

Tirupati Temple: ಇದೇ ಸೆ.07ರಂದು ಸಂಪೂರ್ಣ ಚಂದ್ರಗ್ರಹಣ ಆವರಿಸಲಿದೆ. ಚಂದ್ರನು ಭೂಮಿಯ ನೆರಳಿನಲ್ಲಿ ಜಾರಿದಾಗ, ಗಾಢ ಕೆಂಪು ಬಣ್ಣದಲ್ಲಿ ಹೊಳೆಯುತ್ತಾನೆ. ಇದನ್ನು ಸಾಮಾನ್ಯವಾಗಿ “ರಕ್ತ ಚಂದ್ರ” ಎಂದು ಕರೆಯಲಾಗುತ್ತದೆ. ಈ ಒಂದು ಕ್ಷಣವನ್ನು ಕಣ್ತುಂಬಿಕೊಳ್ಳಲು ಅಸಂಖ್ಯಾತ ಖಗೋಳ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಮತ್ತೊಂದೆಡೆ, ಈ ಸಮಯದಲ್ಲಿ ತಿರುಪತಿ ದೇಗುಲ ಬಂದ್ ಆಗಲಿದ್ದು, ಭಕ್ತಾಧಿಗಳಿಗೆ ಪ್ರವೇಶವಿರವುದಿಲ್ಲ.
ಸೆಪ್ಟೆಂಬರ್ 7ರಂದು ಕಾಣಿಸಿಕೊಳ್ಳುವ ಚಂದ್ರಗ್ರಹಣದಿಂದಾಗಿ ಆಂಧ್ರದಲ್ಲಿರುವ ತಿರುಪತಿ ದೇವಸ್ಥಾನವನ್ನು ಮುಚ್ಚಲಾಗುವುದು ಎಂದು ಈಗಾಗಲೇ ಟಿಟಿಡಿ (ದೇವಾಲಯದ ಆಡಳಿತ ಮಂಡಳಿ) ಸ್ಪಷ್ಟಪಡಿಸಿದೆ. ದೇವಸ್ಥಾನವು ಭಾನುವಾರ ಮಧ್ಯಾಹ್ನ 3.30ರಿಂದ ಸೋಮವಾರ ಬೆಳಗಿನ ಜಾವ 3 ಗಂಟೆಯವರೆಗೆ ಅಂದರೆ 12 ಗಂಟೆಗಳ ಕಾಲ ಬಂದ್ ಆಗಿರುತ್ತದೆ. ಈ ವೇಳೆ ಯಾರಿಗೂ ಪ್ರವೇಶ ಇರುವುದಿಲ್ಲ.
ಭಾನುವಾರ ರಾತ್ರಿ 9.50ಕ್ಕೆ ಚಂದ್ರಗ್ರಹಣ ಪ್ರಾರಂಭವಾಗಲಿದೆ. ಸೋಮವಾರ (ಸೆ.08) ಬೆಳಗಿನ ಜಾವ 1.31 ರವರೆಗೆ ಚಂದ್ರಗ್ರಹಣ ಮುಂದುವರಿಯುತ್ತದೆ. ಗ್ರಹಣ ಸಮಯಕ್ಕೆ 6 ಗಂಟೆಗಳ ಮೊದಲು ದೇವಾಲಯದ ಬಾಗಿಲುಗಳು ಮುಚ್ಚಲ್ಪಡುತ್ತವೆ ಎಂದು ಟಿಟಿಡಿ ಮಾಹಿತಿ ಹಂಚಿಕೊಂಡಿದೆ. ಸೋಮವಾರ ಬೆಳಗಿನ ಜಾವ 3 ಗಂಟೆಗೆ ಸುಪ್ರಭಾತದೊಂದಿಗೆ ದೇವಾಲಯದ ಬಾಗಿಲು ತೆರೆಯಲಾಗುವುದು ಮತ್ತು ಶುದ್ಧೀಕರಣ ಮಾಡಲಾಗುತ್ತದೆ. ಅದಾದ ಬಳಿಕ, ಮುಂದಿನ ಪೂಜಾ ಕಾರ್ಯಗಳನ್ನು ಮುಂದುವರಿಸಲಾಗುವುದು.
ಸೋಮವಾರ ಬೆಳಗ್ಗೆ 6 ಗಂಟೆಯಿಂದ ಭಕ್ತರಿಗೆ ಎಂದಿನಂತೆ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ನೀಡಲಾಗುವುದು. ಚಂದ್ರಗ್ರಹಣದ ಕಾರಣ, ಭಾನುವಾರದಂದು ನಡೆಯಲಿರುವ ಊಂಜಲ್ ಸೇವೆ, ಅರ್ಜಿತ ಬ್ರಹ್ಮೋತ್ಸವ ಮತ್ತು ಸಹಸ್ರದೀಪಲಂಕಾರ ಸೇವೆಯನ್ನು ರದ್ದುಗೊಳಿಸಲು ಟಿಟಿಡಿ ನಿರ್ಧರಿಸಿದೆ,(ಏಜೆನ್ಸೀಸ್).