

ಮಹಾಕುಂಭನಗರ (ಪ್ರಯಾಗ್ರಾಜ್): ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಬುಧವಾರ (ಜ.29) ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲಾದ, ಮೌನಿ ಅಮಾವಾಸ್ಯೆ ಪ್ರಯುಕ್ತ 10 ಕೋಟಿ ಭಕ್ತರು ಅಮೃತ ಸ್ನಾನ ಮಾಡುವ ನಿರೀಕ್ಷೆ ಇದೆ.
ಜ.13 ರಂದು ಆರಂಭವಾಗಿರುವ ಕುಂಭ ಮೇಳಕ್ಕೆ ಮೊದಲ 17 ದಿನದಲ್ಲಿ ಜನಸಾಗರವೇ ಹರಿದು ಬಂದಿದ್ದು, ಇದುವರೆಗೆ 15 ಕೋಟಿ ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ. ಜ.14 ರಂದು ಮಕರ ಸಂಕ್ರಾಂತಿ ಪ್ರಯುಕ್ತ ಒಂದೇ ದಿನದಲ್ಲಿ 3.5 ಕೋಟಿ ಭಕ್ತರು ಪುಣ್ಯ ಸ್ನಾನ ಮಾಡಿದ್ದರು. ಈಗ ಮೌನಿ ಅಮಾವಾಸ್ಯೆಯ ದಿನ 10 ಕೋಟಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈಗಾಗಲೇ ದೇಶಾದ್ಯಂತದಿಂದ ಭಕ್ತರು ಸಾಗರೋಪಾದಿಯಾಗಿ ಪ್ರಯಾಗ್ರಾಜ್ಗೆ ಆಗಮಿಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಮಾಘ ಕೃಷ್ಣ ಅಮಾವಾಸ್ಯೆಯನ್ನು ಮೌನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಮಹಾಕುಂಭ ಮೇಳದಲ್ಲಿ ಅಮೃತ ಸ್ನಾನ ಮಾಡುವ ದಿನಗಳಲ್ಲಿ ಈ ದಿನ ಅತ್ಯಂತ ಶ್ರೇಷ್ಠ ಎಂದು ನಂಬಲಾಗಿದೆ. ಮೌನಿ ಅಮಾವಾಸ್ಯೆಯಂದು ನದಿಯ ನೀರು ಅಮೃತಕ್ಕೆ ಸಮನಾಗಿರುತ್ತದೆ. ಹೀಗಾಗಿ ಇದೇ ದಿನ ‘ಅಮೃತ ಸ್ನಾನ’ ಮಾಡಬೇಕು ಎಂಬುದು ಭಕ್ತರ ನಂಬಿಕೆ.
ಕರೆ, ಇಂಟರ್ನೆಟ್ ಸೇವೆ ಅಬಾಧಿತ: ಕೋಟ್ಯಂತರ ಜನರು ಸೇರುವ ಮಹಾಕುಂಭ ಮೇಳದಲ್ಲಿ ಫೋನ್ ಕರೆಗಳು ಮತ್ತು ಇಂಟರ್ನೆಟ್ ನಲ್ಲಿ ಸಮಸ್ಯೆ ಉಂಟಾಗದಂತೆ ಟೆಲಿಕಾಂ ಕಂಪನಿಗಳು ಹೆಚ್ಚಿನ ಟವರ್ ಮತ್ತು ಬೇಸ್ ಟ್ರಾನ್ಸ್ಸಿವರ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಅಯೋಧ್ಯೆಗೆ ಸ್ಥಳೀಯರು ಬರಬೇಡಿ: ಮಹಾಕುಂಭ ಮೇಳದ ಹಿನ್ನೆಲೆಯಲ್ಲಿ ಮೇಳಕ್ಕೆ ಆಗಮಿಸುವ ಭಕ್ತರು ಕಾಶಿ, ಅಯೋಧ್ಯೆ ಸೇರಿದಂತೆ ಹಲವು ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಿದ್ದು, ಜ.26ರಂದು 25 ಲಕ್ಷಕ್ಕೂ ಹೆಚ್ಚು ಜನರು ಅಯೋಧ್ಯೆಗೆ ಆಗಮಿಸಿದ್ದರು. ಇನ್ನು ಮೌನಿ ಅಮಾವಾಸ್ಯೆಯಂದು ಕುಂಭ ಮೇಳಕ್ಕೆ 10 ಕೋಟಿ ಜನರು ಆಗಮಿಸುವ ನಿರೀಕ್ಷೆ ಇದ್ದು, ಅಯೋಧ್ಯೆಗೂ ಹೆಚ್ಚಿನ ಜನರು ಭೇಟಿ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆ ಸುತ್ತಮುತ್ತ ಇರುವ ಪ್ರದೇಶಗಳ ಭಕ್ತರು ಕೆಲವು ದಿನಗಳವರೆಗೆ ದೇವಾಲಯಕ್ಕೆ ಭೇಟಿ ನೀಡಬೇಡಿ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮನವಿ ಮಾಡಿದೆ.
ಜ.26ರ ಬಳಿಕ ಅಯೋಧ್ಯೆಗೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಭಕ್ತರನ್ನು ನಿಯಂತ್ರಿಸುವುದು ಮತ್ತು ಪ್ರತಿಯೊಬ್ಬರಿಗೂ ಬಾಲ ರಾಮನ ದರ್ಶನಕ್ಕೆ ವ್ಯವಸ್ಥೆ ಮಾಡುವುದು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ.
ಪ್ರಯಾಗರಾಜ್ನಲ್ಲಿ ರಜೆ ಘೋಷಣೆ: ಕೋಟ್ಯಂತರ ಭಕ್ತರು ಕಳೆದ 2 ದಿನಗಳಿಂದ ಪ್ರಯಾಗರಾಜ್ಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜನವರಿ 28, 29 ಮತ್ತು 30 ರಂದು 1ರಿಂದ 8ನೇ ತರಗತಿ ಮಕ್ಕಳಿಗೆ ರಜೆ ಘೋಷಿಸಲಾಗಿದೆ. ಅಲಹಾಬಾದ್ ಹೈಕೋರ್ಟ್ಗೂ ರಜೆ ನೀಡಲಾಗಿದೆ.
1000 ವೈದ್ಯಕೀಯ ಸಿಬ್ಬಂದಿ ನಿಯೋಜನೆ: ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 1,000 ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮಹಾಕುಂಭ ನಗರದಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 30 ಕ್ಕೂ ಹೆಚ್ಚು ವೈದ್ಯರನ್ನು ನಿಯೋಜಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಬಿಗಿ ಭದ್ರತೆ: ಕೋಟ್ಯಂತರ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಭದ್ರತೆ ಒದಗಿಸಲಾಗಿದೆ. ಎಐ ಆಧಾರಿತ ಸಿಸಿಟಿವಿ ಕ್ಯಾಮರಾಗಾಳನ್ನು ನಗರದಾದ್ಯಂತ ಅಳವಡಿಸಲಾಗಿದ್ದು, ಡ್ರೋನ್ ಮೂಲಕವೂ ಜನರ ಮೇಲೆ ನಿಗಾ ಇಡಲಾಗಿದೆ. ಜತೆಗೆ, ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸ್ಥಳೀಯರಿಗೂ ಸಹ ಸಂಗಮಕ್ಕೆ ಆಗಮಿಸಲು ದ್ವಿಚಕ್ರ ವಾಹನ ಬಳಸದಂತೆ ಸೂಚಿಸಲಾಗಿದೆ.
ಬೆ.6.45ಕ್ಕೆ ಪುಷ್ಪವೃಷ್ಟಿ: ಮೌನಿ ಅಮಾವಾಸ್ಯೆ ಅಮೃತ ಸ್ನಾನ ಹಿನ್ನೆಲೆಯಲ್ಲಿ ಬೆಳಗಿನ ಜಾವದಿಂದಲೇ ಭಕ್ತರು ಪುಣ್ಯ ಸ್ನಾನದಲ್ಲಿ ಪಾಲ್ಗೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 6.45 ಕ್ಕೆ ಭಕ್ತರ ಮೇಲೆ ಹೆಲಿಕಾಪ್ಟರ್ಗಳ ಮೂಲಕ ಪುಷ್ಪವೃಷ್ಟಿ ಮಾಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.