ಇಂದು ಸ್ತೋತ್ರ ತ್ರಿವೇಣಿ ಮಹಾಸಮರ್ಪಣೆ

ವಿಜಯವಾಣಿ (2)
Published on

ಶಿವಮೊಗ್ಗ: ಶೃಂಗೇರಿಯ ಶ್ರೀ ಶಾರದಾ ಪೀಠದಲ್ಲಿ ಇಂದು (ಶನಿವಾರ) ಜರುಗುವ ಸ್ತೋತ್ರ ತ್ರಿವೇಣಿ ಮಹಾಸಮರ್ಪಣೆ ಕಾರ್ಯಕ್ರಮದ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ.

ಯತಿವರ್ಯರು, ಪಂಡಿತರು, ಮಹನೀಯರು, ಮಹಿಳೆಯರು, ಶಾಲಾಮಕ್ಕಳ ಸಹಿತ ಐವತ್ತು ಸಾವಿರ ಮಂದಿ ಒಂದೇ ವೇದಿಕೆಯಲ್ಲಿ ಒಗ್ಗೂಡಿ ಏಕಧ್ವನಿಯಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯ ವಿರಚಿತ ಕಲ್ಯಾಣವೃಷ್ಟಿಸ್ತವ, ಶಿವಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರ ಮತ್ತು ಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರಗಳನ್ನು ಪಠಿಸಲಿದ್ದಾರೆ. ಕಾರ್ಯಕ್ರಮಕ್ಕಾಗಿ 3 ಸಾವಿರ ಸ್ವಯಂಸೇವಕರು ಸಿದ್ಧತೆ ಮಾಡಿದ್ದಾರೆ. ಭಕ್ತರಿಗೆ ಮೂಲಸೌಕರ್ಯ, ಊಟದ ವ್ಯವಸ್ಥೆ, ವಾಹನ ನಿಲುಗಡೆ, ಸ್ವಚ್ಛತೆ, ಅಲಂಕಾರ ಇತ್ಯಾದಿ ಸಿದ್ಧತೆಗಳು ಪೂರ್ಣಗೊಂಡಿವೆ. ಉಪಾಹಾರ ಹಾಗೂ ಊಟ ತಯಾರಿಸಲು 200ಕ್ಕೂ ಹೆಚ್ಚು ಬಾಣಸಿಗರು ಕಾರ್ಯನಿರ್ವಹಿಸುತ್ತಿದ್ದಾರೆ. ಊಟ ಬಡಿಸಲು 250 ಕೌಂಟರ್​ಗಳು, 1,600 ಸ್ವಯಂಸೇವಕರು ಸಜ್ಜಾಗಿದ್ದಾರೆ. ಪಟ್ಟಣದ ಮುಖ್ಯ ಬೀದಿಯಲ್ಲಿ ಕೇಸರಿ ತೋರಣಗಳು ರಾರಾಜಿಸುತ್ತಿವೆ.

ಸಂಭ್ರಮದ ಸುವರ್ಣಮಹೋತ್ಸವ

ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರ ಸಂನ್ಯಾಸ ಸ್ವೀಕಾರದ ನೆನಪಿಗಾಗಿ 2023ರಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಸಂಕಲ್ಪದಂತೆ ಸುವರ್ಣಭಾರತೀ ಮಹೋತ್ಸವದಡಿ ಧಾರ್ವಿುಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಎಲ್ಲ ವರ್ಗಗಳ ಜನರನ್ನೂ ಒಗ್ಗೂಡಿಸಿ ಅವರ ಧಾರ್ವಿುಕ ಜಾಗೃತಿಗಾಗಿ ಸ್ತೋತ್ರ ತ್ರೀವೇಣಿ ಪಠಣ 2000 ಕೇಂದ್ರಗಳಲ್ಲಿ ನಿರಂತರವಾಗಿ ನಡೆಸಲಾಗುತ್ತಿತ್ತು. ವಿಶೇಷವಾಗಿ ಭವಿಷ್ಯದ ರೂವಾರಿಗಳಾದ ಮಕ್ಕಳಿಗೆ ಆಧ್ಯಾತ್ಮಿಕ ಅರಿವು ಸಿಗಬೇಕು ಎಂಬುದು ಕಿರಿಯ ಶ್ರೀಗಳ ಅಭಿಮತ.ಶೃಂಗೇರಿ ಶಾರದಾ ಪೀಠದ ಭಾರತೀ ತೀರ್ಥ ನಗರದಲ್ಲಿ ಬೃಹತ್ ವೇದಿಕೆ ಸಜ್ಜಾಗಿದೆ.

ಐವತ್ತು ಸಾವಿರ ಜನರು ಏಕಕಾಲದಲ್ಲಿ ಶ್ರೀ ಶಂಕರ ಭಗವತ್ಪಾದ ವಿರಚಿತ ಮೂರು ಸ್ತೋತ್ರಗಳನ್ನು ಪಠಿಸಲಿದ್ದಾರೆ. ಸ್ತೋತ್ರ ತ್ರಿವೇಣಿಯಲ್ಲಿ ಕಲ್ಯಾಣವೃಷ್ಟಿಸ್ತವ, ಶಿವಪಂಚಾಕ್ಷರೀ ನಕ್ಷತ್ರಮಾಲಾ ಸ್ತೋತ್ರ ಮತ್ತು ಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರಗಳಿವೆ. ಕಲ್ಯಾಣವೃಷ್ಟಿಸ್ತವದಲ್ಲಿ ಶ್ರೀ ವಿದ್ಯಾಪಂಚದಶಾಕ್ಷರೀ ಮಹಾಮಂತ್ರದ ಅಕ್ಷರಗಳಿಂದ ಪ್ರತಿ ಶ್ಲೋಕವೂ ಪ್ರಾರಂಭವಾಗುತ್ತದೆ. ಜಗನ್ಮಾತೆಯನ್ನು ಸ್ತುತಿಸುವ ಈ ಸ್ತೋತ್ರವು ಕಲ್ಯಾಣವೃಷ್ಟಿಯನ್ನು ಸುರಿಸಬಲ್ಲದು.

ಪ್ರತಿ ಶ್ಲೋಕದ ನಾಲ್ಕು ಪಂಕ್ತಿಗಳಲ್ಲಿ ಶಿವಪಂಚಾಕ್ಷರೀ ಮಂತ್ರ ಹೊಂದಿರುವ ಶಿವಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರಗಳಲ್ಲಿ 108 ಬಾರಿ ಶಿವಪಂಚಾಕ್ಷರೀ ಮಂತ್ರವನ್ನು ಉಲ್ಲೇಖಿಸಿ ಶಿವತತ್ವವನ್ನು ಆಚಾರ್ಯ ಶ್ರೀ ಶಂಕರರು ಉಪದೇಶಿಸಿದ್ದಾರೆ. ಲಕ್ಷ್ಮೀನೃಸಿಂಹಸ್ವಾಮಿಯನ್ನು ಸ್ತುತಿಸುವ ಕರಾವಲಂಬ ಸ್ತೋತ್ರವು ಸಂಸಾರ ದುಃಖವನ್ನು ದಾಟಿಸುತ್ತದೆ. ಈ ಮಂತ್ರಗಳ ಉಚ್ಚಾರಣೆಯಿಂದ ಸಾಧಕನ ಮನೋಭೀಷ್ಟಗಳು ನೆರವೇರುತ್ತವೆ ಎಂಬುದು ಪಾರಂಪರಿಕ ನಂಬಿಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net