ಇಂದು ವಿಶ್ವ ಭೂ ದಿನ; ಪದ ಕುಸಿಯೆ ನೆಲವಿರದು!

dfgdfgdghset
Published on

|ಸತೀಶ್ ಕಂದಗಲ್​ಪುರ ಬೆಂಗಳೂರು

ಮನುಷ್ಯನ ಅತಿಯಾಸೆ, ಅಹಂಭಾವ, ಅತಿ ಬುದ್ಧಿವಂತಿಕೆಯಿಂದಾಗಿ ಭೂಮಿ ಬಳಲುತ್ತಿದೆ. ಬೃಹತ್ ಅಣೆಕಟ್ಟುಗಳು, ನಿರಂತರ ಗಣಿಗಾರಿಕೆ, ಅರಣ್ಯನಾಶ, ವಾಯುಮಾಲಿನ್ಯ, ಶಬ್ದ ಮಾಲಿನ್ಯದಿಂದ ಪ್ರಕೃತಿ ನಾಶವಾಗುತ್ತಿದೆ. ಕೋಟ್ಯಂತರ ವಾಹನಗಳು ಮತ್ತು ಲಕ್ಷಾಂತರ ಕೈಗಾರಿಕೆಗಳ ವಿಷಾನಿಲ ಮತ್ತು ವಿಷ ಪದಾರ್ಥಗಳಿಂದ ಜಲಮಾಲಿನ್ಯವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್​ಚಾಲಿತ ವಾಹನಗಳಿಂದ ವಿಷಾನಿಲಗಳು ಹೆಚ್ಚುತ್ತಿವೆ. ಅತಿಯಾದ ಪ್ಲಾಸ್ಟಿಕ್ ಬಳಕೆ, ರಾಸಾಯನಿಕ ಗೊಬ್ಬರ, ಅನೇಕ ರೀತಿಯ ಪರಿಸರ ಮಾಲಿನ್ಯದಿಂದ ಜಾಗತಿಕ ತಾಪಮಾನದಲ್ಲಿ ಏರಿಕೆಯಾಗಿದೆ. ದೇಶಗಳ ನಡುವೆ ವೈಷಮ್ಯದಿಂದಾಗಿ ನಡೆಯುವ ಯುದ್ಧಗಳೂ ಪರಿಸ್ಥಿತಿಯನ್ನು ಇನಷ್ಟು ಹದಗೆಡಿಸಿವೆ.

ಜೀವ ಸಂಕುಲವನ್ನು ಹೊಂದಿರುವ ಏಕೈಕ ಗ್ರಹವಾಗಿರುವ ಭೂಮಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅನಿವಾರ್ಯ. ಭೂಮಿಯ ಕೊಡುಗೆಯನ್ನು ಸ್ಮರಿಸಲೆಂದೇ ಏ.22ನ್ನು ‘ವಿಶ್ವ ಭೂ ದಿನ’ ಎಂದು ಆಚರಿಸಲಾಗುತ್ತದೆ.

ಪರಿಸರ ರಕ್ಷಣೆಗಾಗಿ ಅನೇಕ ಪರಿಹಾರ ಕ್ರಮಗಳನ್ನು ಚಿಂತಿಸಲು, ಜಾಗೃತಿ ಮೂಡಿಸಲು ವಿಶ್ವ ಭೂಮಿ ದಿನದ ಪರಿಕಲ್ಪನೆ ಬಂತು. 1970ರಲ್ಲಿ ಮೊದಲು ಪ್ರಾರಂಭವಾದ ಭೂಮಿ ದಿನದ ಆಚರಣೆಯು ಈಗ 193 ರಾಷ್ಟಗಳಿಗೆ ವಿಸ್ತರಿಸಿದೆ. ನಮ್ಮ ದೇಶದಲ್ಲಿ ಭೂಮಿಯನ್ನು ಭೂದೇವಿ, ಭೂತಾಯಿ ಎಂದೆಲ್ಲ ಕರೆದು ಮಾತೃದೇವತೆಯ ರೂಪದಲ್ಲಿ ಆರಾಧಿಸುವ ಪರಂಪರೆ ಇದೆ.

ಮನುಷ್ಯನ ಜ್ಞಾನ ಬೆಳೆದಂತೆಲ್ಲ, ತಂತ್ರಜ್ಞಾನದ ನೆರವಿನಿಂದ ಭೂಮಿಯಿಂದಾಚೆಗೆ ಬೇರೆ ಗ್ರಹದಲ್ಲಿ ಬದುಕಲು ಯೋಗ್ಯವಾದ ತಾಣವಿದೆಯೇ ಎಂಬುದನ್ನು ಅನ್ವೇಷಿಸುತ್ತಲೇ ಇದ್ದಾನೆ. ಆದರೆ, ಇಲ್ಲಿಯ ತನಕ ಭೂಮಿಯಷ್ಟು ಹಿತವಾದ ಜಾಗ ಸಿಕ್ಕಿಲ್ಲ. ಹೀಗಿದ್ದರೂ, ನಮ್ಮ ಬದುಕಿಗೆ ಆಸರೆಯಾದ ಭೂಮಿಯನ್ನು ಎಷ್ಟರಮಟ್ಟಿಗೆ ಸರಿಯಾಗಿ ಕಾಪಾಡಿಕೊಳ್ಳುತ್ತಿದ್ದೇವೆ ಎಂದು ಯೋಚಿಸಿದರೆ ಬೇಸರ ಖಂಡಿತ. ಮಾಲಿನ್ಯ, ಏರುತ್ತಿರುವ ಜಾಗತಿಕ ತಾಪಮಾನ, ಪರಿಸರ ನಾಶ ಎಲ್ಲವೂ ಸೇರಿ ಭೂಮಿಯನ್ನು ನಿರಂತರವಾಗಿ ಹದಗೆಡಿಸುತ್ತಲೇ ಇವೆ. ಈ ಕುರಿತು ಜಾಗೃತಿ ಮೂಡಿಸಲೆಂದು ಶುರುವಾದ ಪರಿಕಲ್ಪನೆಯೇ ವಿಶ್ವ ಭೂ ದಿನವಾಗಿದೆ. ಭೂಮಿಯ ಮೇಲೆ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಗೂ ಭೂಮಿಯ ಪ್ರಾಮುಖ್ಯತೆ ಮತ್ತು ಅದನ್ನು ಕಾಪಾಡುವಲ್ಲಿ ನಿಭಾಯಿಸಬೇಕಿರುವ ಹೊಣೆಗಾರಿಕೆ ತಿಳಿಸಬೇಕಿದೆ. ಮುಂದಿನ ಪೀಳಿಗೆಗೆ ಭೂಮಿಯನ್ನು ಸುರಕ್ಷಿತವಾಗಿ ಉಳಿಸುವ ವಿಚಾರಗಳು ಮುನ್ನೆಲೆಗೆ ಬರಬೇಕಿದೆ. 1990ರ ಹೊತ್ತಿನಲ್ಲಿ ಒಂದು ಪರಿಸರ ಆಂದೋಲನವಾಗಿ ರೂಪುಗೊಂಡ ಭೂ ದಿನಾಚರಣೆ ಇಂದು ಬಹುತೇಕ ರಾಷ್ಟ್ರಗಳಲ್ಲಿ ಪರಿಸರಪರ ಚಿಂತನೆಯನ್ನು ಬಿತ್ತುವ ಕಾರ್ಯಕ್ರಮವಾಗಿ ರೂಪಾಂತರಗೊಂಡಿದೆ.

ಭೂ ಸಂರಕ್ಷಣೆ ಪ್ರತಿಜ್ಞೆ:

ಇತ್ತೀಚೆಗೆ ಕೋವಿಡ್ ಸೇರಿ ಅನೇಕ ಸಾಂಕ್ರಾಮಿಕ ರೋಗಗಳು ಜಾಗತಿಕವಾಗಿ ಮನುಷ್ಯನನ್ನು ಕಾಡುತ್ತಿವೆ. ಈ ಕಾರಣದಿಂದಾಗಿ ನಮ್ಮಸುತ್ತಲಿನ ಮಣ್ಣು, ನೀರು ಮತ್ತು ಗಾಳಿಯನ್ನು ಮಾಲಿನ್ಯದಿಂದ ಕಾಪಾಡಬೇಕಿದೆ. ಆ ಮೂಲಕ ಭೂಮಿಯ ಸಂರಕ್ಷಣೆ ಮಾಡಬೇಕಿದೆ. ಚಿಕ್ಕ ಮಕ್ಕಳಿಗೆ, ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಹಳ್ಳಿ ಮತ್ತು ನಗರದ ಬಡಾವಣೆಗೊಬ್ಬರು ಭೂ ಸಂರಕ್ಷಣೆ ಮಾಡುವ ಕುರಿತು ಪ್ರತಿಜ್ಞೆ ಮಾಡಬೇಕು.

| ಎನ್.ಬಿ. ಪ್ರಕಾಶ್ ಜಿಕೆವಿಕೆ ಡೀನ್

ಎಲ್ಲರ ಕೊಡುಗೆ ಅಗತ್ಯ: 

ವಿಶ್ವ ಭೂ ದಿನ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಗೆ ಮೀಸಲಾದ ದಿನಾಚರಣೆಯಲ್ಲ. ಈ ಭೂಮಿಯನ್ನು ಹಾಳುಗೆಡವಲು ಪ್ರತ್ಯಕ್ಷ ಅಥವಾ ಪರೋಕ್ಷ ಕಾರಣವಾಗಿರುವ ಪ್ರತಿಯೊಬ್ಬರೂ ಇದರ ಮಹತ್ವವನ್ನು ಅರಿತು ಭೂ ಸಂರಕ್ಷಣೆ ಕಾರ್ಯ ಮಾಡಬೇಕಿದೆ. ನಮ್ಮ ಸುತ್ತಲೂ ಭೂಮಿಗೆ ಮಾರಕವಾಗುವಂತಹ ಚಟುವಟಿಕೆಗಳು ನಡೆಯುತ್ತಿದ್ದು, ಅವುಗಳನ್ನು ನಿಲ್ಲಿಸಲು ಪ್ರಯತ್ನಿಸಬೇಕು. ಭೂಮಿಗೆ ಹಾನಿ ಉಂಟುಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡವರಿಗೆ ತಿಳಿವಳಿಕೆ ಮೂಡಿಸುವುದು ಅಗತ್ಯವಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಭೂಮಂಡಲಕ್ಕೆ ಮಾರಕವಾಗಿರುವ ಸಂಗತಿಗಳನ್ನು ತಗ್ಗಿಸುವ ಬಗ್ಗೆ ಜಾಗೃತಿ ಮೂಡಿಸುತ್ತ ವರ್ಷವಿಡೀ ಭೂ ದಿನದ ಉದ್ದೇಶವನ್ನು ಸಾಕಾರಗೊಳಿಸಬೇಕಾದುದು ಸದ್ಯದ ತುರ್ತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net