ತೀರ್ಥಹಳ್ಳಿಯಲ್ಲಿ ತುಂಬಿದ ನದಿ ದಾಟಿಕೊಂಡು ಅಂತ್ಯಸಂಸ್ಕಾರ

7 smg 6a
Published on

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಕೋಡ್ಲ ಗ್ರಾಮದಲ್ಲಿ ಸ್ಮಶಾನಕ್ಕೆ ತೆರಳಲು ಸಮರ್ಪಕ ರಸ್ತೆ ಇಲ್ಲದೆ ಕುತ್ತಿಗೆವರೆಗೆ ಉಕ್ಕಿ ಹರಿಯುತ್ತಿದ್ದ ಮಾಲತಿ ನದಿಯನ್ನು ಹಾಯ್ದುಕೊಂಡುಹೋಗಿ ಅಂತ್ಯಸಂಸ್ಕಾರ ನೆರವೇರಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡ್ಲು ಗ್ರಾಮದ ತಮ್ಮಯ್ಯ ಗೌಡ(80) ವಯೋಸಹಜವಾಗಿ ಸಾವನ್ನಪ್ಪಿದ್ದರು. ಅವರ ಮೃತದೇಹವನ್ನು ಹೊತ್ತು ಮಾಲತಿ ನದಿಯನ್ನು ದಾಟಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕೋಡ್ಲು ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗುವ ರಸ್ತೆ ಸಮರ್ಪಕವಾಗಿಲ್ಲ. ಮಳೆ ಬಂದರೆ ರಸ್ತೆಯಲ್ಲಿ ನೀರು ಹರಿಯುತ್ತದೆ. ತಮ್ಮಯ್ಯ ಗೌಡ ಮೃತದೇವಹನ್ನು ಹರಿಯುವ ನೀರಿನ ಮಧ್ಯೆ ಆರು ಮಂದಿ ಪ್ರಯಾಸದಿಂದ ಹೊತ್ತೊಯ್ದಿದ್ದಾರೆ.

ಎದೆಮಟ್ಟದವರೆಗೆ ನೀರು ಇದ್ದರೂ ಸಂಬಂಧಿಗಳು, ಗ್ರಾಮಸ್ಥರು ಸ್ಮಶಾನಕ್ಕೆ ಹೊತ್ತು ಸಾಗಿಸಿದ್ದಾರೆ. ಸ್ಮಶಾನಕ್ಕೆ ಸೂಕ್ತ ವ್ಯವಸ್ಥೆ ಇಲ್ಲದಿದ್ದರಿಂದ ಜೋರಾಗಿ ಸುರಿಯುವ ಮಳೆಯಲ್ಲೇ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಶೀಟ್ ಹಾಕಿ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿ ಅಂತ್ಯಸಂಸ್ಕಾರ ಮಾಡಲಾಗಿದೆ.

ಸ್ಮಶಾನದ ಹಾದಿಗೆ ಮಣ್ಣು ಹಾಕಿ ಎತ್ತರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ. ಮಳೆಗಾಲ ಶುರುವಾದರೆ ಈ ಮಾರ್ಗದಲ್ಲಿ ನೀರು ಹರಿಯಲು ಆರಂಭವಾಗುತ್ತದೆ. ಮೂರ್ನಾಲ್ಕು ತಿಂಗಳು ರಸ್ತೆಯಲ್ಲಿ ನೀರು ಹರಿಯುವುದರಿಂದ ಸ್ಮಶಾನಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಹಾಗಾಗಿ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net