

ನವದೆಹಲಿ: 09ನೇ ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಗೆದ್ದು ಬೀಗಿದ್ದು, ಪ್ರಶಸ್ತಿ ಗೆದ್ದ ಐದು ದಿನಗಳ ಬಳಿಕ ವಿಶ್ವ ವಿಜೇತರು ತಾಯ್ನಾಡಿಗೆ ಮರಳಿದ್ದಾರೆ. ಬಾರ್ಬಡೋಸ್ನಿಂದ ಮರಳಿದ ಬಳಿಕ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಆಟಗಾರರು ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಹಲವು ವಿಚಾರಗಳ ಕುರಿತು ಅವರು ಮಾಹಿತಿ ಹಂಚಿಕೊಂಡಿದ್ದು, ವಿರಾಟ್ ಕೊಹ್ಲಿ ಆಡಿರುವ ಮಾತುಗಳು ವೈರಲ್ ಆಗುತ್ತಿವೆ.
17ನೇ ಆವೃತ್ತಿಯ ಐಪಿಎಲ್ನಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಆರೆಂಜ್ ಕ್ಯಾಪನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಹಲವು ದಾಖಲೆಗಳನ್ನು ಬರೆದಿದ್ದ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ನಲ್ಲೂ ಟಾಪ್ ರನ್ ಸ್ಕೋರರ್ ಆಗಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ವಿರಾಟ್ ನಿರೀಕ್ಷೆಯನ್ನು ಹುಸಿ ಮಾಡಿದ್ದರು ಮತ್ತು ಕೆಲವೇ ಕೆಲವು ಪಂದ್ಯಗಳಲ್ಲಿ ರನ್ ಗಳಿಸಿದ್ದರು. ಕಳಪೆ ಫಾರ್ಮ್ ಹೊರತಾಗಿಯೂ ವಿರಾಟ್ ಅವರ ಮೇಲೆ ನಾಯಕ ರೋಹಿತ್ ಶರ್ಮಾ ಇಟ್ಟ ನಂಬಿಕೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದು, ಕ್ರೀಡಾ ವಲಯದಲ್ಲಿ ಈ ವಿಚಾರ ಸಖತ್ ಸೌಂಡ್ ಮಾಡುತ್ತಿದೆ.
ಈ ಕುರಿತು ಮಾತನಾಡಿರುವ ವಿರಾಟ್, ಮೊದಲನೆಯದಾಗಿ ನಮ್ಮನ್ನು ಇಲ್ಲಿಗೆ ಆಹ್ವಾನಿಸಿದ್ದಕ್ಕೆ ಧನ್ಯವಾದಗಳು. ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ನಾನು ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ನಾನು ಕೋಚ್ ಅವರ ಬಳಿ ಮಾತನಾಡುವಾಗಲೂ ನಾನು ಈ ಬಾರಿ ಸಿಕ್ಕ ಅವಕಾಶವನ್ನು ಬಳಸಿಕೊಂಡಿಲ್ಲ. ನ್ಯಾಯ ಒದಗಿಸಿಲ್ಲ ಎಂದು ಹೇಳುತ್ತಿದ್ದೆ. ಅವರ ಸಮಯ ಬಂದಾಗ ನೀನು ಏನು ಎಂಬುದು ನಿರೂಪಿಸುತ್ತೀಯ ಎಂದು ವಿಶ್ವಾಸ ತುಂಬಿದ್ದರು.
ರೋಹಿತ್ನೊಂದಿಗೆ ಬ್ಯಾಟಿಂಗ್ ಮಾಡಲು ತೆರಳುವಾಗ ನನ್ನಲ್ಲಿ ಆ ವಿಶ್ವಾಸವಿಲ್ಲ ಎಂದು ಹೇಳುತ್ತಿದ್ದೆ. ಆದರೆ, ಮೊದಲ ಓವರ್ನಲ್ಲೇ ಮೂರು ಬೌಂಡರಿ ಗಳಿಸಿದಾಗ ನನ್ನಿಂದ ನಂಬಲು ಸಾಧ್ಯವಾಗಲಿಲ್ಲ. ಇದಾದ ಬಳಿಕ ನಾವು ಮೂರು ವಿಕೆಟ್ಗಳನ್ನು ಬೇಗನೆ ಕಳೆದುಕೊಂಡೆವು. ಬಳಿಕ ತಂಡದ ಪರ ಉತ್ತಮ ಪ್ರದರ್ಶನ ನೀಡುವುದು ನನ್ನ ಏಕೈಕ ಗುರಿಯಾಗಿತ್ತು. ನಾನು ಪರಿಸ್ಥಿತಿಗೆ ತಕ್ಕಂತೆ ಆಡಿದೆ ಎಂದು ಭಾವಿಸುತ್ತೇನೆ. ಕೆಲವು ಘಟನೆಗಳು ಸಂಭವಿಸಿದಾಗ ಭಾವನೆಗಳನ್ನು ವ್ಯಕ್ತಪಡಿಸಲು ಕಷ್ಟವಾಗುತ್ತದೆ ಎಂದು ವಿರಾಟ್ ಕೊಹ್ಲಿ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡುವ ವೇಳೆ ಹೇಳಿದ್ದಾರೆ.