ಎಣ್ಣೆ ಪಾರ್ಟಿ ಮಾಡಿದ ನಾಲ್ವರು ಪಿಯು ವಿದ್ಯಾರ್ಥಿನಿಯರಿಗೆ ಕಾಲೇಜಿನಿಂದ ಗೇಟ್​ ಪಾಸ್​: ವೈರಲ್​ ವಿಡಿಯೋ ತಂದಿಟ್ಟ ಸಂಕಟ!

enne Party 31 dec 19
Published on

ಚೆನ್ನೈ: ಮದ್ಯಪಾನ ಮಾಡಿದ ಆರೋಪದ ಮೇಲೆ ನಾಲ್ವರು ಪಿಯು ವಿದ್ಯಾರ್ಥಿನಿಯರನ್ನು ತಮಿಳುನಾಡಿನ ಮೈಲಾಡುತುರೈನಲ್ಲಿರುವ ಖಾಸಗಿ ಕಾಲೇಜಿನಿಂದ ಆಡಳಿತ ಮಂಡಳಿ ವಜಾಗೊಳಿಸಿದೆ.

ಮೂಲಗಳ ಪ್ರಕಾರ ಮೈಲಾಡುತುರೈನಿಂದ 10 ಕಿ.ಮೀ ದೂರದಲ್ಲಿರುವ ಗ್ರಾಮವೊಂದರ ಕಾಲೇಜು ವಿದ್ಯಾರ್ಥಿನಿಯ ಹುಟ್ಟುಹಬ್ಬವಿತ್ತು. ಈ ವೇಳೆ ಆಯೋಜಿಸಿದ್ದ ಪಾರ್ಟಿಯಲ್ಲಿ ಆಕೆಯ ಸಹಪಾಠಿಗಳು ಸಹ ಭಾಗಿಯಾಗಿದ್ದರು. ಇದೇ ವೇಳೆ ವಿದ್ಯಾರ್ಥಿನಿಯರು ಬಿಯರ್​ ಸೇವಿಸುತ್ತಿರುವುದನ್ನು ಬೇರೊಬ್ಬರು ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದು 6 ವಾರಗಳಿಗೂ ಮುಂಚೆಯೇ ನಡೆದಿದ್ದು, ಡಿಸೆಂಬರ್​ 24ರಂದು ಕಾಲೇಜು ಆಡಳಿತ ಮಂಡಳಿಯ ಗಮನಕ್ಕೆ ಬಂದಿದೆ.

ಘಟನೆ ಬಗ್ಗೆ ವಿದ್ಯಾರ್ಥಿನಿಯರ ಪಾಲಕರನ್ನು ವಿಚಾರಣೆ ಮಾಡಿದಾಗ ಅವರಿಗೂ ತಿಳಿಸದೇ ಮನೆಯಲ್ಲಿ ಪಾರ್ಟಿ ಆಯೋಜನೆ ಮಾಡಿರುವು ಖಚಿತವಾದ ಬಳಿಕವೇ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿನಿಯರನ್ನು ವಜಾಗೊಳಿಸಿ ಆದೇಶಿಸಿದೆ. ಕಾಲೇಜಿನ ಶಿಸ್ತು ಸಲಹಾ ಸಮಿತಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ಬಗ್ಗೆ ಕಾಲೇಜು ಪ್ರಾಂಶುಪಾಲರಾದ ಸ್ವಾಮಿನಾಥನ್​ ಮಾತನಾಡಿ, ವಿಡಿಯೋದಲ್ಲಿ ಕಾಲೇಜು ಸಮವಸ್ತ್ರ ಧರಿಸಿ ಮದ್ಯ ಸೇವನೆ ಮಾಡುತ್ತಿರುವ ಮೂವರು ವಿದ್ಯಾರ್ಥಿನಿಯರು ಸೇರಿ ಒಟ್ಟು ನಾಲ್ವರನ್ನು ಸಭೆಯ ಬಳಿಕ ವಜಾಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಕರಣದ ಬಗ್ಗೆ ಭಾರತಿದಾಸನ್​ ವಿಶ್ವವಿದ್ಯಾಲಯದ ಉಪಕುಲಪತಿ ಪಿ. ಮಣಿಶಂಕರ್​ ಮಾತನಾಡಿ ಈ ವಿಚಾರವಾಗಿ ಈವರೆಗೂ ಕಾಲೇಜು ಆಡಳಿತ ಮಂಡಳಿಯಾಗಲಿ ಅಥವಾ ವಿದ್ಯಾರ್ಥಿನಿಯರಾಗಲಿ ನಮ್ಮ ಗಮನಕ್ಕೆ ತಂದಿಲ್ಲ. ಈ ಬಗ್ಗೆ ವರದಿ ನೀಡುವಂತೆ ಪ್ರಾಂಶುಪಾಲರ ಬಳಿ ಕೇಳಿದ್ದೇವೆ ಎಂದಿದ್ದಾರೆ.

ಕಾಲೇಜು ಆವರಣ ಹೊರಗಡೆ ವಿದ್ಯಾರ್ಥಿನಿಯರು ಮದ್ಯ ಸೇವಿಸಿದ್ದರೂ ಕೂಡ ಇತರರಿಗೆ ಬಲವಾದ ಸಂದೇಶ ರವಾನಿಸಲು ಈ ಕಠಿಣ ಕ್ರಮ ತೆಗೆದುಕೊಂಡಿರುವುದಾಗಿ ಕಾಲೇಜು ಆಡಳಿತ ಮಂಡಳಿ ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net