

ನವದೆಹಲಿ: ಇಂದು (16) ದೆಹಲಿಯ ಮಾಣೆಕ್ಷಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಅವರು ಮಾತನಾಡಿದ್ದು, ಇಂದಿನ ಯುದ್ಧವನ್ನು ನಾಳಿನ ತಂತ್ರಜ್ಞಾನದೊಂದಿಗೆ ಹೋರಾಡಬೇಕಾಗಿದೆ ಮತ್ತು ಹಳೆಯ ವ್ಯವಸ್ಥೆಗಳೊಂದಿಗೆ ಅಲ್ಲ ಎಂದು ಹೇಳಿದರು.
ಭಾರತೀಯ ಸಶಸ್ತ್ರ ಪಡೆಗಳು ಮೇ 7 ರಂದು ಪ್ರಾರಂಭಿಸಿದ ಆಪರೇಷನ್ ಸಿಂಧೂರ್ ಅನ್ನು ಉಲ್ಲೇಖಿಸುತ್ತಾ ಮಾತನಾಡಿದ ಜನರಲ್ ಚೌಹಾಣ್, ರಕ್ಷಣಾ ಸನ್ನದ್ಧತೆಯನ್ನು ಹೆಚ್ಚಿಸುವಲ್ಲಿ ವಿಶೇಷವಾಗಿ ಮಾನವರಹಿತ ವೈಮಾನಿಕ ಬೆದರಿಕೆಗಳನ್ನು ಎದುರಿಸುವಲ್ಲಿ ಸ್ಥಳೀಯ ತಂತ್ರಜ್ಞಾನಗಳ ನಿರ್ಣಾಯಕ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ಈ ಕಾರ್ಯಾಚರಣೆಯು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಮಾನವರಹಿತ ವೈಮಾನಿಕ ವ್ಯವಸ್ಥೆಗಳು ತಂತ್ರಜ್ಞಾನಗಳ ಮೌಲ್ಯವನ್ನು ಪ್ರದರ್ಶಿಸುತ್ತದೆ ಎಂದು ಗಮನಸೆಳೆದರು.
ನಿನ್ನೆಯ ಶಸ್ತ್ರಾಸ್ತ್ರಗಳನ್ನಿಟ್ಟುಕೊಂಡು ಇಂದಿನ ಯುದ್ಧವನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ. ನಾವು ಗೆಲ್ಲಬೇಕೆಂದರೆ ನಾಳಿನ ತಂತ್ರಜ್ಞಾನದ ಶಸ್ತ್ರಾಸ್ತ್ರಗಳು ನಮ್ಮ ಬಳಿ ಇರಬೇಕು ಎಂದು ಸೇನಾಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆ.
ಮೇ 10 ರಂದು ಪಾಕಿಸ್ತಾನವು ಡ್ರೋನ್‌ಗಳು ಮತ್ತು ಅಡ್ಡಾದಿಡ್ಡಿ ಯುದ್ಧಸಾಮಗ್ರಿಗಳನ್ನು ನಿಯೋಜಿಸಿದ್ದ ಘಟನೆಯನ್ನು ಉಲ್ಲೇಖಿಸಿದ ಅವರು, ಅವುಗಳಲ್ಲಿ ಯಾವುದೂ ಭಾರತೀಯ ಮಿಲಿಟರಿ ಅಥವಾ ನಾಗರಿಕ ಮೂಲಸೌಕರ್ಯಕ್ಕೆ ಹಾನಿ ಮಾಡಿಲ್ಲ. ಹೆಚ್ಚಿನ ಡ್ರೋನ್‌ಗಳನ್ನು ತಟಸ್ಥಗೊಳಿಸಲಾಯಿತು, ಕೆಲವನ್ನು ಬಹುತೇಕ ಹಾಗೆಯೇ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ. ಆದರೆ ಭವಿಷ್ಯದಲ್ಲಿ ಎದುರಾಗಬಹುದಾದ ಯಾವುದೇ ಸವಾಲುಗಳನ್ನು ಎದುರಿಸಲು ಮುಂದಿನ ತಲೆಮಾರಿನ ಶಸ್ತ್ರಾಸ್ತ್ರಗಳನ್ನು ಹೊಂದುವುದು ಸದ್ಯದ ಕೆಲಸವಾಗಿದೆ ಎಂದಿದ್ದಾರೆ.
(ಏಜೆನ್ಸೀಸ್)
ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳ ಮೇಲೆ ಅತಿಯಾದ ಅವಲಂಬನೆ ನಮ್ಮ ಯುದ್ಧದ ಸಿದ್ದತೆ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತಿದೆ. ಇತ್ತೀಚಿನ ಯುದ್ಧದಲ್ಲಿ ಪಾಕಿಸ್ತಾನವು ಶಸ್ತ್ರಸ್ತ್ರವಿಲ್ಲದ ಡೋನ್‌ಗಳು ಮತ್ತು ಗಡಿಯುದ್ದಕ್ಕೂ ಶಸ್ತ್ರಾಸ್ತ್ರಗಳನ್ನು ತುಂಬಿದ ವಾಹನಗಳನ್ನು ನಿಯೋಜಿಸಿತ್ತು. ಇವೆಲ್ಲವನ್ನೂ ಭಾರತೀಯ ಸೇನೆ ನಿಷ್ಕ್ರಿಯಗೊಳಿಸಿದೆ. ಹೀಗಾಗಿ ಪಾಕಿಸ್ತಾನದ ದಾಳಿಯು ಭಾರತಕ್ಕೆ ಯಾವುದೇ ಹಾನಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿನ ಯುದ್ಧಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಶಸ್ತ್ರಾಸ್ತ್ರಗಳು ಅತ್ಯವಶ್ಯಕವಾಗಿವೆ. ನಿನ್ನೆಯ ಅಸ್ತ್ರಗಳು ಇಂದಿನ ಯುದ್ದಕ್ಕೆ ಎಂದಿಗೂ ಸರಿಸಮಾನವಲ್ಲ. ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಅವಲಂಬಿಸುವ ಬದಲು ಭಾರತವು ಸ್ವದೇಶಿ ನಿರ್ಮಿತ ಶಸ್ತ್ರಗಳನ್ನು ಅಭಿವೃದ್ಧಿಪಡಿಸುವುದು ಅತಿ ಮುಖ್ಯ ಎಂದು ಅನಿಲ್ ಚೌಹಾಣ್ ಹೇಳಿದ್ದಾರೆ.