ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಕೇಸ್​ಗೆ ಹೊಸ ಟ್ವಿಸ್ಟ್​​​ ಕೊಟ್ಟ ಸಿಬಿಐ...! | Tirupati laddu CBI arrests

laddu
Published on

ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದವೆಂದರೆ ಅದರ ಸ್ವಾದವೇ ಬೇರೆ. ದೇಶ - ವಿದೇಶಗಳಿಂದಲೂ ತಿಮ್ಮಪ್ಪನ ಭಕ್ತರು ಈ ಪ್ರಸಾದವನ್ನು ಅನುಭವಿಸಲು ಬಯಸುತ್ತಾರೆ. ಅದೆಷ್ಟೋ ಜನ ಆನ್‌ಲೈನ್ ಮೂಲಕ ಕೂಡ ಇಲ್ಲಿಂದ ಲಡ್ಡುಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ, ಇದೀಗ ವಿಶ್ವವಿಖ್ಯಾತ ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದದ ಕುರಿತು ವಾದ - ವಿವಾದಗಳು ನಡೆಯುತ್ತಿದೆ. ಈ ಮಧ್ಯೆ ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಕೇಸ್​ಗೆ ಸಿಬಿಐ ಮೇಜರ್​ ಟ್ವಿಸ್ಟ್​​ ಕೊಟ್ಟಿದೆ. ತಿಮ್ಮಪ್ಪನ ಪ್ರಸಾದವಾಗಿ ತಿರುಪತಿಯಲ್ಲಿ ತಯಾರಿಸುವ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಮಾಡಲಾಗುತ್ತಿತ್ತು ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದರು. ಸಿಎಂ ಚಂದ್ರಬಾಬು ನಾಯ್ಡು ಹೇಳಿಕೆ ಬೆನ್ನಲ್ಲೇ ಈ ವಿಚಾರ ದೇಶಾದ್ಯಂತ ಸಂಚಲನ ಮೂಡಿಸಿತ್ತು.

ಪ್ರಕರಣ ಬೆನ್ನು ಹತ್ತಿ ಹೋಗಿದ್ದ ಸಿಬಿಐ ಅಧಿಕಾರಿಗಳು ಇದೀಗ ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಕೇಸ್​ನ ತನಿಖೆ ನಡೆಸುತ್ತಿದ್ದಾರೆ. ಟೆಂಡರ್ ಪಡೆಯುವ ಹಂತದಿಂದ ಪೂರೈಕೆ ಹಂತದವರೆಗೂ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತಾರಖಂಡ್ ರಾಜ್ಯದ ರೂರ್ಕಿ ಭೋಲೆ ಬಾಬಾ ಡೈರಿಯ ಮಾಜಿ ನಿರ್ದೇಶಕ ವಿಪಿನ್ ಜೈನ್ ಮತ್ತು ಪೊಮಿಲ್ ಜೈನ್, ಪೂನಂಬಾಕ್ಕಂನ ವೈಷ್ಣವಿ ಡೈರಿಯ ಸಿಇಓ ಅಪೂರ್ವ ಬಂಧಿತ ಆರೋಪಿಗಳು.

ತುಪ್ಪ ಪೂರೈಕೆ ನೆಪದಲ್ಲಿ ಆರೋಪಿಗಳ ವಿರುದ್ಧ ಅನೇಕ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಇದೆ. ತನಿಖೆ ವೇಳೆ ಇದು ದೃಢವಾಗಿದ್ದು, ಹೀಗಾಗಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ತುಪ್ಪದ ಟೆಂಡರ್ ಪಡೆಯಲು ನಕಲಿ ದಾಖಲೆಗಳು, ಸೀಲ್ ಬಳಕೆ ಮಾಡಿದ್ದಾರೆ. ಕೆಲವು ದಾಖಲೆಗಳನ್ನು ತಿರುಚಿದ್ದಾರೆ.

ತುಪ್ಪ ಪೂರೈಕೆಯಲ್ಲೂ ವ್ಯತ್ಯಾಸ ಆಗಿರೋದನ್ನು ಸಿಬಿಐ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ಘಟನೆ ಬಳಿಕ ಟಿಟಿಡಿ ಮರಳಿ ಕರ್ನಾಟಕದ ಕೆಎಂಎಫ್​ನಿಂದ ತುಪ್ಪವನ್ನು ಖರೀದಿ ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net