

ಬೆಂಗಳೂರು ನನ್ನ ಪ್ರೀತಿ ಸಂಪೂರ್ಣ ಭಾರತದ್ದಾಗಿದೆ. ನಾನು ಕನ್ನಡಿಗ ಹೌದು. ಭಾರತೀಯನಾಗಿ ಕನ್ನಡಿಗನಾಗಿದ್ದೇನೆ. ನನ್ನೆಲ್ಲ ಬರವಣಿಗೆ, ಕಾದಂಬರಿಗಳು ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಇಡೀ ಭಾರತದ ಕತೆಗಳಾಗಿವೆ ಎಂದು ಹಿರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಎಸ್.ಎಲ್. ಭೈರಪ್ಪ ರಚಿಸಿರುವ ‘ಪರ್ವ’ ಕಾದಂಬರಿಯನ್ನು ನಾಟಕಕಾರ ಪ್ರಕಾಶ್ ಬೆಳವಾಡಿ ಅವರು ಇಂಗ್ಲಿಷ್‌ಗೆ ಭಾಷಾಂತರ ಮಾಡಿ ನಾಟಕ ಪ್ರದರ್ಶಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ವೈಯಾಲಿಕಾವಲ್‌ನಲ್ಲಿನ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.
ವಿದೇಶ ಪ್ರವಾಸ ಕೈಗೊಳ್ಳುವ ವೇಳೆ ವಿಮಾನವು ದೇಶದ ಗಡಿ ದಾಟುತ್ತಿದ್ದಂತೆ ಮನಸ್ಸಿಗೆ ದುಃಖ, ಖಿನ್ನತೆಯಾಗುತ್ತದೆ. ಮತ್ತೆ ಹಿಂತಿರುಗಿ ಭಾರತದ ಗಡಿ ಮುಟ್ಟುತ್ತಿದ್ದಂತೆ ಖುಷಿಯಾಗುತ್ತದೆ. ಇದು ನನ್ನ ಪ್ರೀತಿಯ ಭಾರತಕ್ಕಿರುವ ಪ್ರೀತಿಯಾಗಿದೆ ಎಂದು ವಿಶ್ಲೇಷಿಸಿದರು.
ಲೇಖಕನಾದವನು ಸೀಮಿತಗೊಳ್ಳದೆ ವಿಸ್ತಾರವಾಗಬೇಕು. ತನ್ನ ಅನುಭವವನ್ನು ಹೆಚ್ಚಿಕೊಳ್ಳುತ್ತಾ ಸಾಗಿದಾಗ ಅವನ ಬರವಣಿಗೆ ಕೂಡ ಉನ್ನತವಾಗಿ ಸಾಗುತ್ತದೆ. ದೇಶದ ಹಳ್ಳಿಗಳಲ್ಲಿ ಸಂಚರಿಸಿದಾಗ ನಿಜವಾದ ದೇಶದ ರಾಜಕೀಯ ಪರಿಸ್ಥಿತಿಗಳು ತಿಳಿಯಲಿವೆ. ಆದರೆ, ಇಂದಿನ ಸಾಹಿತಿಗಳು, ಕಲಾವಿದರು ಹೋಟೆಲ್‌ಳಲ್ಲಿಯೇ ವಾಸ್ತವ್ಯ ಹೂಡುತ್ತಿರುವುದರಿಂದ ನೈಜ ಜೀವನ ತಿಳಿಯುವುದಿಲ್ಲ ಎಂದು ಹೇಳಿದರು.