ಇಂದು ಓಝೋನ್‌ ದಿನ: ಓಝೋನ್​ ಪದರ ಜೀವನದ ಆಧಾರ

ozone
Published on
ಅದು 1985 ರ ಒಂದು ದಿನ. ಆ ಕಾಲದ ಜಾಗತಿಕ ಪರಿಸರ ವಿಜ್ಞಾನ ಸಮಾಚಾರಗಳ ಮುಖವಾಣಿಯೆಂದೇ ಹೇಳಲಾಗುತ್ತಿದ್ದ "ನೇಚರ್​' ಪತ್ರಿಕೆಯಲ್ಲಿ ಲೇಖನವೊಂದು ಪ್ರಕಟವಾಗಿತ್ತು. ಬ್ರಿಟನ್​ ಪ್ರಾಯೋಜಕತ್ವದಲ್ಲಿ ದಣ ಧ್ರುವದ ಸರ್ವೇಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಮೂವರು ವಿಜ್ಞಾನಿಗಳು ಮಂಡಿಸಿದ ಪ್ರಬಂಧವದು. ಆ ತಂಡವು ಸಂಶೋಧನೆಯ ಸಮಯದಲ್ಲಿ ಗಮನಿಸಿದಂತೆ ದಣ ಧ್ರುವದಲ್ಲಿ ಸೆಪ್ಟೆಂಬರ್​ನಿಂದ ನವೆಂಬರ್​ ತಿಂಗಳಿನ ಅವಧಿಯಲ್ಲಿ ಆ ಪ್ರದೇಶದ ಭೂಮಿಯ ಮೇಲ್ಭಾಗದ ಓಝೋನ್​ ಪದರವು ಹೆಚ್ಚುಕಡಿಮೆ ಮಾಯವಾಗಿತ್ತೆಂಬುದು ಆ ಲೇಖನದ ವಿಷಯ.

ಮೊದಲ ಬಾರಿಗೆ ಬೆಳಕಿಗೆ ಬಂದ ಈ ಪ್ರಕ್ರಿಯೆಗೆ "ಓಝೋನ್​ ರಂಧ್ರ'ವೆಂದು ನಾಮಕರಣ ಮಾಡಿದ ತಂಡವು ಇದಕ್ಕೆ ಮಾನವ ನಿಮಿರ್ತ ಸಂಯುಕ್ತವಾದ ಕ್ಲೋರೊಫೋರೊಕಾರ್ಬನ್​ (ಸಿಎಫ್​ಸಿ)ಗಳ ಅತಿಯಾದ ಬಳಕೆ ಕಾರಣವಾಗಿರುವ ಸಾಧ್ಯತೆಯ ಬಗ್ಗೆ ಅನುಮಾನಿಸಿತ್ತು. ಓಝೋನ್​ ಪದರವು ತೆಳುವಾಗುತ್ತಿರುವ ಬಗ್ಗೆ 1970 ರಿಂದಲೇ ವಿಜ್ಞಾನಿಗಳು ಹೇಳುತ್ತ ಬಂದಿದ್ದರೂ ಯಾರೂ ಅದರ ಕುರಿತು ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ "ನೇಚರ್​' ಪತ್ರಿಕೆಯಲ್ಲಿ ಬಂದ ಲೇಖನವು ಓಝೋನ್​ ಪದರದಲ್ಲಿ ತೂತಾಗಿರುವುದನ್ನು ಜಗಜ್ಜಾಹಿರು ಮಾಡಿದಾಗ ಈ ಸುದ್ದಿ ಜಾಗತಿಕವಾಗಿ ಭಾರಿ ಸದ್ದು ಮಾಡಿ ಪರಿಸರ ವಿಜ್ಞಾನಿಗಳ ವಲಯದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿತು. ಅಷ್ಟಕ್ಕೂ ವಿಶ್ವಾದ್ಯಂತ ವಿಜ್ಞಾನಿಗಳು ನಿದ್ದೆಗೆಡುವುದಕ್ಕೆ ಕಾರಣವೂ ಇತ್ತು. ಭೂಮಿಯ ಹತ್ತು ಕಿ.ಮಿ. ಎತ್ತರದಲ್ಲಿ ಸುತ್ತಲೂ ಆವರಿಸಿಕೊಂಡಿರುವ ಈ ಓಝೋನ್​ ಪದರವು ಸೂರ್ಯನಿಂದ ಬರುವ ಅತಿನೇರಳೆ ಬೆಳಕನ್ನು ಹೀರಿಕೊಂಡು ಭೂಜೀವಿಗಳ ಪಾಲಿಗೆ ಆಪದ್ಬಾಂಧವನಾಗಿರುವುದು ಮತ್ತು ಈ ಪದರವು ನಾಪತ್ತೆಯಾದ ಪಕ್ಷದಲ್ಲಿ ಈ ಅತಿನೇರಳೆ ಕಿರಣಗಳು ಯಾವುದೇ ಅಡೆತಡೆಗಳಿಲ್ಲದೇ ಸುರಳೀತವಾಗಿ ಭೂಮಿಗಪ್ಪಳಿಸಿ ಭೂಜೀವಿಗಳಲ್ಲಿ ಚರ್ಮಕ್ಯಾನ್ಸರ್​, ಕ್ಯಾಟರ್ಯಾಕ್ಟನಂತಹ ವ್ಯಾಧಿಗಳ ಜೊತೆಗೆ ಸಸ್ಯಸಂಕುಲ ಮತ್ತು ಜಲಚರಗಳಿಗೂ ಕುತ್ತುತರಬಲ್ಲ ಸಾಮರ್ಥ್ಯ ಹೊಂದಿರುವುದು ಅವರಿಗೆ ಚೆನ್ನಾಗಿ ಗೊತ್ತಿತ್ತು.

ಹೀಗಾಗಿ ಓಝೋನ್​ ಪದರದ ಸವಕಳಿಯನ್ನು ನಿರ್ಲಸಿದರೆ ಮುಂದಾಗಬಲ್ಲ ಅಪಾಯಗಳನ್ನು ಗಮನದಲ್ಲಿಟ್ಟು ಅದನ್ನು ರಸುವ ತುತಿರ್ಗೆ ಪೂರಕವಾಗಿ ಉಪಾಯಗಳನ್ನು ರೂಪಿಸಲು ವಿಜ್ಞಾನಿಗಳ ತಂಡಗಳು ತಕ್ಷಣ ಕಾರ್ಯಪ್ರವೃತ್ತವಾದವು. ಈ ನಿಟ್ಟಿನಲ್ಲಿ ಎಲ್ಲ ದೇಶಗಳ ಸಾಂಕ ಪ್ರಯತ್ನದ ಜರೂರತ್ತಿದ್ದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ನೇತೃತ್ವದಲ್ಲಿ ಎಲ್ಲ ರಾಷ್ಟ್ರಗಳಿಗೆ ಒಪ್ಪಿಗೆಯಾಗುವಂತಹ ಸೂತ್ರಗಳನ್ನು ರಚಿಸಲಾಯಿತು. 1985 ರ ಮಾರ್ಚ್​ 22ರಂದು ವಿಯೆನ್ನಾದಲ್ಲಿ ನಡೆದ ವಿಶ್ವಸಂಸ್ಥೆ ಸಮಾವೇಶದಲ್ಲಿ 28 ರಾಷ್ಟ್ರಗಳು ಒಗ್ಗೂಡಿ ಓಝೋನ್​ ಪದರದ ರಕ್ಷಣೆಗಾಗಿ ಕಟಿಬದ್ಧರಾಗಿರುವುದಕ್ಕೆ ಸಮ್ಮತಿ ಸೂಚಿಸಿದವು.


"ಓಝೋನ್​ ಬಚಾವೋ' ಸೂತ್ರಗಳನ್ನು ರಚಿಸಲು ಹೊರಟ ಚಿಂತಕರ ಚಾವಡಿಗೆ ಆ ಪದರದ ಸವಕಳಿಗೆ ಕಾರಣವಾಗಿದ್ದ ರಾಸಾಯನಿಕ ಸಂಯುಕ್ತಗಳಲ್ಲಿ ಹೆಚ್ಚಿನವುಗಳು ಬಹೂಪಯೋಗಿ ವಸ್ತುಗಳಾಗಿರುವುದು ಮತ್ತು ಕೆಲವಕ್ಕಂತೂ ಪರ್ಯಾಯಗಳೇ ಇರದಿದ್ದುದು ಗಮನಕ್ಕೆ ಬಂತು. ಈ ಹಿನ್ನೆಲೆಯಲ್ಲಿ ನಿಷೇಧದ ಜೊತೆಗೆ ಪರ್ಯಾಯವನ್ನೂ ಸಂಶೋಧಿಸಲು ಸೂಕ್ತ ಸಮಯವನ್ನು ಮೀಸಲಿಟ್ಟು ಓಝೋನ್​ದ್ವೇಷಿ ವಸ್ತುಗಳ ಉತ್ಪಾದನೆ ಮತ್ತು ಬಳಕೆಯನ್ನು ಹಂತಹಂತವಾಗಿ ನಿಲ್ಲಿಸಲು ಯೋಜನೆ ತಯಾರಾಯಿತು. ಮಾಂಟ್ರಿಯಲ್​ ನಿಯಮಾವಳಿಗಳೆಂದೇ ಖ್ಯಾತವಾದ ಈ ನಿಯಮಾವಳಿಗಳನ್ನು 1987 ರ ಸೆಪ್ಟೆಂಬರ್​ 16 ರಂದು ವಿಶ್ವಸಂಸ್ಥೆ ಅನುಮೋದನೆಯಲ್ಲಿ ಜಾರಿಗೆ ತರಲಾಯಿತು. ಆ ಐತಿಹಾಸಿಕ ದಿನದ ನೆನಪಿನಲ್ಲಿ ಮತ್ತು ಓಝೋನ್​ ಪದರದ ಉಪಯುಕ್ತತೆಯನ್ನು ಮತ್ತೆ ಮತ್ತೆ ನೆನಪಿಸಲು ಪ್ರತಿವರ್ಷ ಸೆಪ್ಟೆಂಬರ್​ 16 ರಂದು ವಿಶ್ವ ಓಝೋನ್​ ದಿನವನ್ನು ಆಚರಿಸಲಾಗುತ್ತದೆ. ವರ್ಷವರ್ಷವೂ ಹೊಸದೊಂದು ೂಷವಾಕ್ಯ ದೊಂದಿಗೆ ಹಮ್ಮಿಕೊಳ್ಳಲಾಗುವ ಈ ದಿನಕ್ಕೆ ಈ ಬಾರಿ "ಜೀವನಕ್ಕಾಗಿ ಓಝೋನ್​' ಎಂಬ ೂಷವಾಕ್ಯವನ್ನು ನೀಡಲಾಗಿದೆ.


ಜೀವವಾಯು ಆಮ್ಲಜನಕದ ಕುರಿತು ನಮಗೆಲ್ಲ ಗೊತ್ತೇ ಇದೆ. ಎರಡು ಆಕ್ಸಿಜನ್ನಿನ ಪರಮಾಣುಗಳು ಕೂಡಿಕೊಂಡು ಒಂದು ಆಮ್ಲಜನಕದ ಅಣುವು ತಯಾರಾಗುತ್ತದೆ. ಈ ಆಮ್ಲಜನಕದ ಅಣುವಿಗೆ ಇನ್ನೊಂದು ಆಕ್ಸಿಜನ್ನಿನ ಪರಮಾಣು ಕೂಡಿಕೊಂಡರೆ ತಯಾರಾಗುವ ಅಣುವೇ ಓಝೋನ್​. ಈ ವಾಯುವು ವಾಸನೆಯನ್ನು ಹೊಂದಿರುವ ಕಾರಣಕ್ಕೆ ತನ್ನ ಹೆಸರನ್ನು ಗ್ರೀಕ್​ ಪದ ಓಝೇನ್​ (ವಾಸನೆ ) ಮೂಲಕ ಪಡೆದುಕೊಂಡಿದೆ. ಭೂಮಿಯ ಮೇಲ್ಮೆಯಿಂದ ಮೇಲಕ್ಕೆ ಚಾಚಿಕೊಂಡಿರುವ ವಾತಾವರಣವನ್ನು ಹಲವು ಪದರಗಳಾಗಿ ವಿಂಗಡಿಸಲಾಗಿದ್ದು ಭೂಮಿಗೆ ತೀರಹೊಂದಿಕೊಂಡಿರುವಂತಿರುವ ಮತ್ತು ನಾವೆಲ್ಲ ವಾಸವಾಗಿರುವ ಪದರವನ್ನು ಟ್ರೋಪೋಸ್ಫಿಯರ್​ ಎಂದು ಹೇಳಲಾಗುತ್ತದೆ. ಭೂಮಿಯಿಂದ ಮೇಲಕ್ಕೆ ಸುಮಾರು ಏಳರಿಂದ ಹತ್ತು ಕಿಮಿ. ಎತ್ತರದವರೆಗೂ ಚಾಚಿಕೊಂಡಿರುವ ಈ ಪದರವು ವಾತಾವರಣದ ಅಜಮಾಸು ಶೇ.75 ಗಾಳಿ ಮತ್ತು ಮಳೆಮೋಡಗಳ ಪಾಲುದಾರಿಕೆಯನ್ನು ಹೊಂದಿದೆ. ಈ ಟ್ರೋಪೋಸ್ಫಿಯರಿಂದ ಮೇಲೆ ಅಂದರೆ ಭೂಮಿಯಿಂದ ಸುಮಾರು ಹತ್ತು ಕಿಮಿ. ಎತ್ತರದಲ್ಲಿ ಆರಂಭವಾಗುವುದೇ ಸ್ಟ್ರಾಟೋಸ್ಫಿಯರ್​. ಅಲ್ಲಿಂದ ಮೇಲೆ ಐವತ್ತು ಕಿಮಿ ಎತ್ತರದ ವ್ಯಾಪ್ತಿಯನ್ನು ಹೊಂದಿರುವ ಸ್ಟ್ರಾಟೋಸ್ಫಿಯರ್​ ಒಳಗಡೆ ಓಝೋನ್​ ಪದರವು ಸ್ಥಿತವಾಗಿದೆ. ಟ್ರೋಪೋಸ್ಫಿಯರಿನಲ್ಲಿ ಎತ್ತರಕ್ಕೆ ಹೋದಂತೆಲ್ಲ ಒತ್ತಡ ಕಡಿಮೆಯಾಗಿ ಗಾಳಿ ಹರಡಿಕೊಳ್ಳುವ ಕಾರಣಕ್ಕೆ ತಾಪಮಾನ ಇಳಿಮುಖವಾಗುತ್ತಿದ್ದರೆ ಸ್ಟ್ರಾಟೋಸ್ಫಿಯರಿನಲ್ಲಿ ಎತ್ತರಕ್ಕೆ ಏರಿದಂತೇ ಸೂರ್ಯನಿಂದ ಬರುವ ವಿಕಿರಣದ ಪ್ರಮಾಣ ಹೆಚ್ಚಿ ತಾಪಮಾನವೂ ಹೆಚ್ಚುತ್ತದೆ. ಇಂತಹ ವಾತಾವರಣವು ಆಮ್ಲಜನಕದ ಅಣುವನ್ನು ಅದರದ್ದೇ ಎರಡು ಪರಮಾಣುಗಳಾಗಿ ಒಡೆಯಲು ಪೂರಕವಾಗಿರುವುದರಿಂದ ಅಲ್ಲಿ ಆ ಪ್ರಕ್ರಿಯೆ ವೇಗಪಡೆದುಕೊಳ್ಳುತ್ತದೆ. ಹೀಗೆ ಹುಟ್ಟಿಕೊಳ್ಳುವ ಆಮ್ಲಜನಕದ ಪರಮಾಣುಗಳು ಮತ್ತೆ ಮೂರರ ಸಂಖ್ಯೆಯಲ್ಲಿ ಒಗ್ಗೂಡಿದಾಗ ಓಝೋನ್​ ಅಣುಗಳಾಗಿ ಪರಿವರ್ತನೆಗೊಳ್ಳುತ್ತವೆ. ಇಲ್ಲಿ ಒಂದೆಡೆ ಓಝೋನ್​ ತಯಾರಾಗುವಿಕೆ ನಡೆಯುತ್ತಿದ್ದರೆ ಮತ್ತೊಂದೆಡೆ ಈ ವಾತಾವರಣದಲ್ಲಿರುವ ಕ್ಲೋರಿನ್​ ಮತ್ತು ಬ್ರೋಮಿನ್​ನಂತಹ ಅನಿಲಗಳು ಓಝೋನನ್ನು ನುಂಗುತ್ತಿರುತ್ತವೆ. ಈ ಕೂಡಿಕಳೆಯುವಿಕೆಯು ಒಟ್ಟಾರೆ ಓಝೋನ್​ ಪದರದ ಗಾತ್ರವನ್ನು ನಿರ್ಧರಿಸುತ್ತದೆ.

ಒಂದು ಹಂತದವರೆಗೆ ಹ್ಯಾಲೋನ್​ ಗುಂಪಿಗೆ ಸೇರುವ ಈ ಓಝೋನ್​ ನುಂಗುಬಾಕ ಅನಿಲಗಳ ಪ್ರಮಾಣ ಅಷ್ಟೇನೂ ಕಳವಳಕಾರಿಯಾಗಿರದ ಕಾರಣಕ್ಕೆ ಎಲ್ಲವೂ ಸರಿಯಾಗಿತ್ತು. ಆದರೆ ಭೂಮಿಯ ಮೇಲೆ ಈ ಅನಿಲಗಳ ಬಳಕೆ ಹೆಚ್ಚಾಗುತ್ತ ಬಂದು ಅತ್ಯಂತ ಹಗುರವಾಗಿದ್ದ ಇವುಗಳು ಸೋರಿ ಮೇಲೇರಿ ಬಂದು ಓಝೋನ್​ ಪದರವನ್ನು ಸೇರಿಕೊಂಡು ಅದನ್ನು ತಿಂದು ತೇಗಲಾರಂಭಿಸಿ ಹಂತಹಂತವಾಗಿ ಆ ಪದರದ ಗಾತ್ರವನ್ನು ಕುಗ್ಗಿಸಿ ತೂತನ್ನೇ ಕೊರೆಯುವಷ್ಟರ ಮಟ್ಟಿಗೆ ಹೋದಮೇಲೆ ಕೆಳಗಿದ್ದ ಮಾನವನ ಕಣ್ತೆರೆಯಿತು. ಆದರೆ ಸಂಟಿತ ಪ್ರಯತ್ನದಿಂದ ಎಂತಹ ಸವಾಲುಗಳನ್ನೂ ಎದುರಿಸಬಹುದೆಂಬುದಕ್ಕೆ ಮಾಂಟ್ರಿಯಲ್​ ನಿಯಮಾವಳಿಯೊಂದು ಉತ್ತಮ ಉದಾಹರಣೆ. ಹಂತಹಂತವಾಗಿ ಓಝೋನ್​ ನುಂಗುಬಾಕ ಅನಿಲಗಳ ಬಳಕೆ ಮತ್ತು ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಪರಿಣಾಮ ಈ ಪದರವಿದೀಗ ತನ್ನ ಮೊದಲ ಖದರಿಗೆ ಮರಳುತ್ತಿದೆ. ಜೊತೆಗೆ ಈ ಅಭಿಯಾನದಲ್ಲಿ ನಿವಾಳಿಸಿ ಒಗೆದ ಅನಿಲಗಳ ಪೈಕಿ ಹೆಚ್ಚು ಕಮ್ಮಿ ಎಲ್ಲವೂ ಹಸಿರುಮನೆ ಪರಿಣಾಮಕ್ಕೆ ಪೂರಕವಾಗಿದ್ದ ಕಾರಣಕ್ಕೆ ಪರಿಸರ ರಕ್ಷಣೆಗೂ ತಕ್ಕಮಟ್ಟಿಗೆ ತನ್ನ ಕೊಡುಗೆಯನ್ನು ಸಹ ಅದು ನೀಡಿದೆ. ಆದರೆ ಅಸ್ತಮಾಗೆ ಬಳಸುವ ಸೆಯಂತಹ ಕೆಲವು ಅಪವಾದಗಳಿನ್ನೂ ಉಳಿದುಕೊಂಡಿದ್ದು ಅಂತಹುದಕ್ಕೂ ಪರ್ಯಾಯಗಳನ್ನು ಹುಡುಕಿ ಓಝೋನ್​ ನುಂಗುಬಾಕಗಳನ್ನು ಸಂಪೂರ್ಣ ಮಟ್ಟಹಾಕುವಲ್ಲಿ ಯಶಸ್ವಿಯಾದರೆ ಧೈರ್ಯವಾಗಿ ಸೂರ್ಯನ ಕಣ್ಣಿಗೆ ಕಣ್ಣಿಟ್ಟು ಮುಗುಳ್ನಗೆ ಬೀರಬಹುದು.

ಲೇಖಕರು (ಪರಿಸರ ಬರಹಗಾರರು)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net