ಇಂದು ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ; 5,95,997 ವಿದ್ಯಾರ್ಥಿಗಳಿಗೆ 1,016 ಪರೀಕ್ಷಾ ಕೇಂದ್ರ

state page- 1
Published on

ಬೆಂಗಳೂರು: ಬಹುನಿರೀಕ್ಷಿತ ದ್ವಿತೀಯ ಪಿಯು ಆಂಗ್ಲ ಭಾಷಾ ಪರೀಕ್ಷೆ ಗುರುವಾರ ರಾಜ್ಯಾದ್ಯಂತ 1,016 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.

ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿನ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದ್ದು, ವಿದ್ಯಾರ್ಥಿಗಳು ಭಯವಿಲ್ಲದೆ ಪರೀಕ್ಷೆ ಬರೆಯಬಹುದು. ಪರೀಕ್ಷೆ ಬೆ.10.15ರಿಂದ 1.30ರವರೆಗೆ ನಡೆಯಲಿದೆ. 200 ಮಕ್ಕಳಿಗೆ ಒಂದರಂತೆ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಮಾಡಲಾಗಿದೆ. ಆದರೆ ಈ ಪ್ರಕ್ರಿಯೆಗೆ ಸಮಯದ ಅಗತ್ಯ ಇರುವುದರಿಂದ ವಿದ್ಯಾರ್ಥಿಗಳು ಸಾಧ್ಯವಾದಷ್ಟೂ ಮೊದಲೇ ಕೇಂದ್ರಗಳಿಗೆ ಆಗಮಿಸಬೇಕೆಂದು ಇಲಾಖೆ ಮನವಿ ಮಾಡಿದೆ.

ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಪ್ರತ್ಯೇಕ ಕೊಠಡಿ ಇರಲಿದೆ. ಪರೀಕ್ಷಾ ಕೇಂದ್ರಕ್ಕೆ ಹೋಗಿ ಬರಲು ಸಾರಿಗೆ ವ್ಯವಸ್ಥೆ ಕಲ್ಪಿಸಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಹೋಗಬೇಕಿದೆ. ಕರೊನಾದಿಂದಾಗಿ ಪರೀಕ್ಷೆಗೆ ಗೈರಾದವರು ಪೂರಕ ಪರೀಕ್ಷೆಯಲ್ಲಿ ‘ಪ್ರಥಮ ಅವಕಾಶ’ ನೀಡಿ ಪರೀಕ್ಷೆ ಬರೆಯಬಹುದು.

ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಮೊಬೈಲ್ ಫೋನ್ ಬಳಕೆ ನಿಷೇಧಿಸಿದೆ. ತುರ್ತು ಸಂದರ್ಭದಲ್ಲಿ ಬೇಸಿಕ್ ಮೊಬೈಲ್ ಬಳಸಬಹುದು. ಪರೀಕ್ಷಾ ಕೇಂದ್ರದ ಸುತ್ತಮುತ್ತ 200 ಮೀ. ಪ್ರದೇಶ ನಿಷೇಧಿತ ವಲಯ ಆಗಿರುತ್ತದೆ.

ವಿದ್ಯಾರ್ಥಿಗಳು ವಿದ್ಯುನ್ಮಾನ ಉಪಕರಣ ತರುವಂತಿಲ್ಲ. ಮೊಬೈಲ್​ಫೋನ್ ನಿಷೇಧಿಸಲಾಗಿದೆ. ಪ್ರವೇಶಪತ್ರ, ಕಾಲೇಜು ಗುರುತಿನ ಚೀಟಿ, ಪಾರದರ್ಶಕ ವಾಟರ್ ಬಾಟಲ್, ಅಗತ್ಯ ಔಷಧ ಮತ್ತು ಮಾಸ್ಕ್ ಮಾತ್ರ ಕೇಂದ್ರಕ್ಕೆ ತರಲು ಅವಕಾಶ ಕಲ್ಪಿಸಲಾಗಿದೆ.

ಈ ಪರೀಕ್ಷೆಗೆ 5,95,997 ಲಕ್ಷ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಈ ಪೈಕಿ 2,87,663 ಹುಡುಗರು ಮತ್ತು 3,08,334 ಹುಡುಗಿಯರು. ಬದಲಾವಣೆ ಕೋರಿದ 650 ಕೇಂದ್ರಗಳಲ್ಲಿ 18,529 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಅವರು ಮೂಲ ಪರೀಕ್ಷಾ ಕೇಂದ್ರದಲ್ಲೂ ಬರೆಯಬಹುದು. ಹೊರ ರಾಜ್ಯಗಳಿಂದ 1,889 ವಿದ್ಯಾರ್ಥಿಗಳು ಕರ್ನಾಟಕಕ್ಕೆ ಬಂದು ಪರೀಕ್ಷೆ ಬರೆಯಲಿದ್ದಾರೆ. ಹೆಚ್ಚುವರಿ 13,528 ಸೇರಿ ಒಟ್ಟಾರೆ 36,592 ಕೊಠಡಿಗಳಲ್ಲಿ ಪರೀಕ್ಷೆ ನಡೆಯಲಿದೆ.

ರೇಜುಗೆ ಪರೀಕ್ಷಾ ಜವಾಬ್ದಾರಿ: ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಎಂ.ಕನಗವಲ್ಲಿ ಅವರ ತಂದೆ ಮೃತರಾದ್ದರಿಂದ ರಜೆ ಮೇಲೆ ತೆರಳಿದ್ದು, ಪರೀಕ್ಷೆಯ ಜವಾಬ್ದಾರಿಯನ್ನು ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ಡಾ.ಎಂ.ಟಿ.ರೇಜು ಅವರಿಗೆ ನೀಡಲಾಗಿದೆ. 2020ನೇ ಸಾಲಿನ ಪರೀಕ್ಷೆಯನ್ನು ಕನಗವಲ್ಲಿ ಸುಸೂತ್ರವಾಗಿ ನಿರ್ವಹಿಸಿದ್ದರು. ಅವರು ಜೂ.25ರ ಬಳಿಕ ಕರ್ತವ್ಯಕ್ಕೆ ಹಾಜರಾಗಲಿದ್ದಾರೆಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net