ಇಂದು ವಿಶ್ವ ತೆಂಗು ದಿನ: ತೆಂಗಿನ ಗತವೈಭವ ಮರಳಲಿ

ವಿಜಯವಾಣಿ-8
Published on

| ಸೋರಲಮಾವು ಶ್ರೀಹರ್ಷ, ತುಮಕೂರು

ಕೊಬ್ಬರಿ ಬೆಲೆ ಸತತ ಕುಸಿತ ಹಾಗೂ ಹವಾಮಾನದ ವೈಪರೀತ್ಯದಿಂದ ಕರ್ನಾಟಕದ 17 ಜಿಲ್ಲೆಯ 134 ತಾಲೂಕುಗಳಲ್ಲಿ ತೆಂಗು ಬೆಳೆಗಾರರ ಬದುಕು ಬೀದಿಗೆ ಬಿದ್ದಿದೆ. ‘ಕಲ್ಪವೃಕ್ಷ’ವನ್ನೇ ನಂಬಿದ್ದ ಬೆಳೆಗಾರರ ಕುಟುಂಬ ಸಾಲದ ಸುಳಿಗೆ ಸಿಲುಕಿದೆ. ‘ನೀರಾ ನೀತಿ’ಗೆ ರಾಜ್ಯದಲ್ಲಿ ಎಳ್ಳುನೀರು ಬಿಡಲಾಗಿದೆ. ‘ಒಂದು ಜಿಲ್ಲೆ, ಒಂದು ಉತ್ಪನ್ನ’ದಲ್ಲಿ ತುಮಕೂರು, ರಾಮನಗರ ತೆಂಗು ಆಯ್ಕೆಯಾಗಿದ್ದರೂ ಯುವಕರಿಗೆ ಮಾರ್ಗದರ್ಶನ ನೀಡುವುದು ಅಧಿಕಾರಿಗಳಿಗೆ ಬೇಡವಾಗಿದೆ. ರೈತರು ಬಯಸುವ ಎಳನೀರು ಮಾರುಕಟ್ಟೆ, ಸಂಶೋಧನಾ ಪಾರ್ಕ್, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಸೃಷ್ಟಿಸಲು ತೆಂಗು ಉತ್ಪಾದಕರ ಸಹಕಾರ ಸಂಘ ಇವೆಲ್ಲ ಬೇಡಿಕೆಯಾಗಿಯೇ ಉಳಿದಿವೆ. ಬೆಳೆಗಾರರ ಸಮಸ್ಯೆ, ಕಾರಣ, ಪರಿಹಾರಗಳ ಬಗ್ಗೆ ಬೆಳಕು ಚೆಲ್ಲಲು ಸೆ.2ರ ವಿಶ್ವ ತೆಂಗು ದಿನದ ಹಿನ್ನೆಲೆಯಲ್ಲಿ ಈ ವಿಶೇಷ ಲೇಖನ.

ರಾಜ್ಯದ 17 ಜಿಲ್ಲೆಗಳಲ್ಲಿ ವಾಣಿಜ್ಯ ಬೆಳೆಯಾಗಿರುವ ತೆಂಗನ್ನು ಉಳಿಸಲು ಆಳುವ ಸರ್ಕಾರಗಳು ನಿರ್ಲಕ್ಷ್ಯ ಮಾಡಿವೆ. ಉಂಡೆ ಕೊಬ್ಬರಿ ಕ್ವಿಂಟಾಲ್ ಉತ್ಪಾದನಾ ವೆಚ್ಚವೇ 18368 ರೂಪಾಯಿ ಎಂದು ತೋಟಗಾರಿಕೆ ಇಲಾಖೆಯೇ ವರದಿ ನೀಡಿದ್ದರೂ ಮಾರುಕಟ್ಟೆಯಲ್ಲಿ ಇಂದಿನ ದರ 11500 ರೂ.ಗೆ ಬಂದು ನಿಂತಿದೆ. ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಕೂಡ 12000 ರೂ. ಮಾತ್ರ ಇದೆ. ಆದರೂ, ಕೃಷಿ ವಿವಿಗಳು, ವಿಜ್ಞಾನ ಕೇಂದ್ರಗಳು, ಸರ್ಕಾರ ಹಾಗೂ ಸರ್ಕಾರದ ಇಲಾಖೆಗಳು ತೆಂಗು ಬೆಳೆಗಾರರನ್ನು ಉಳಿಸಲು ಅಗತ್ಯ ಸಂಶೋಧನೆಗಳನ್ನು ಮಾಡುತ್ತಿಲ್ಲ. ತಿಪಟೂರಿನಲ್ಲಿ ತೆಂಗು ಪಾರ್ಕ್ ಸ್ಥಾಪನೆ ಬಗ್ಗೆ ಬಜೆಟ್​ನಲ್ಲಿ ಘೋಷಿಸಿದ್ದರೂ ಈವರೆಗೂ ಸೂಕ್ತ ಭೂಮಿ ನೀಡಿಲ್ಲ. ಹೆಚ್ಚು ಶ್ರಮ ಬಯಸುವ ಮಳೆಯಾಶ್ರಿತ ತೆಂಗು ಇಂದು ಅಂತರ್ಜಲ ಆಧಾರಿತವಾಗಿದೆ.

ತೋಟಗಾರಿಕೆ ಇಲಾಖೆ ಬಳಿ ಬೆಳೆ, ಇಳುವರಿ ಸೇರಿ ಯಾವುದೇ ಅಂಕಿ-ಅಂಶ ಇಲ್ಲ, ಕೇಂದ್ರ ಸರ್ಕಾರ ಕೂಡ ದಕ್ಷಿಣ ಭಾರತದ ಕಲ್ಪವೃಕ್ಷದ ಬಗ್ಗೆ ತಾತ್ಸಾರ ತಾಳಿದೆ. ಸತತ ನಷ್ಟದಲ್ಲಿದ್ದರೂ ರೈತರು ಸಾಂಪ್ರದಾಯಿಕವಾಗಿ ಕೊಬ್ಬರಿ ಬೆಳೆಗೆ ಸೀಮಿತವಾಗಿದ್ದಾರೆ. ಎಳನೀರು ಮಾರಿದರೆ ಒಳ್ಳೆಯ ಬೆಲೆ ಸಿಕ್ಕರೂ ಕೊಬ್ಬರಿಗೆ ಅಂಟಿಕೊಂಡಿರುವುದು ಸಮಸ್ಯೆಗೆ ಕಾರಣವಾಗಿದೆ. ಇತ್ತೀಚೆಗೆ ಅಡಕೆ ಬೆಳೆಯಲು ಮನಸ್ಸು ಮಾಡಿದ್ದರೂ ತುಮಕೂರು ಸೇರಿ ಕೆಲವು ಜಿಲ್ಲೆಗಳಲ್ಲಿ ಅಡಕೆ ಬೆಳೆಯಬಾರದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ತೆಂಗಿಗೆ ಸಂಬಂಧಿಸಿದ ಉದ್ಯಮಗಳ ಹೆಸರಿನಲ್ಲಿ ಹೆಚ್ಚು ಸಬ್ಸಿಡಿ ಪಡೆದ ಫಲಾನುಭವಿಗಳಲ್ಲಿ ಬಹುಪಾಲು ತಮಿಳುನಾಡಿನವರು. ನಂತರದಲ್ಲಿ ಕೇರಳ, ಒಡಿಶಾ. ಕೊನೆಯಲ್ಲಿ ಕರ್ನಾಟಕವಿದೆ. ರಾಜ್ಯ ಸರ್ಕಾರ ಸಂಶೋಧನೆಗೆ ಉತ್ತೇಜನ ನೀಡಿ ಜಾಗತಿಕವಾಗಿ ಮಾರುಕಟ್ಟೆ ವಿಸ್ತರಿಸುವ ಕೆಲಸ ಮಾಡಿಲ್ಲ. ಇದರಿಂದ ತೆಂಗಿನ ತೋಟದ ವೈಭವ ಕಾಣೆಯಾಗುತ್ತಿದೆ.

ಕೆಎಂಎಫ್ ಮಾದರಿಯಲ್ಲಿ ಫೆಡರೇಷನ್ ಬೇಡಿಕೆ

ತೆಂಗು ವಲಯ ಹಾಗೂ ಮೌಲ್ಯವರ್ಧನೆಗೆ ಪೂರಕವಾಗಿ ಕೆಎಂಎಫ್ ಮಾದರಿಯಲ್ಲಿ ಸಹಕಾರ ಸಂಸ್ಥೆ ಸ್ಥಾಪಿಸಬೇಕು ಎಂಬ ಕೂಗಿದೆ. ಸಿಹಿ ನೀರಾ, ಎಳನೀರು, ಕಾಯಿ, ಕೊಬ್ಬರಿ, ಮಟ್ಟೆ, ಚಿಪ್ಪು, ನಾರು ಸೇರಿ ಕಲ್ಪವೃಕ್ಷದಿಂದ ಉತ್ಪಾದನೆಯಾಗುವ ಎಲ್ಲ ವಸ್ತುಗಳಿಗೂ ಮೌಲ್ಯವರ್ಧನೆ ಮಾಡಿ ಜಾಗತಿಕವಾಗಿ ಮಾರುಕಟ್ಟೆ ವಿಸ್ತರಿಸಿ ಬೇಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಸಹಕಾರ ಸಂಘಗಳು ಕೆಲಸ ಮಾಡಲು ಸಾಧ್ಯವಿದೆ. ಪ್ರತಿಗ್ರಾಮದಲ್ಲಿ ಸಂಘಗಳು ಆರಂಭವಾದರೆ ತೆಂಗು ಬೆಳೆಗಾರರು ಉಳಿಯಲು ಸಾಧ್ಯವಿದೆ. ಕಾಯಿ ಕೀಳುವವರಿಗೆ ಮಾತ್ರ ವಿಮಾ ಸೌಲಭ್ಯ ಒದಗಿಸಿರುವ ಸರ್ಕಾರ, ಈ ಬಗ್ಗೆ ವ್ಯಾಪಕ ಪ್ರಚಾರ ನಡೆದಿಲ್ಲ. ಪಂಪ್​ಸೆಟ್, ಪೈಪ್, ರಸಗೊಬ್ಬರಗಳ ಬೆಲೆ ರೈತರನ್ನು ಹೈರಾಣಾಗಿಸಿದೆ.

ಅಳಿವಿನಂಚಿಗೆ ‘ತಿಪಟೂರು ಟಾಲ್’ ತೆಂಗು

ಮಣ್ಣಿನ ಗುಣದ ಕಾರಣಕ್ಕಾಗಿ ಚಿಕ್ಕನಾಯಕನಹಳ್ಳಿ, ತಿಪಟೂರು, ಹೊಸದುರ್ಗ ಭಾಗದ ಇಟ್ಟಿಗೆಗಳಿಗೆ ಬೇಡಿಕೆಯಿದೆ. ಹಾಗಾಗಿ, ಈ ಭಾಗದಲ್ಲಿ 500ಕ್ಕೂ ಹೆಚ್ಚು ಕಾರ್ಖಾನೆಗಳಿದ್ದು, ಅವೈಜ್ಞಾನಿಕವಾಗಿ ನಿರ್ವಿುಸಿರುವ ಇಟ್ಟಿಗೆ ಗೂಡಿನಿಂದ ಹೊರ ಬರುವ ಹೊಗೆಯಲ್ಲಿ ಕಾರ್ಬನ್​ವಾನಾಕ್ಸೈಡ್ ಮತ್ತಿತರರ ಅನಿಲ ಬಿಡುಗಡೆಯಾಗಿ ತೆಂಗಿನ ಹೊಂಬಾಳೆ (ಹೂವು) ಮೇಲೆ ಅಂಟು ಮೆತ್ತಿಕೊಳ್ಳುತ್ತಿದೆ. ಜೇನು, ಚಿಟ್ಟೆ ಸೇರಿ ಯಾವುದೇ ಕೀಟಗಳು ಪರಾಗಸ್ಪರ್ಶದಿಂದ ದೂರ ಉಳಿಯುವುದರಿಂದ ಇಳುವರಿ ಶೇ.50 ಕಡಿಮೆಯಾಗಿದೆ. ಮಳೆಯಾಶ್ರಿತವಾಗಿಯೂ ಅತೀ ಎತ್ತರವಾಗಿ ಬೆಳೆಯುವ ತಿಪಟೂರು ಟಾಲ್ ಹಾಗೂ ಚಂದ್ರಕಲ್ಪ ತೆಂಗಿನ ಅಪರೂಪದ ತಳಿ ಕೂಡ ಅಳಿವಿನಂಚಿಗೆ ಬಂದು ನಿಂತಿದೆ. ಇದಲ್ಲದೆ ರೈತರಿಗೆ ಎಳನೀರು ಮಾರಾಟದ ಅರಿವು ಮೂಡಿಸುವ ಅಗತ್ಯವಿದೆ. ತಿಪಟೂರು ತಾಲೂಕಿನ ಹೊನ್ನವಳ್ಳಿ ಮೂಲದ ‘ಗಂಗಾಪಾಣಿ’ ತಳಿಯ ಎಳನೀರಿಗೆ ದೀರ್ಘ ಇತಿಹಾಸವಿದೆ. ಕೊಬ್ಬರಿ ಆಸೆಯಿಂದ ಈ ತಳಿಯ ತೆಂಗಿನ ಮರ ಕಡಿಮೆಯಾಗಿದೆ.

‘ಒಂದು ಜಿಲ್ಲೆ ಒಂದು ಉತ್ಪನ್ನ’ಕ್ಕೆ ನಿರಾಸಕ್ತಿ!

ರೈತರು, ಯುವಕರು ಸ್ವಾವಲಂಬಿಗಳಾಗಬೇಕೆಂದು ಕೇಂದ್ರ ಸರ್ಕಾರ ಘೊಷಿಸಿದ ‘ಒಂದು ಜಿಲ್ಲೆ, ಒಂದು ಉತ್ಪನ್ನ’ ಯೋಜನೆಗೆ ತುಮಕೂರು ಹಾಗೂ ರಾಮನಗರದಲ್ಲಿ ತೆಂಗು ಆಯ್ಕೆಯಾದರೂ ಪ್ರಯೋಜನ ಪಡೆದವರ ಸಂಖ್ಯೆ 10 ದಾಟಿಲ್ಲ. ಉತ್ಪನ್ನಗಳ ಆಧಾರಿತ ಸಂಸ್ಕರಣಾ ಘಟಕ ತೆರೆಯಲು ಶೇ.35 ಸಹಾಯಧನದೊಂದಿಗೆ ಸಾಲ ಸೌಲಭ್ಯ ನೀಡಲಾಗಿದೆ. ಆದರೂ ಉತ್ತಮ ಸ್ಪಂದನೆ ಸಿಕ್ಕಿಲ್ಲ.

ಸಿಹಿನೀರಾ ಇಳಿಸಿದರಷ್ಟೇ ಉಳಿಗಾಲ

ಎರಡು ದಶಕದ ಹಿಂದೆ ಚಿಕ್ಕನಾಯಕನಹಳ್ಳಿ ತಾಲೂಕಿನ ಸಿ.ಬೈರೇಗೌಡ ನೇತೃತ್ವದಲ್ಲಿ ನೀರಾ ಇಳಿಸುವ ಮೂಲಕ ದೊಡ್ಡ ಚಳವಳಿಗೆ ನಾಂದಿ ಹಾಡಲಾಗಿತ್ತು. ಆನಂತರ ರೈತ ನಾಯಕ ಪೊ›.ನಂಜುಂಡಸ್ವಾಮಿ ಬೀದಿ ಬೀದಿಗಳಲ್ಲಿ ಚಳವಳಿ ನಡೆಸುವ ಮೂಲಕ ಉಗ್ರಸ್ವರೂಪ ಪಡೆಯಿತು. ಕೊನೆಗೆ ಈ ಚಳವಳಿಯನ್ನು ಯಶಸ್ವಿಯಾಗಿ ಹತ್ತಿಕ್ಕಲಾಯಿತು. ಅಂದಿನಿಂದಲೂ ಸಿಹಿನೀರಾ ಇಳಿಸಲು ಬೇಡಿಕೆಯಿದ್ದರೂ ಸರ್ಕಾರ ಮನಸ್ಸು ಮಾಡಿಲ್ಲ. ನೀರಾ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನರದೌರ್ಬಲ್ಯ ಹೊಂದಿದವರಿಗೆ ನೀರಾ ದಿವ್ಯ ಔಷಧ. ಬೆಲ್ಲ, ಕಲ್ಲು ಸಕ್ಕರೆ, ಜ್ಯೂಸ್, ಜಾಮ್ ಚಾಕೋಲೇಟ್, ಬಿಸ್ಕೆಟ್, ಸಿರಪ್, ಇನ್ನಿತರ ಸಿಹಿ ತಿಂಡಿಗಳನ್ನು ತಯಾರಿಸಬಹುದು. ಇದರಿಂದ ತೆಂಗು ಬೆಳೆಗಾರರು ಮಾರುಕಟ್ಟೆ ಸೃಷ್ಟಿಸಿಕೊಳ್ಳಬಹುದು.

ತುಮಕೂರು ವಿವಿಯಲ್ಲಿದೆ ತೆಂಗು ಬೆಳೆ ಪಿಜಿ ಡಿಪ್ಲೊಮಾ!

ತುಮಕೂರು ವಿವಿ ಒಂದು ವರ್ಷದ ‘ತೆಂಗು ಬೆಳೆ ನಿರ್ವಹಣೆ ಮತ್ತು ಸಂಸ್ಕರಣೆ’ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್​ನಲ್ಲಿ ಪ್ರಮಾಣಪತ್ರ ಪಡೆದ ಎಲ್ಲ ವಿದ್ಯಾರ್ಥಿಗಳಿಗೂ ಉದ್ಯೋಗ ಲಭಿಸಿರುವ ಹೆಗ್ಗಳಿಕೆ ಹೊಂದಿದೆ. 2019ರಲ್ಲಿ ಆರಂಭವಾದ ಕೋರ್ಸ್​ನಲ್ಲಿ ವಾರ್ಷಿಕ 22 ವಿದ್ಯಾರ್ಥಿಗಳ ಪ್ರವೇಶಾತಿಗೆ ಅವಕಾಶವಿದೆ. ಪದವಿ ಪೂರೈಸಿರುವ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು. ಈ ಬಗ್ಗೆಯೂ ಪ್ರಚಾರದ ಕೊರತೆಯಿದೆ. ವಿವಿ ವಿದ್ಯಾರ್ಥಿಗಳು ಜಿಲ್ಲೆಯ ತಳಿಗಳಾದ ಚಂದ್ರಕಲ್ಪ ಮತ್ತು ತಿಪಟೂರು ಟಾಲ್ ಬಗ್ಗೆಯೇ ಅಧ್ಯಯನ ನಡೆಸಿದ್ದಾರೆ. ಕಡಿಮೆ ನೀರಿನಲ್ಲಿಯೂ ಬೆಳೆಯಲು ತಿಪಟೂರು ಟಾಲ್ ಯೋಗ್ಯ ಎಂದು ಸಂಶೋಧನೆಗಳಲ್ಲಿಯೇ ದೃಢಪಟ್ಟಿದೆ. ರಾಜ್ಯದಲ್ಲಿ ತೆಂಗಿಗೆ ಸಂಬಂಧಪಟ್ಟ ಮೊದಲ ಅಧ್ಯಯನ ಕೇಂದ್ರ ಡಿಪ್ಲೊಮಾ ಕೋರ್ಸ್ ಪಡೆದ ವಿದ್ಯಾರ್ಥಿಗಳು ಕೃಷಿಗೆ ಸಂಬಂಧಪಟ್ಟ ಕೈಗಾರಿಕೆಗಳಲ್ಲಿ ಉದ್ಯೋಗಕ್ಕೆ ಸೇರಬಹುದು ಅಥವಾ ಸ್ವಯಂ ಉದ್ಯೋಗ ಮಾಡಲೂ ಅವಕಾಶವಿದೆ. ಶುದ್ಧ ತೆಂಗಿನ ಎಣ್ಣೆ, ತಾಯಿ ಹಾಲಿಗೆ ಸಮನಾದ ಪೌಷ್ಟಿಕಾಂಶ ಹೊಂದಿರುವ ಕೋಕೊನಟ್ ಮಿಲ್ಕ್, ನಾರು ಬಳಸಿ ಪೀಠೋಪಕರಣ, ಚಿಪ್ಪು ಬಳಸಿ ಕರಕಶುಲ, ಅಲಂಕಾರಿಕ ಸಾಮಗ್ರಿ ತಯಾರಿಕೆ ಬಗ್ಗೆ ಕೋರ್ಸ್ ಉದ್ದೇಶ ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net