

| ಆಚಾರ್ಯ ವಿಠ್ಠಲ್ ಭಟ್ ಕೆಕ್ಕಾರು
ಶಿಕ್ಷೆ ಹಾಗೂ ಶಿಕ್ಷಣ ಈ ಎರಡೂ ಪದಗಳು ಹೊರನೋಟದಲ್ಲಿ ಬೇರೆ ಬೇರೆ ಅರ್ಥ ನೀಡಿದರೂ ವಿಶೇಷವಾದ ಸಂಬಂಧ ಇಟ್ಟುಕೊಂಡಿರುವಂಥ ಪದ, ಕಾರಣ ಮನುಷ್ಯನ ಗುಣಧರ್ಮ. ಮನುಷ್ಯನಿಗೆ ಶಿಕ್ಷೆ ನೀಡಿದಾಗಲೇ ಸರಿಯಾದ ಶಿಕ್ಷಣ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚು. ಅದಕ್ಕೇ "ದಂಡಂ ದಶಗುಣಂ' ಎಂದಿದ್ದಾರೆ. ಹೀಗಿರುವಾಗ ಜ್ಯೋತಿಷ್ಯ ಪ್ರಕಾರ ನಾವು ಮನುಷ್ಯ ಮಾಡುವ ತಪ್ಪುಗಳಿಗೆ ಶಿಕ್ಷೆಯ ಮೂಲಕ ಶಿಕ್ಷಣ ನೀಡುವ ಪ್ರಧಾನ ಗ್ರಹ ಶನೆಶ್ಚರ. ಈ ಹೆಸರು ಬರಲು ಮೂಲಕಾರಣ ನಿಧಾನವಾದ ಚಲನೆ. "ಶನೆಹಿ ಚರತಿ' ಎಂದರೆ "ನಿಧಾನವಾಗಿ ಚಲಿಸುವವ' ಎಂದರ್ಥ. ಅದನ್ನು ಸರಿಯಾಗಿ ಉಚ್ಚಾರ ಮಾಡಲು ಬಾರದೇ ಅದು ನಂತರದ ದಿನಗಳಲ್ಲಿ ಶನೈಶ್ವರ ಆಯಿತು.
ಭಗವಾನ್ ಸೂರ್ಯ ದೇವರು ಹಾಗೂ ಛಾಯಾದೇವಿಯ ಪುತ್ರನಾಗಿ ಶನಿ ದೇವರು ಜನಿಸಿದ್ದು ಜ್ಯೇಷ್ಠ ಮಾಸದ ಅಮಾವಾಸ್ಯೆ ದಿನದಂದು ಅಂದರೆ ಈ ಬಾರಿ ಜೂನ್ 10. ಒಂದು ರಾಶಿಯಲ್ಲಿ ಶನಿ ದೇವರು 2.5 ವರುಷ ಇರುತ್ತಾನೆ ಹಾಗೂ ಇರುವ ರಾಶಿ, ಅದರ ಹಿಂದಿನ ರಾಶಿ ಹಾಗೂ ಮುಂದಿನ ರಾಶಿಯವರ ಮೇಲೆ ವಿಶೇಷ ಪ್ರಭಾವ ಇರುತ್ತದೆ. ಅದಕ್ಕಾಗಿಯೇ ನಿಮ್ಮ ರಾಶಿಯ ಹಿಂದಿನ ರಾಶಿಗೆ ಸ್ವಾಮಿಯ ಪ್ರವೇಶ ಆದಲ್ಲಿ ಅಲ್ಲಿ 2.5 ವರ್ಷ, ನಂತರ ನಿಮ್ಮ ರಾಶಿಯಲ್ಲಿ 2.5 ವರ್ಷ ಹಾಗೂ ಮುಂದಿನ ರಾಶಿಯಲ್ಲಿ 2.5 ವರ್ಷ ಎಲ್ಲ ಸೇರಿ 7.5 ವರ್ಷ ಸ್ವಾಮಿಯ ಪ್ರಭಾವ ನಿಮ್ಮ ಮೇಲೆ ಇರುತ್ತದೆ. ಇದನ್ನೇ ಹಿಂದಿ ಭಾಷೆಯಲ್ಲಿ "ಸಾಡೆಸಾತ್' ಪ್ರಭಾವ ಎಂದು ಕರೆಯುತ್ತಾರೆ. ಇನ್ನು ನಿಮ್ಮ ರಾಶಿಯಿಂದ 4ರಲ್ಲಿ ಇದ್ದರೆ ಅರ್ಧಾಷ್ಟಮ ಶನಿ, 5ರಲ್ಲಿ ಇದ್ದಾಗ ಪಂಚಮ ಶನಿ ಹಾಗೂ 8ನೇ ರಾಶಿಯಲ್ಲಿ ಇದ್ದಾಗ ಅಷ್ಟಮ ಶನಿ ಪ್ರಭಾವ ಎಂದು ಪರಿಗಣಿಸಬೇಕು.
ಇಂದು (ಗುರುವಾರ) ಸ್ವಾಮಿ ಶ್ರವಣಾ ನತ್ರ 3ನೇ ಪಾದ ಮಕರ ರಾಶಿಯಲ್ಲಿ ಇದ್ದಾರೆ. ಆದುದರಿಂದ ಧನು, ಮಕರ, ಕುಂಭ ರಾಶಿಗಳಿಗೆ ಸಾಡೇಸಾತ್ ಪ್ರಭಾವ ಹಾಗೂ ತುಲಾ ರಾಶಿಯವರಿಗೆ ಅರ್ಧಾಷ್ಟಮ ಶನಿ ಪ್ರಭಾವ, ಕನ್ಯಾ ರಾಶಿಯವರಿಗೆ ಪಂಚಮ ಶನಿ ಪ್ರಭಾವ ಹಾಗೂ ಮಿಥುನ ರಾಶಿಯವರಿಗೆ ಅಷ್ಟಮ ಶನಿ ಪ್ರಭಾವ ಇದೆ. ಇನ್ನು ಶನಿ ದೇವರ ಆರಾಧನೆ ಎಂದರೆ ಶನಿದೇಗುಲದಲ್ಲಿ ಕಾಲುನೋವು ಬರುವ ತನಕ ಪ್ರದಕ್ಷಣೆ ಹಾಕುವುದು. ಶನಿವಾರಗಳಲ್ಲಿ ಎಳ್ಳೆಣ್ಣೆ ಹಾಗೂ ಗುಣಮಟ್ಟದ ಕರಿಎಳ್ಳು ದಾನ ಮಾಡುವುದು. ಇನ್ನು ನಿತ್ಯ ಶನಿ ದೇವರ ಅಷ್ಟೋತ್ತರ ಹಾಗೂ ದಶರಥ ಕತ ಶನಿಸ್ತೋತ್ರ ಪಠಿಸಿ. ಕಡುಬಡವರಿಗೆ ಹಾಗೂ ಅಂಗಾಂಗ ಹೀನರಿಗೆ ವಸ್ತ್ರ ಹಾಗೂ ಅನ್ನದಾನ ಮಾಡಿದರೆ ಶನಿ ದೇವರ ಪೂರ್ಣಕಪೆಗೆ ಪಾತ್ರರಾಗಬಹುದು.
(ಲೇಖಕರು ಜ್ಯೋತಿಷಿ)
|