ದಿಟ್ಟ ಕ್ರಾಂತಿಕಾರಿ ರಾಸ್ ಬಿಹಾರಿ ಬೋಸ್ ಜಯಂತಿ ಇಂದು

sudina 1
Published on

| ಟಿ.ಎನ್.ರಾಮಕೃಷ್ಣ

ಬಂಗಾಲ ಪ್ರಾಂತದ ಪೂರ್ವ ಬರ್ಧಮಾನ್ ಜಿಲ್ಲೆಯ ಸುಬಲ್ ದಾಹ ಎಂಬ ಹಳ್ಳಿಯಲ್ಲಿ ಜನಿಸಿದ ರಾಸ್ ಬಿಹಾರಿ ಬೊಸ್ ವಿನೋದ್ ಬಿಹಾರಿ ಬೋಸ್ ಮತ್ತು ಭುವನೇಶ್ವರಿಯವರ ಮಗ.

ವಿದ್ಯಾರ್ಥಿ ದೆಸೆಯಲ್ಲಿಯೇ ಸೈನ್ಸ್ ಸೇರಲು ವಿಫಲ ಪ್ರಯತ್ನ ಮಾಡಿದ್ದ ಬೋಸ್ ಮುಂದೆ ಭಾರತ ಸ್ವಾತಂತ್ರ್ಯ ಪ್ರಾಪ್ತಿಗೆ ನೈಜಕಾರಣವಾದ ‘ಭಾರತ ರಾಷ್ಟ್ರೀಯ ಸೈನ್ಯ’ವನ್ನು ಕಟ್ಟಿದರು, ಅಲ್ಲದೆ, ಹಲವಾರು ರಾಸಾಯನಿಕ ಉಪಯೋಗಿಸಿ ಬಾಂಬ್ ತಯಾರಿಸುವುದನ್ನು ಕರಗತ ಮಾಡಿಕೊಂಡರು.

ಹಲವಾರು ಕ್ರಾಂತಿಕಾರಿ ಹೋರಾಟಗಳಲ್ಲಿ ಬಂಗಾಲದಾದ್ಯಂತ ಸಕ್ರಿಯವಾಗಿ ಪಾಲ್ಗೊಂಡರು ಬೋಸ್. 23/12/1912 ರಂದು ಭಾರತದ ಬ್ರಿಟಿಷ್ ಸರ್ಕಾರ ತನ್ನ ರಾಜಧಾನಿಯನ್ನು ಕಲ್ಕತ್ತಾದಿಂದ ದೆಹಲಿಗೆ ವಗಾಯಿಸಲು ಸಿದ್ಧತೆ ಮಾಡಿಕೊಂಡು, ಭಾರತದ ಎಲ್ಲ ಸಂಸ್ಥಾನಗಳ ರಾಜರುಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ದೆಹಲಿ ಪುರಪ್ರವೇಶ ನಡೆಸಿತು. ವೈಸರಾಯ್ ಹಾರ್ಡಿಂಗ್ ಮತ್ತು ಅವನ ಸಹಚರರ ಮೇಲೆ ಏಕಾಏಕಿ ದೆಹಲಿಯ ಚಾಂದನಿ ಚೌಕಿನಲ್ಲಿ ಬಾಂಬ್​ಸ್ಪೋಟ ನಡೆದು ಕೂದಲೆಳೆಯ ಅಂತರದಲ್ಲಿ ವೈಸ್​ರಾಯ್ ಪ್ರಾಣಾಪಾಯದಿಂದ ತಪ್ಪಿಸಿಕೊಂಡರೂ ತೀವ್ರ ಗಾಯಗಳಾಗಿ ಕೋಮಾವಸ್ಥೆಯಲ್ಲಿ ಆಸ್ಪತ್ರೆ ಸೇರಬೇಕಾಯಿತು. ಇದರ ನಾಯಕತ್ವದ ರೂವಾರಿ ರಾಸ್ ಬಿಹಾರಿ ಬೋಸ್. ಬಾಂಬ್ ಸ್ಫೋಟ ನಡೆಸಿದ್ದು ಸ್ತ್ರೀ ವೇಷಧಾರಿ ಕ್ರಾಂತಿಕಾರಿ ಬಸಂತ್ ಕುಮಾರ್ ಬಿಬ್ಬಾಸ್.

ಈ ಐತಿಹಾಸಿಕ ಘಟನೆ ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟದ ಪರಿಚಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚುರ ಪಡಿಸಿತು. ವಿದೇಶಗಳಲ್ಲಿದ್ದ ಹಲವಾರು ಭಾರತೀಯ ಯುವಕರು ತಮ್ಮ ಹೋರಾಟವನ್ನು ಭಾರತದ ಸ್ವಾತಂತ್ರ್ಯಕ್ಕಾಗಿ ಹೆಚ್ಚಿಸಲು ಸ್ಪೂರ್ತಿ ನೀಡಿತು. ಬಸಂತ್ ಕುಮಾರ್ ಬಿಬ್ಬಾಸ, ಅವಧ್ ಬಿಹಾರಿ, ಮಾಸ್ಟರ್ ಅಮೀರ್ ಚಂದ್ ಮತ್ತು ಭಾಯಿ ಬಾಲ್ ಮುಕುಲ್​ರಿಗೆ ಗಲ್ಲುಶಿಕ್ಷೆಗೆ ನೀಡಲ್ಪಟ್ಟ ಈ ಘಟನೆ ಹಲವರಿಗೆ ಹಲವು ಅವಧಿಯ ಜೈಲುಶಿಕ್ಷೆಯನ್ನು ನೀಡಿತು. ಅಜೇಯರಾಗಿ ಉಳಿದ ರಾಸ್ ಬಿಹಾರಿ ಬೋಸ್ ನಂತರ ಶಜೀಂದ್ರನಾಥ ಸಂನ್ಯಾಲ್, ಜತೀಂದ್ರನಾಥ ಮುಖರ್ಜಿ ಜೊತೆ ಹಲವಾರು ಕ್ರಾಂತಿಕಾರ್ಯಗಳನ್ನು ಯೋಜಿಸಿದದರು.

ಬೋಸ್ ಮುಖ್ಯವಾಗಿ ಮೊದಲನೆ ವಿಶ್ವ ಯುದ್ಧದ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಭಾರತದಾದ್ಯಂತ ಯುದ್ಧ ನಡೆಸಿ ಸ್ವಾತಂತ್ರ್ಯ ಗಳಿಸುವ ಬೃಹತ್ ಯೋಜನೆಯನ್ನು ತಯಾರಿಸಿ ಸಿದ್ಧತೆ ನಡೆಸಿದರು. ಆ ಸಂದರ್ಭದಲ್ಲಿ ಕೋಮಗಾಟ ಮರುಘಟನೆಯಿಂದ ಪ್ರೇರೇಪಿತವಾದ ಕೆನಡಾ ಮತ್ತು ಅಮೆರಿಕದಲ್ಲಿದ್ದ ಭಾರತೀಯರು ಅಮೆರಿಕೆಯ ಸ್ಯಾನ್ ಫ್ರಾನ್ಸ್​ಸಿಸ್ಕೋ ನಗರದಲ್ಲಿ ಗದರ್ ಪಕ್ಷ ಮತ್ತು ಗದರ್ ಸೈನ್ಯವನ್ನು ಸ್ಥಾಪಿಸಿ ಬ್ರಿಟಿಷರ ವಿರುದ್ಧ ಭಾರತದಲ್ಲಿ ಯುದ್ಧ ನಡೆಸಲು ಸೈನ್ಯವನ್ನು ಭಾರತಕ್ಕೆ ಕಳುಹಿಸಲು ಸಿದ್ಧತೆ ನಡೆಸಿದ್ದಾಗ, ಅವರ ಜೊತೆ ಸಂಪರ್ಕ ಸಾಧಿಸಿದರು ಬೊಸ್. ಬ್ರಿಟಿಷ್ ಸೈನ್ಯದಲ್ಲಿದ್ದ ಭಾರತೀಯ ಸೈನಿಕರ ರಾಜನಿಷ್ಠೆಯನ್ನು ರಾಷ್ಟ್ರನಿಷ್ಠೆಯನ್ನಾಗಿಸಿ ಅವರನ್ನೂ ಬ್ರಿಟಿಷರ ವಿರುದ್ಧದ ಬಂಡಾಯಕ್ಕೆ ಪ್ರೇರಣೆ ನೀಡಿದರು.

ಆದರೆ, ಕೃಪಾಲ್ ಸಿಂಗ್ ಮತ್ತು ನವಾಬ್ ಖಾನ್​ರ ದೇಶದ್ರೋಹದ ಕೆಲಸದಿಂದಾಗಿ ಕ್ರಾಂತಿಯ ಯೋಜನೆಗಳು ವಿಫಲವಾದಾಗ ಬ್ರಿಟಿಷರ ಹದ್ದುಗಣ್ಣು ಇವರ ಮೇಲೆ ಬಿತ್ತು. ಆದರೂ, ಬಂಧನಕ್ಕೊಳಗಾಗದೆ ಗುರುದೇವ ರವೀಂದ್ರನಾಥ ಟ್ಯಾಗೋರರ ಸಾಂಸ್ಕೃತಿಕ ತಂಡದ ಸದಸ್ಯನೆಂದು ರಹದಾರಿ ಪತ್ರವನ್ನು ಪಡೆದುಕೊಂಡು 05/06/1915 ರಂದು ಜಪಾನ್ ತಲುಪಿದರು. ಜಪಾನ್​ನಲ್ಲಿ 8 ವರ್ಷಗಳ ಅಜ್ಞಾತವಾಸ ಅನುಭವಿಸಿದ ಬೋಸ್ ಭಾರತದ ಪರವಾದ ಹೋರಾಟವನ್ನು ಮುಂದುವರಿಸಿ ಯಶಸ್ವಿಯಾದರು. 8 ವರ್ಷಗಳಲ್ಲಿ ಬೋಸ್ 17 ಬಾರಿ ತಮ್ಮ ನಿವಾಸವನ್ನು ಬದಲಾಯಿಸಿ ಹರಸಾಹಸದಿಂದ ಬ್ರಿಟಿಷರ ಬಂಧನದಿಂದ ತಪ್ಪಿಸಿಕೊಂಡರು. ಒಮ್ಮೆ ಹಯಾಷಿ ಇಚಿರೋ ಎಂಬ ಹೆಸರಿನಲ್ಲಿ ಜಪಾನ್ ಸರ್ಕಾರದ ಮಂತ್ರಿಯ ಮನೆಯಲ್ಲೇ ಇದ್ದು ಬ್ರಿಟಿಷ್ ಗೂಢಚಾರರ ಕಣ್ಣಿಗೆ ಮಣ್ಣೆರೆಚಿದರು.

1923ರಲ್ಲಿ 8 ವರ್ಷಗಳ ಅಜ್ಞಾತವಾಸದ ನಂತರ ಜಪಾನಿನ ಪೌರತ್ವ ಪಡೆದುಕೊಂಡ ಬೋಸ್​ರವರ ಭಾರತನಿಷ್ಠೆ ಜಾಸ್ತಿಯೇ ಆಯಿತು. 1924ರಲ್ಲಿ ಟೋಕಿಯೋ ನಗರದಲ್ಲಿ ‘ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್’ ಪ್ರಾರಂಭಿಸಿದ ಬೋಸ್ ಬ್ರಿಟಿಷರ ಆಡಳಿತದಲ್ಲಿದ್ದ ಏಷ್ಯಾ ಖಂಡದ ದೇಶಗಳ ಸ್ವಾತಂತ್ರ್ಯಕ್ಕಾಗಿ ‘ಫ್ರಾನ್ಸ್ ಏಷ್ಯಾ ಲೀಗ್’ನ್ನು ಪ್ರಾರಂಭಿಸಿದರು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್ ಬ್ರಿಟಿಷರನ್ನು ಸಿಂಗಾಪುರದಲ್ಲಿ ಸೋಲಿಸಿ ಸೈನಿಕರು ಮತ್ತು ಸೈನ್ಯದ ಅಧಿಕಾರಿಗಳನ್ನು ಬಂಧಿಸಿತು. ಜಪಾನಿನ ಚಕ್ರವರ್ತಿ, ಪ್ರಧಾನಿ ಜೊತೆ ಉತ್ತಮ ಸ್ನೇಹಬಾಂಧವ್ಯ ಹೊಂದಿದ್ದ ಬೋಸ್ ಅವರನ್ನು ಒಪ್ಪಿಸಿ ಬಂಧಿತ ಸೈನಿಕರು ಮತ್ತು ಸೈನ್ಯದ ಅಧಿಕಾರಿಗಳಲ್ಲಿದ್ದ 35 ಸಾವಿರ ಭಾರತೀಯರ ಬಿಡುಗಡೆ ಮಾಡಿಸಿ ಅವರನ್ನೇ ಒಳಗೊಂಡ ‘ಭಾರತ ರಾಷ್ಟ್ರೀಯ ಸೈನ್ಯ’ವನ್ನು ಕಟ್ಟಿದರು. ಜಪಾನ್ ಸರ್ಕಾರದ ಸಹಕಾರವನ್ನು ಪಡೆದುಕೊಳ್ಳಲು ಯಶಸ್ವಿಯಾದ ಬೋಸ್ 15.06.1943ರಿಂದ 25.06.1943ರವರೆಗೆ ಬ್ಯಾಂಕಾಂಕ್​ನಲ್ಲಿ ನಡೆದ ‘ಪ್ಯಾನ್ ಏಷಿಯಾ ಲೀಗ್’ನ ವಾರ್ಷಿಕ ಅಧಿವೇಶನದಲ್ಲಿ ‘ಭಾರತ ರಾಷ್ಟ್ರೀಯ ಸೈನ್ಯ’ದ ಮುಂದಾಳತ್ವವನ್ನು ನೇತಾಜಿ ಸುಭಾಷ್​ಚಂದ್ರ ಬೋಸ್​ರಿಗೆ ವಹಿಸಲು ನಿರ್ಣಯ ಕೈಗೊಂಡರು.

ಹೀಗೆ ಬೋಸ್ ಜೀವನದುದ್ದಕ್ಕೂ ದಣಿವರಿಯದೆ ದೇಶಕ್ಕಾಗಿ ದುಡಿದರು. ಅವರ ಪುತ್ರ ಎರಡನೇ ಜಾಗತಿಕ ಮಹಾಯುದ್ಧದಲ್ಲಿ ಭಾಗವಹಿಸಿ ವೀರಮರಣವಪ್ಪಿದಾಗಲೂ ಅತ್ಯಂತ ಹೆಮ್ಮೆಯಿಂದ ಆ ಆಘಾತವನ್ನು ಸ್ವೀಕರಿಸಿದ ಬೋಸ್ 1945 ಜನವರಿ 24ರಂದು ಟೋಕಿಯೋ ನಗರದಲ್ಲಿ ಹೃದಯಾಘಾತದಿಂದ ವಿಧಿವಶರಾದರು.

(ಲೇಖಕರು ರಾಷ್ಟ್ರಗೌರವ ಸಂರಕ್ಷಣ ಪರಿಷತ್ ಸಂಚಾಲಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net