

Train : ಹೆಚ್ಚಿನ ಜನರು ಪ್ರಯಾಣಕ್ಕಾಗಿ ರೈಲ್ವೆಯನ್ನು ಅವಲಂಬಿಸಿರುತ್ತಾರೆ. ಅದಕ್ಕೆ ಕಾರಣ ರೈಲು ಪ್ರಯಾಣ ತುಂಬಾ ಅಗ್ಗ. ಅಲ್ಲದೆ, ಸುರಕ್ಷತೆ ದೃಷ್ಟಿಯಿಂದಲೂ ಉತ್ತಮ. ಹೀಗಾಗಿ ಅನೇಕ ಮಂದಿ ರೈಲುಗಳಲ್ಲಿ ಪ್ರಯಾಣ ಬೆಳೆಸುತ್ತಾರೆ. ಇನ್ನು ರೈಲುಗಳಲ್ಲಿ ಅನೇಕ ವಿಚಿತ್ರ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಇದೀಗ ಅದೇ ರೀತಿ, ಚಲಿಸುವ ರೈಲೊಂದರಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ವಿಡಿಯೋದಲ್ಲಿ ರೈಲಿನ ಹೆಸರಾಗಲಿ ಅಥವಾ ಅದರ ಪ್ರಯಾಣದ ಮಾಹಿತಿಯಾಗಲಿ ಬಹಿರಂಗಪಡಿಸಿಲ್ಲ.
ಚಲಿಸುತ್ತಿರುವ ರೈಲಿನಲ್ಲಿ ಬೋಗಿಯನ್ನು ಪರಿಶೀಲಿಸುತ್ತಿದ್ದ ಟಿಟಿಇ ಶೌಚಾಲಯವನ್ನು ಗಮನಿಸುತ್ತಾರೆ. ಆದರೆ, ಶೌಚಾಲಯವು ಆರು ಗಂಟೆಗಳ ಕಾಲ ಒಳಗಿನಿಂದ ಲಾಕ್ ಆಗಿತ್ತು. ಅನುಮಾನಗೊಂಡ ಟಿಟಿಇ, ಬಾಗಿಲು ತಟ್ಟಿದಾಗ ಒಳಗಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಒಳಗೆ ಯಾರೋ ಇದ್ದಾರೆ ಎಂದು ಟಿಟಿಇ ಮತ್ತು ಇತರೆ ಪ್ರಯಾಣಿಕರಿಗೆ ಖಚಿತವಾದಾಗ, ಬಲವಂತವಾಗಿ ಬಾಗಿಲು ತೆರೆಯಲು ಪ್ರಯತ್ನಿಸಿದರು. ಕೊನೆಗೆ ಶೌಚಾಲಯವನ್ನು ತೆರೆದು ಒಳಗೆ ನೋಡಿದಾಗ ಪ್ರಯಾಣಿಕರು ಒಂದು ಕ್ಷಣ ಆಶ್ಚರ್ಯಚಕಿತರಾದರು. ಆ ಶೌಚಾಲಯದಲ್ಲಿ ಅಂಥದ್ದೇನು ನಡೆಯಿತು ಅನ್ನೋದನ್ನು ತಿಳಿಯಲು ಮುಂದೆ ಓದಿ.
ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ, ಪ್ರಯಾಣಿಕರು ಶೌಚಾಲಯದ ಮುಂದೆ ಆತಂಕದಿಂದ ನಿಂತಿರುವುದನ್ನು ಕಾಣಬಹುದು. ಕೆಲವರು ನಿರಂತರವಾಗಿ ಬಾಗಿಲು ಬಡಿಯುತ್ತಿದ್ದಾರೆ. ಕೆಲ ಪ್ರಯಾಣಿಕರು ಏನಾಗಬಹುದು ಎಂಬ ಆತಂಕದಿಂದಲೇ ಬಾಗಿಲಿನ ಕಡೆ ಮುಖ ಮಾಡಿ ನಿಂತಿದ್ದಾರೆ. ಬಹುಶಃ ಶೌಚಾಲಯದೊಳಗೆ ಯಾರೋ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೆಲವರು ಆತಂಕಗೊಂಡಿದ್ದರು. ಬಹಳ ಸಮಯದ ನಂತರವೂ ಬಾಗಿಲು ತೆರೆಯಲು ಸಾಧ್ಯವಾಗದಿದ್ದಾಗ, ಹೆಚ್ಚಿನ ಸಿಬ್ಬಂದಿ ಬಂದು ಬಲವಂತವಾಗಿ ಬಾಗಿಲು ತೆರೆದರು. ಬಾಗಿಲು ತೆರೆದಾಗ ಎಲ್ಲರೂ ಒಂದು ಕ್ಷಣ ಆಘಾತಕ್ಕೊಳಗಾದರು.
ಪ್ರಯಾಣಿಕರು ಶೌಚಾಲಯದಲ್ಲಿ ವ್ಯಕ್ತಿಯೊಬ್ಬ ಮದ್ಯಪಾನ ಮಾಡುವುದನ್ನು ನೋಡಿದರು. ಯಾರಾದರೂ ತಪಾಸಣೆಗೆ ಬಂದರೆ ಸಿಕ್ಕಿಬೀಳಬಾರದು ಅಂತ ಶೌಚಾಲಯದ ಒಳಗೆ ಹೋಗಿ ಬಾಗಿಲು ಮುಚ್ಚಿದೆ ಎಂದು ಆ ವ್ಯಕ್ತಿ ಪ್ರಯಾಣಿಕರಿಗೆ ತಿಳಿಸಿದ್ದಾನೆ.
ಇದೀಗ ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಶೌಚಾಲಯದೊಳಗೆ ಯಾರೋ ಇಬ್ಬರು ಜನರಿರುತ್ತಾರೆ ಎಂದು ಭಾವಿಸಿದ್ದೆವು. ಆದರೆ, ಇಲ್ಲಿ ನೋಡಿದರೆ, ಕೇವಲ ಒಬ್ಬ ವ್ಯಕ್ತಿ ಇದಾನೆ ಎಂದು ಕೆಲವರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇದು ಗಂಭೀರ ಸಮಸ್ಯೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)