

ಶಿವಮೊಗ್ಗ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನ.23ರವರೆಗೆ ಜಿಲ್ಲಾದ್ಯಂತ ತಂಬಾಕುಮುಕ್ತ ಅಭಿಯಾನ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಜಿಲ್ಲಾ ಮಟ್ಟದ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಪ್ರಚಾರದ ಪೋಸ್ಟರ್ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ದೇಶದಲ್ಲಿ ತಡೆಗಟ್ಟಬಹುದಾದ ರೋಗಗಳು ಮತ್ತು ಸಾವಿಗೆ ತಂಬಾಕು ಪ್ರಮುಖ ಕಾರಣ. ಇದರ ಪರಿಣಾಮವಾಗಿ ಪ್ರತಿವರ್ಷ 1.35 ಮಿಲಿಯನ್ ಸಾವುಗಳು ಸಂಭವಿಸುತ್ತಿವೆ. ಹದಿಹರೆಯದಲ್ಲಿ ತಂಬಾಕು ಸೇವಿಸುವವರ ಪ್ರಮಾಣ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.
ಈ ಅಭಿಯಾನದ ಅಂಗವಾಗಿ ಜಿಲ್ಲೆಯ ಎಲ್ಲ ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಚಿತ್ರಬರಹ, ಪ್ರಬಂಧ ಮುಂತಾದ ಸ್ಪರ್ಧೆ ಏರ್ಪಡಿಸುವ ಮೂಲಕ ಯುವಜನರಲ್ಲಿ ಅರಿವು ಮೂಡಿಸಲಾಗುವುದು. ಶಾಲಾಕಾಲೇಜಿನ ಸುತ್ತಮುತ್ತ ಪ್ರದೇಶದಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ಹಾಗೂ ಮಾರಾಟ ಮಾಡಿದವರ ವಿರುದ್ಧ ದಂಡವಿಧಿಸುವುದಲ್ಲದೆ ಅಗತ್ಯ ಕಾನೂನು ಕ್ರಮಕ್ಕೆ ಶಿಫಾರಸು ಎಂದು ಹೇಳಿದರು.
ಪ್ರತಿ ತಾಲೂಕಿನ ಮೂರು ಗ್ರಾಪಂ ಸೇರಿದಂತೆ ಒಟ್ಟು 21 ಗ್ರಾಪಂಗಳನ್ನು ಮುಂದಿನ ಎರಡು ತಿಂಗಳಲ್ಲಿ ತಂಬಾಕುಮುಕ್ತ ಗ್ರಾಮಗಳನ್ನಾಗಿ ಮಾಡಲಾಗುವುದು. ಜಿಲ್ಲೆಯಲ್ಲಿ ಕನಿಷ್ಠ 160 ಶಾಲಾಕಾಲೇಜುಗಳನ್ನು ತಂಬಾಕುಮುಕ್ತ ಶೈಕ್ಷಣಿಕ ಸಂಸ್ಥೆಗಳಾಗಿ ಘೋಷಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಡಿಎಚ್‌ಒ ಡಾ. ನಟರಾಜ್, ಆರ್‌ಸಿಎಚ್ ಡಾ.ನಾಗರಾಜ ನಾಯ್ಕ, ಜಿಪಂ ಉಪಕಾರ್ಯದರ್ಶಿ ಜಯಲಕ್ಷ್ಮೀ ಮುಂತಾದವರಿದ್ದರು.