರುವುದರಿಂದ ಟೋಲ್​ ಸಂಗ್ರಹಕ್ಕಾಗಿ ಪೊಲೀಸ್ ಬಂದೋಬಸ್ತ್​ ಕೂಡ ಕೈಗೊಳ್ಳಲಾಗಿದೆ.

ಈ ಹಿಂದೆಯೇ ಒಮ್ಮೆ ಟೋಲ್ ಸಂಗ್ರಹಕ್ಕೆ ಮುಂದಾಗಿದ್ದರೂ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೆ ಟೋಲ್​ ಸಂಗ್ರಹಿಸಬಾರದು ಎಂದು ಭಾರಿ ವಿರೋಧ ಉಂಟಾಗಿತ್ತು. ಹೀಗಾಗಿ ಸರ್ವಿಸ್ ರಸ್ತೆ ನಿರ್ಮಾಣಗೊಳ್ಳುವವರೆಗೂ ಟೋಲ್ ಸಂಗ್ರಹಿಸುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಟ್ವೀಟ್​ ಮಾಡಿ ಘೋಷಿಸಿದ್ದರು.

ಆದರೆ ಇದೀಗ ಮಾ. 14ರಿಂದಲೇ ಟೋಲ್ ಸಂಗ್ರಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದ್ದು, ಕಾಮಗಾರಿ ಪೂರ್ಣಗೊಳ್ಳದೆ ಟೋಲ್ ಸಂಗ್ರಹಿಸಬಾರದು ಎಂಬ ಕೂಗೆದ್ದಿದೆ. ನಾಳೆ ಟೋಲ್ ಸಂಗ್ರಹಕ್ಕೆ ಮುಂದಾದರೆ ಪ್ರತಿಭಟನೆ ನಡೆಸುವ ಕೂಗೂ ಕೇಳಿ ಬಂದಿದೆ. ನಾಳೆ ಟೋಲ್ ಸಂಗ್ರಹ ಮಾಡಿದರೆ ಪ್ರತಿಭಟನೆ ನಡೆಸುವುದಾಗಿ ಬಿಡದಿ ಬ್ಲಾಕ್ ಕಾಂಗ್ರೆಸ್​, ಕನ್ನಡಪರ ಹಾಗೂ ಇತರ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಇನ್ನೊಂದೆಡೆ ಬೆಳಗ್ಗೆ 8ರಿಂದಲೇ ಟೋಲ್ ಸಂಗ್ರಹಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಯಾರಿ ಮಾಡಿಕೊಂಡಿದೆ. ವಿರೋಧ ಉಂಟಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೂಡ ಮಾಡಿಕೊಳ್ಳಲಾಗಿದೆ. ಮತ್ತೊಂದೆಡೆ ಸರ್ವಿಸ್ ರಸ್ತೆ, ಆಸ್ಪತ್ರೆ, ಪೆಟ್ರೋಲ್ ಬಂಕ್​, ರೆಸ್ಟ್ ಏರಿಯಾ ಸೇರಿದಂತೆ ವಿವಿಧ ಸೌಕರ್ಯ ಒದಗಿಸಿದ ನಂತರ ಟೋಲ್ ಸಂಗ್ರಹ ಮಾಡುವಂತೆ ಹೋರಾಟಗಾರರು ಆಗ್ರಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net