

ಬೆಂಗಳೂರು: ಇಂದು ಸಚಿವ ಸಂಪುಟ ಸಭೆಯ ನಡೆದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್ನ ಐದು ಗ್ಯಾರಂಟಿಗಳಲ್ಲಿ ಎಲ್ಲವನ್ನೂ ಈ ವರ್ಷವೇ ಜಾರಿ ಮಾಡುವುದಾಗಿ ಹೇಳಿದ್ದಾರೆ. ಈ ಸಂದರ್ಭ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಸಿಎಂ ಸಿದ್ದರಾಮಯ್ಯ, ಪ್ರತೀ ಮನೆಯ ಒಡತಿಗೂ 2000 ರೂ. ನೀಡುವುದಾಗಿ ಘೋಷಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿಎಂ, "ನಾವು ಹೇಳಿರುವುದು ಮನೆ ಯಜಮಾನಿ ಖಾತೆಗೆ 2000 ರೂ. ಜಮೆ ಮಾಡುತ್ತೇವೆ. ಅವರ ಅಕೌಂಟ್ಗೆ ತಿಂಗಳಿಗೆ 2 ಸಾವಿರ ರೂ. ಜಮಾ ಮಾಡುತ್ತೇವೆ ಎಂದಿದ್ದೇವೆ. ಆದರೆ ಇದಕ್ಕಾಗಿ ಅಕೌಂಟ್ ನಂಬರ್, ಆಧಾರ್ ನಂಬರ್, ಅರ್ಜಿ ಮುಂತಾದವನ್ನು ನೀಡಬೇಕು. ನಂತರ ಇಲಾಖೆಯವರು ಈ ಮಾಹಿತಿಯನ್ನು ಪ್ರಾಸೆಸ್ ಮಾಡಿ ಆಗಸ್ಟ್ 15ನೇ ತಾರೀಕಿನಿಂದ ಈ ಯೋಜನೆಯನ್ನು ಜಾರಿಗೆ ತರುತ್ತಾರೆ. ಈಗಾಗಲೇ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯತ್ತಿರುವವರಿಗೂ ಈ ಭತ್ಯೆ ಸಿಗಲಿದೆ. ಈ ಯೋಜನೆ ಎಲ್ಲಾ ಬಿಪಿಎಲ್ ಹಾಗೂ ಎಪಿಎಲ್ ಮಹಿಳೆಯರಿಗೆ ಈ ಲಾಭ ಸಿಗಲಿದೆ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಈ ಹಣ ಅತ್ತೆಗೆ ನೀಡುವುದೋ, ಸೊಸೆಗೆ ನೀಡುವುದೋ ಎಂಬ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, "ಈ ಯೋಜನೆಯ ಫಲಾನುಭವಿಗಳಾಗಲು ಜನರು ಬ್ಯಾಂಕ್ ಅಕೌಂಟ್ ದಾಖಲೆ, ಆಧಾರ್ ಕಾರ್ಡ್ ಕೊಡಬೇಕು. ಆಗಲೇ ಮನೆ ಯಜಮಾನಿ ಖಾತೆಗೆ ಎರಡು ಸಾವಿರ ಜಮಾ ಆಗುತ್ತೆ. ಇನ್ನು ಈ ಹಣ ಅತ್ತೆಗೆ ತಲುಪುತ್ತದೋ ಸೊಸೆಗೆ ತಲುಪುತ್ತದೋ ಎನ್ನುವ ವಿಚಾರ, ಮನೆಯವರಿಗೇ ಬಿಟ್ಟಿದ್ದು. ಯಾರು ಮನೆಯ ಯಜಮಾನಿ ಎಂಬ ವಿಚಾರದ ಮಾಹಿತಿಯನ್ನು ಕುಟುಂಬದವರೇ ನೀಡಬೇಕು. ಕುಟುಂಬದವರು ಕೊಟ್ಟ ಮಾಹಿತಿ ಆಧಾರದ ಮೇಲೆ ಫಲಾನುಭವಿ ಯಾರು ಎನ್ನುವುದು ನಿರ್ಧಾರ ಆಗುತ್ತದೆ" ಎಂದು ಹೇಳಿದ್ದಾರೆ.