

ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ನಿವಾರ್ ಚಂಡಮಾರುತ ಬುಧವಾರ ಸಂಜೆ ತಮಿಳುನಾಡು ಮತ್ತು ಪುದುಚೆರಿ ಕರಾವಳಿಗೆ ಅಪ್ಪಳಿಸಲಿದ್ದು, ಸಂಭಾವ್ಯ ಹಾನಿ ತಪ್ಪಿಸಲು ಮತ್ತು ಕಡಿಮೆ ಮಾಡಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚಂಡಮಾರುತದ ಪರಿಣಾಮ ತಮಿಳುನಾಡು, ಆಂಧ್ರದ ದಕ್ಷಿಣ ಕರಾವಳಿ, ಪುದುಚೆರಿಯಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಪುದುಚೆರಿಯಲ್ಲಿ ಮೂರು ದಿನ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ತಮಿಳುನಾಡಿನಲ್ಲಿ ಬುಧವಾರ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಕಾರೈಕಲ್ನ ಕಡಲಲ್ಲಿ ಅನೇಕ ಮೀನುಗಾರರು ಸಿಲುಕಿಕೊಂಡಿದ್ದಾರೆ.
ತಮಿಳುನಾಡು, ಆಂಧ್ರ ಮತ್ತು ಪುದುಚೆರಿಗಳಲ್ಲಿ ರಕ್ಷಣಾ ಕಾರ್ಯಕ್ಕೆ ಎನ್ಡಿಆರ್ಎಫ್ನ 3 ತುಕಡಿ ಸೇರಿ 1,200 ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 800 ಮಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಕೇಂದ್ರದಿಂದ ಎಲ್ಲ ನೆರವನ್ನು ಒದಗಿಸಲಾಗುವುದೆಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಗಳಿಗೆ ಭರವಸೆ ನೀಡಿದ್ದಾರೆ.
ಚೆನ್ನೈನ ಆಗ್ನೇಯದಲ್ಲಿ 450 ಕಿಮೀ ದೂರದಲ್ಲಿ ಕೇಂದ್ರೀಕೃತವಾಗಿರುವ ನಿವಾರ್, 24 ಗಂಟೆಗಳಲ್ಲಿ ತೀವ್ರಗೊಳ್ಳಲಿದೆ. ಮರಗಳು ಉರುಳುವುದು, ವಿದ್ಯುತ್ ಹಾಗೂ ಸಂಪರ್ಕ ವ್ಯವಸ್ಥೆ ಕಡಿತಗೊಂಡು ಅಸ್ತವ್ಯಸ್ತಗೊಳ್ಳುವುದು ಮತ್ತು ಮನೆ ಛಾವಣಿಗಳು ಹಾರಿ ಹೋಗುವುದೇ ಮುಂತಾದ ಹಾನಿ ಎದುರಿಸಲು ಅಧಿಕಾರಿಗಳು ಸಜ್ಜಾಗುತ್ತಿದ್ದಾರೆ. ಒಂದು ಮೀಟರ್ಗಿಂತ ಎತ್ತರದ ಅಲೆಗಳಿಂದಾಗಿ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗುವ ನಿರೀಕ್ಷೆಯಿದೆ. ಚಂಡಮಾರುತ ಗಂಟೆಗೆ 145 ಕಿಲೋ ಮೀಟರ್ ವೇಗದಲ್ಲಿ ಅಪ್ಪಳಿಸಲಿದ್ದು, ಕರೈಕಲ್ ಮತ್ತು ಮಾಮಲ್ಲಪುರಂ ನಡುವೆ ಹಾದುಹೋಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಂಡಮಾರುತ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ಪುದುಚೆರಿಯಲ್ಲಿ ಮಂಗಳವಾರ ರಾತ್ರಿ 9 ಗಂಟೆಯಿಂದ ಗುರುವಾರ ಬೆಳಿಗ್ಗೆ ಆರು ಗಂಟೆವರೆಗೆ ಜನರ ಓಡಾಟವನ್ನು ನಿಷೇಧಿಸಲಾಗಿದೆ. ಆದರೆ ಹಾಲು, ಅತ್ಯವಶ್ಯಕ ವಸ್ತುಗಳ ಅಂಗಡಿಗಳು ತೆರೆದಿರುತ್ತವೆ. ಬೇರೆಲ್ಲ ಅಂಗಡಿಗಳು ಮುಚ್ಚಿರುತ್ತವೆ. ತಮಿಳುನಾಡಿನ ಏಳು ಜಿಲ್ಲೆಗಳಲ್ಲಿ ಬುಧವಾರ ಮಧ್ಯಾಹ್ನ ಒಂದು ಗಂಟೆಯಿಂದ ಬಸ್ ಸಂಚಾರ ಸ್ಥಗಿತಗೊಳಿಸಲಾಗುತ್ತದೆ. ದಕ್ಷಿಣ ಮಧ್ಯ ರೈಲ್ವೆ ಮತ್ತು ದಕ್ಷಿಣ ರೈಲ್ವೆ ಹಲವು ರೈಲುಗಳ ಸಂಚಾರವನ್ನು ರದ್ದು ಮಾಡಿದೆ.