ಶೀಘ್ರವೇ ಟಿಕೆಎಂ ಸಮಸ್ಯೆ ಸುಖಾಂತ್ಯ

4 bidadi photo 1
Published on

ಬಿಡದಿ : ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್‌ (ಟಿಎಕೆಂ) ಸಂಸ್ಥೆಯ ಸಮಸ್ಯೆ ಶೀಘ್ರವೇ ಸುಖಾಂತ್ಯವಾಗಲಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ವಿಶ್ವಾಸ ವ್ಯಕ್ತಪಡಿಸಿದರು.

ಬಿಡದಿ ಟಿಕೆಎಂ ಘಟಕಕ್ಕೆ ಶಾಸಕ ಎ.ಮಂಜುನಾಥ್, ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಎಸ್‌ಪಿ ಗಿರೀಶ್ ಕಾರ್ಮಿಕ ಇಲಾಖೆ ಕಾರ್ಯದರ್ಶಿಗಳ ಜತೆ ಗುರುವಾರ ಭೇಟಿ ನೀಡಿದ ಸಚಿವರು, ಕಾರ್ಮಿಕರ ಸಂಘಟನೆ ಹಾಗೂ ಟಿಕೆಎಂ ಆಡಳಿತದೊಂದಿಗೆ ಪ್ರತ್ಯೇಕ ಸಭೆ ನಡೆಸಿ, ನಂತರ ಪ್ರತಿಭಟನಾನಿರತ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು.

ಒಂದೂವರೆ ಗಂಟೆ ಆಡಳಿತ ಮಂಡಳಿ ಜತೆ ಚರ್ಚೆ ನಡೆಸಿದ್ದು, ಕಾರ್ಮಿಕರಿಂದ ಅಂಡರ್ ಟೇಕಿಂಗ್ (ಮುಚ್ಚಳಿಕೆ) ಬರೆಸಿಕೊಳ್ಳುವ ಷರತ್ತು ಬಿಡಬೇಕು, ಅಮಾನತಾಗಿರುವ ಕಾರ್ಮಿಕರಿಗೆ ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂದು ತಿಳಿಸಲಾಗಿದೆ. ಇದಕ್ಕೆ ಆಡಳಿತ ಮಂಡಳಿ ಸಕಾರಾತ್ಮಕವಾಗಿ ಸ್ಪಂದಿಸಿದೆ. ಒಂದು ದಿನ ಕಾಲಾವಕಾಶ ಕೋರಿದ್ದು, ಕಂಪನಿ ಮತ್ತು ಕಾರ್ಮಿಕರ ನಡುವಿನ ಸಮಸ್ಯೆ ಸುಖಾಂತ್ಯವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಮಿಕರಿಗೆ ತಿಳಿಹೇಳಿದ ಸಚಿವ ಕಾರ್ಮಿಕರ ರಕ್ಷಣೆಗಾಗಿಯೇ ಕಾರ್ಮಿಕ ಇಲಾಖೆ ಇದೆ. ಹೇಳಿದ್ದೆಲ್ಲ ತೀರ್ಮಾನ ಆಗಬಾರದು. ಆಲೋಚನೆ ಮಾಡಿ ತೀರ್ಮಾನ ಕೈಗೊಳ್ಳುವವರೇ ನಾಯಕರಾಗುತ್ತಾರೆ. ಇದನ್ನು ಕಾರ್ಮಿಕ ಸಂಘಟನೆ ಮುಖಂಡರು ಅರಿತುಕೊಳ್ಳಬೇಕು. ಒಳ್ಳೆಯ ಕಾರ್ಖಾನೆಯಲ್ಲಿ ಉದ್ಯೋಗ ಪಡೆದುಕೊಳ್ಳುವುದೇ ಕಷ್ಟವಾಗಿದ್ದು, ಸಿಕ್ಕಿರುವ ಕೆಲಸ ಉಳಿಸಿಕೊಳ್ಳಬೇಕು ಎಂದು ಕಾರ್ಮಿಕರಿಗೆ ಶಿವರಾಮ್ ಹೆಬ್ಬಾರ್ ತಿಳಿ ಹೇಳಿದರು.

ಶಾಸಕ ಎ.ಮಂಜುನಾಥ್ ಮಾತನಾಡಿ, ಕಾರ್ಮಿಕರು ಹೋರಾಟ ಆರಂಭಿಸಿ 88 ದಿನವಾಗಿದೆ. ಅಂದಿನಿಂದ ಇಂದಿನವರೆಗೆ ಹೋರಾಟದಲ್ಲಿ ರಾಜಕೀಯ ಬೆರೆಸದೆ ಸರ್ಕಾರ, ಸಚಿವರ ಗಮನ ಸೆಳೆಯುವ ಕೆಲಸ ಮಾಡಿ ಕಾರ್ಮಿಕರಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದೇನೆ. ಅಧಿಕಾರಿಗಳು, ಆಡಳಿತ ಮಂಡಳಿ, ಕಾರ್ಮಿಕ ಸಂಘಟನೆ ಜತೆಗೆ ಹಲವು ಬಾರಿ ಸಭೆಗಳನ್ನು ನಡೆಸಿದ ಲವಾಗಿ ಸಮಸ್ಯೆ ಬಗೆಹರಿಯುವ ಲಕ್ಷಣ ಗೋಚರಿಸಿದೆ ಎಂದರು.

ಕಾರ್ಮಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಾಜ್‌ಕುಮಾರ್ ಕತ್ರಿ, ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್, ಪುರಸಭೆ ಅಧ್ಯಕ್ಷೆ ಸರಸ್ವತಿ ರಮೇಶ್, ಉಪಾಧ್ಯಕ್ಷ ಸಿ.ಲೋಕೇಶ್, ಟಿಕೆಎಂ ಕಾರ್ಮಿಕ ಸಂಘದ ಅಧ್ಯಕ್ಷ ಚಕ್ಕೆರೆ ಪ್ರಸನ್ನ, ಜಿಲ್ಲಾ ಕಾರ್ಮಿಕ ಅಧಿಕಾರಿ ಅಕ್ರಂ ಪಾಷಾ, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು ಮತ್ತಿತರರು ಇದ್ದರು.

ಕ್ಷಮೆ ನೀಡಿ, ಕೆಲಸ ಮಾಡಲು ಅವಕಾಶ ಕೊಡಿ

ಕಾರ್ಮಿಕರು ಕಾರ್ಖಾನೆ ವಿರೋಧಿಗಳಲ್ಲ, ಕೂಡಲೇ ಅಮಾನತುಪಡಿಸಿರುವ 72 ಕಾರ್ಮಿಕರಿಗೆ ಕ್ಷಮೆ ನೀಡಿ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ಆಡಳಿತ ಮಂಡಳಿಗೆ ವಿನಂತಿ ಮಾಡಲಾಗಿದೆ. ಮುಚ್ಚಳಿಕೆ ಬರೆದುಕೊಟ್ಟು ಕೆಲಸ ಮಾಡುವ ಕಾರ್ಖಾನೆಯ ಷರತ್ತನ್ನು ಸರ್ಕಾರ ಒಪ್ಪುವ ಪ್ರಶ್ನೆಯೇ ಇಲ್ಲ, ಈ ಷರತ್ತನ್ನು ಕೂಡಲೇ ಹಿಂಪಡೆಯುವಂತೆ ಸ್ಪಷ್ಟವಾಗಿ ಸೂಚಿಸಿರುವುದಾಗಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು. ಆಡಳಿತ ಮಂಡಳಿಗಳು ಕಾರ್ಮಿಕರ ಮೇಲೆ ಮುಚ್ಚಳಿಕೆ ಬರೆದುಕೊಡುವಂತೆ ಒತ್ತಡ ಹಾಕುವುದು ಸರಿಯಿಲ್ಲ. ಕೆಲಸಕ್ಕೆ ಸೇರುವಾಗಲೇ ಕಾರ್ಮಿಕರು ಮುಚ್ಚಳಿಕೆ ಕೊಟ್ಟಿರುತ್ತಾರೆ. ಮತ್ತೆ ಪಡೆಯಲು ಅವಕಾಶವಿರುವುದಿಲ್ಲ. ಆದ್ದರಿಂದ ಈ ಷರತ್ತು ಹಿಂಪಡೆಯುವಂತೆ ಆದೇಶಿಸಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net