

ಬೆಂಗಳೂರು: ಈ ವರ್ಷದ ಮೊದಲ ಚಂದ್ರಗ್ರಹಣ ಶುಕ್ರವಾರ ರಾತ್ರಿ 10.37ರಿಂದ ಶನಿವಾರ ಬೆಳಗಿನ ಜಾವ 2.40ರವರೆಗೆ ಸಂಭವಿಸಲಿದೆ. ಪಾರ್ಶ್ವಛಾಯಾಗ್ರಹಣ(ಪೆನಂಬ್ರಲ್ ಲೂನಾರ್ ಎಕ್ಲಿಪ್ಸ್) ಎನ್ನಲಾಗುವ ಗ್ರಹಣದಲ್ಲಿ ಭೂಮಿಯ ಛಾಯೆಯ ಪಾರ್ಶ್ವಭಾಗ ಮಾತ್ರ ಸ್ಪರ್ಶವಾಗುವ ಕಾರಣ ಸಾಮಾನ್ಯ ಹುಣ್ಣಿಮೆ ಚಂದ್ರನಿಗೂ ಈ ದಿನದ ಚಂದ್ರನಿಗೂ ಬರಿಗಣ್ಣಿಗೆ ಯಾವುದೇ ವ್ಯತ್ಯಾಸ ಗೋಚರವಾಗುವುದಿಲ್ಲ.
ಚಂದ್ರ ಹಾಗೂ ಸೂರ್ಯನ ನಡುವೆ ಸರಳ ರೇಖೆಯಲ್ಲಿ ಭೂಮಿ ಆಗಮಿಸಿದಾಗ ಸೂರ್ಯನ ಕಿರಣ ಭೂಮಿಯ ಮೇಲೆ ಬಿದ್ದು ಅದರ ದಟ್ಟವಾದ ನೆರಳು ಚಂದ್ರನ ಮೇಲೆ ಆವರಿಸಿಕೊಂಡು ಹುಣ್ಣಿಮೆ ಚಂದ್ರನ ಮೇಲೆ ಕಪು್ಪ ಛಾಯೆ ಆವರಿಸುತ್ತದೆ. ಅದನ್ನು ಪೂರ್ಣ ಗ್ರಹಣ ಎನ್ನಲಾಗುತ್ತದೆ. ಆದರೆ ಶುಕ್ರವಾರ ರಾತ್ರಿ ನಡೆಯುವ ಗ್ರಹಣದಲ್ಲಿ ಭೂಮಿಯ ದಟ್ಟವಾದ ನೆರಳು ಚಂದ್ರನ ಮೇಲೆ ಬೀಳುತ್ತಿಲ್ಲ. ದಟ್ಟವಾದ ನೆರಳಿನ ಸುತ್ತ ಇರುವ ಪಾರ್ಶ್ವಛಾಯೆ ಅಥವಾ ಅರೆಛಾಯೆ(ಪೆನಂಬ್ರ) ಮಾತ್ರ ಚಂದ್ರನನ್ನು ಆವರಿಸಿಕೊಳ್ಳುತ್ತದೆ.
ಪಾರ್ಶ್ವ ನೆರಳು ಗಾಢವಾಗಿರುವುದಿಲ್ಲ. ಆದ್ದರಿಂದ ಚಂದ್ರನ ಮೇಲೆ ನೆರಳು ಆವರಿಸಿಕೊಂಡಿದ್ದು, ಅದು ಮುಂದೆ ಸರಿಯುವುದು, ಯಾವುದೂ ಬರಿಗಣ್ಣಿಗೆ ಗೋಚರವಾಗುವುದಿಲ್ಲ ಎಂದು ಜವಾಹರಲಾಲ್ ನೆಹರೂ ತಾರಾಲಯ ನಿರ್ದೇಶಕ ಪ್ರಮೋದ್ ಜಿ. ಗಲಗಲಿ ತಿಳಿಸಿದ್ದಾರೆ. ಭಾರತದಾದ್ಯಂತ ಗ್ರಹಣ ಗೋಚರವಾಗಲಿದೆ. ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ, ಯುರೋಪ್, ಉತ್ತರ ಅಮೆರಿಕದ ಕೆಲ ಪ್ರದೇಶದಲ್ಲಿ ಗೋಚರವಾಗುತ್ತದೆ.
ಸಮಯ