ಸ್ನೇಹಿತರ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ

crime
Published on

ಬೆಂಗಳೂರು: ಶಾಲಾ ದಿನಗಳ ಸಹಪಾಠಿಗಳ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಿಡೇದಹಳ್ಳಿ ನಿವಾಸಿ ಮಮತಾ (೩೧) ಮೃತ ದುರ್ದೈವಿ.
ಬಾಗಲಗುಂಟೆ ಠಾಣಾ ವ್ಯಾಪ್ತಿಯ ಸಿಡೇದಹಳ್ಳಿಯಲ್ಲಿ ಬುಧವಾರ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಗಣೇಶ್‌ನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಮಮತಾರಿಗೆ ಕೆಲ ವರ್ಷಗಳ ಹಿಂದೆ ಲೋಕೇಶ್ ಎಂಬಾತನೊಂದಿಗೆ ವಿವಾಹವಾಗಿತ್ತು. ಇವರು ೬ ವರ್ಷದ ಗಂಡು ಮಗುವಿನೊಂದಿಗೆ ದಂಪತಿ ಸಿಡೇದಹಳ್ಳಿಯಲ್ಲಿ ವಾಸವಿದ್ದರು. ಲೋಕೇಶ್ ಫುಡ್ ಡಿಲೆವರಿ ಏಜೆಂಟ್ ಆಗಿ ಕೆಲಸ ಮಾಡಿಕೊಂಡಿದ್ದರು. ಬುಧವಾರ ಮನೆಯಲ್ಲಿದ್ದ ಮಮತಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಲವು ಬಾರಿ ಕರೆ ಮಾಡಿದರು ಪತ್ನಿ ಕರೆ ಸ್ವೀಕರಿಸುತ್ತಿಲ್ಲ ಎಂದು ಪಕ್ಕದ ಮನೆಯವರಿಗೆ ಲೋಕೇಶ್ ಕರೆ ಮಾಡಿ ತಿಳಿಸಿದ್ದರು. ಅದರಂತೆ ಪಕ್ಕದ ಮನೆಯವರು ಬಂದು ನೋಡಿದಾಗ ಮಮತಾ ಆತ್ಮಹತ್ಯೆಗೆ ಶರಣಾಗಿರುವುದು ಗೊತ್ತಾಗಿದೆ.
ಡೆತ್‌ನೋಟ್ ಪತ್ತೆ:
ಸಾವಿಗೂ ಮುನ್ನ, ’ನನಗೆ ಏನಾದರೂ ಆದರೆ ಅದಕ್ಕೆ ಅಶೋಕ್ ಹಾಗೂ ಗಣೇಶ್ ಹೊಣೆ’ ಎಂದು ಮಮತಾ ಡೆತ್ ನೋಟ್ ಬರೆದಿಟ್ಟಿರುವುದು ಪತ್ತೆಯಾಗಿದೆ. ಮಮತಾ ಅವರಿಗೆ ಹೈಸ್ಕೂಲ್ ದಿನಗಳ ಸಹಪಾಠಿಗಳಾಗಿದ್ದ ಅಶೋಕ್ ಹಾಗೂ ಗಣೇಶ್ ಎಂಬ ಇಬ್ಬರು ಆಕೆಗೆ ರಾತ್ರಿ ವೇಳೆಯಲ್ಲಿ ಮೇಸೆಜ್ ಮಾಡುತ್ತಿದ್ದರು. ಹೊರಗಡೆ ಹೋಗೋಣ, ಟ್ರಿಪ್‌ಗೆ ಹೋಗಾಣ ಬಾ ಅಂತಾ ಕರೆಯುತ್ತಿದ್ದರು. ಅಲ್ಲದೇ ಆಕೆಗೆ ಅಶ್ಲೀಲ ಮೆಸೇಜ್ ಕಳಿಸುವುದಲ್ಲದೇ ತಮ್ಮೊಂದಿಗೆ ದೈಹಿಕವಾಗಿ ಸಹಕರಿಸುವಂತೆ ಒತ್ತಾಯಿಸುತ್ತಿದ್ದರು. ಸಹಕರಿಸದಿದ್ದರೆ ನಿನ್ನ ಸಂಸಾರ ಹಾಳು ಮಾಡುವುದಾಗಿ ಬೆದರಿಕೆಯೊಡ್ಡುತ್ತಿದ್ದರು. ಈ ವಿಚಾರ ಮಮತಾ ಪತಿಗೂ ಸಹ ಗೊತ್ತಾಗಿ ಆರೋಪಿಗಳಿಗೆ ಎಚ್ಚರಿಕೆ ಕೂಡ ನೀಡಿದ್ದರು. ಆದರೂ ಸಹ ಆರೋಪಿಗಳು ಮಮತಾ ಅವರಿಗೆ ಕಿರುಕುಳ ನೀಡುವುದನ್ನು ಬಿಟ್ಟಿರಲಿಲ್ಲ ಇದರಿಂದ ಮನನೊಂದ ಅವರು ಡೆತ್‌ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಲೆಮರೆಸಿಕೊಂಡಿರುವವನಿಗಾಗಿ ಶೋಧ:
ಮೃತಳ ಪತಿ ಲೋಕೇಶ್ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಗಣೇಶ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಅಶೋಕ್‌ಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net