

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಕೆಸಿನಮನೆ ಅಭಯಾರಣ್ಯದ ಗುಡ್ಡಕ್ಕೆ ಸ್ನೇಹಿತನನ್ನು ಕರೆಸಿಕೊಂಡು ಪರವಾನಗಿ ಇಲ್ಲದ ನಾಡಬಂದೂರಕಿನಿಂದ ಹತ್ಯೆ ಮಾಡಿ ಬೈಕ್, ಹಣ ಮತ್ತು ಚಿನ್ನಾಭರಣ ದೋಚಿದ್ದ ವ್ಯಕ್ತಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 2 ಲಕ್ಷ ರೂ. ದಂಡ ವಿಧಿಸಿದೆ.
ತೀರ್ಥಹಳ್ಳಿಯ ವಾಟಗಾರು ಗ್ರಾಮದ ಭುಜಂಗ ಅಲಿಯಾಸ್ ಪಾನ್ (43) ಜೀವಾವಧಿ ಶಿಕ್ಷೆಗೆ ಒಳಗಾದವ. ಈತ 2013ರ ಜೂ.6ರಂದು ಮಳಲಿಮಕ್ಕಿ ಗ್ರಾಮದ ನಾಗರಾಜ್(35)ನನ್ನು ಕೊಲೆ ಮಾಡಿದ್ದ. ಅಂದು ಕೆಸಿನಮನೆ ಗುಡ್ಡಕ್ಕೆ ಕರೆಸಿಕೊಂಡಿದ್ದ ಭುಜಂಗ, ನಾಡಬದೂಕಿನಿಂದ ನಾಗರಾಜ್ ಮೇಲೆ ಗುಂಡು ಹಾರಿಸಿ ಕೊಲೆಗೈದಿದ್ದ. ಬಳಿಕ ನಾಗರಾಜ್‌ನ ಬೈಕ್, ನಗದು ಹಣ, ಬಂಗಾರದ ಚೈನ್, ಉಂಗುರ ತೆಗೆದುಕೊಂಡು ಪರಾರಿಯಾಗಿದ್ದ.
ಈ ಬಗ್ಗೆ ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿಯಾಗಿದ್ದ ಅಂದಿನ ತೀರ್ಥಹಳ್ಳಿ ಡಿವೈಎಸ್ಪಿ ಓಂಕಾರ್ ನಾಯ್ಕ ಅವರು ಭುಜಂಗನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ್ದು ನ್ಯಾಯಾಧೀಶೆ ಬಿ.ಆರ್.ಪಲ್ಲವಿ ಅವರು ಭುಜಂಗ ಮೇಲಿನ ಆರೋಪಗಳು ಸಾಬೀತಾದ ಹಿನ್ನಲೆಯಲ್ಲಿ ಜೀವಾವಧಿ ಶಿಕ್ಷೆ, 2 ಲಕ್ಷ ರೂ. ದಂಡ ವಿಧಿಸಿ ಸೋಮವಾರ ಆದೇಶಿಸಿದ್ದಾರೆ. ದಂಡ ವಿಧಿಸಲು ವಿಫಲನಾದರೆ ಹೆಚ್ಚುವರಿಯಾಗಿ ಒಂದು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ಪುಷ್ಪಾ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.