

ನವದೆಹಲಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ತೆರಳಿದ ಪ್ರಥಮ ಭಾರತೀಯ ಗಗನಯಾನಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ಹವಾಮಾನ ಪೂರಕವಾಗಿದ್ದರೆ ಜುಲೈ 15ರಂದು ಭೂಮಿಗೆ ಮರಳಲಿದ್ದಾರೆ. ಶುಕ್ಲಾ ಜತೆ ಇತರ ಮೂವರು ಗಗನಯಾತ್ರಿಗಳು ಕೂಡ ಆಕ್ಸಿಯಂ4 ಮಿಷನ್ (ಎಎಕ್ಸ್) ಅಂಗವಾಗಿ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಜೂನ್ 25ರಂದು ಐಎಸ್ಎಸ್ಗೆ ತೆರಳಿದ್ದರು. ಆಕ್ಸಿಯಂ ಸ್ಪೇಸ್, ನಾಸಾ ಮತ್ತು ಇಸ್ರೋ ಸಹಭಾಗಿತ್ವದ ಈ ಮಿಷನ್ಗೆ ‘ಆಕಾಶ್ ಗಂಗಾ’ ಎಂದು ಹೆಸರಿಸಲಾಗಿತ್ತು. ಇದು ಭಾರತದ ಮುಂಬರುವ ಗಗನಯಾನ ಮಿಷನ್ ಮತ್ತು ಪ್ರಸ್ತಾಪಿತ ಭಾರತೀಯ ಅಂತರಿಕ್ಷ ನಿಲ್ದಾಣ (ಬಿಎಎಸ್) ಮುಂತಾದ ಮಾನವಸಹಿತ ಬಾಹ್ಯಾಕಾಶ ಯಾನಗಳ ಮಹತ್ವಾಕಾಂಕ್ಷೆಯ ಯೋಜನೆಗಳತ್ತ ಒಂದು ದೊಡ್ಡ ಮುನ್ನೆಗೆತವಾಗಿದೆ.
ಶುಕ್ಲಾ ಚಲಾಯಿಸುವ ಡ್ರ್ಱಾಗನ್ ಗಗನನೌಕೆ ಜುಲೈ 15ರಂದು ವಾತಾವರಣ ತಿಳಿಯಾಗಿದ್ದರೆ ಸುರಕ್ಷಿತವಾಗಿ ಭೂಮಿಯನ್ನು ತಲುಪಿ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಕ್ಯಾಲಿಫೋರ್ನಿಯಾ ಕರಾವಳಿಯಾಚೆ ಶಾಂತ ಮಹಾಸಾಗರದಲ್ಲಿ ಇಳಿಯಲಿದೆ. ಸೋಮವಾರ ಸಂಜೆ 4.30ಕ್ಕೆ ನೌಕೆ ಐಎಸ್ಎಸ್ನಿಂದ ಕಳಚಿಕೊಳ್ಳಲಿದೆ (ಅನ್ಡಾಕ್) ಎಂದು ನಾಸಾ ಅಧಿಕಾರಿ ಸ್ಟೀವ್ ಸ್ಟಿಚ್ ತಿಳಿಸಿದ್ದಾರೆ. ಪೆಗ್ಗಿ ವಿಟ್ಸನ್, ಸ್ಲಾವೊಜ್ ಉಝå್ನಾನ್ಸ್ಕಿ ಮತ್ತು ಟೈಬರ್ ಕಪು ಅವರು ಐಎಸ್ಎಸ್ನಿಂದ ಮರಳಲಿರುವ ಇತರ ಮೂವರು ಗಗನಯಾತ್ರಿಗಳು.