ತಿರಂಗಾ ಅಭಿಯಾನಕ್ಕೆ ಶಿವಮೊಗ್ಗದಲ್ಲಿ ಸಿದ್ಧತೆ

dc
Published on

ಶಿವಮೊಗ್ಗ: ಹರ್ ಘರ್ ತಿರಂಗಾ ಅಭಿಯಾನದ ಮೂಲಕ ಜಿಲ್ಲೆಯ ಗ್ರಾಮೀಣ ಭಾಗಕ್ಕೆ 1.09 ಲಕ್ಷ, ನಗರ ಹಾಗೂ ಪಟ್ಟಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ 80 ಸಾವಿರ ಧ್ವಜ ವಿತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದ್ದಾರೆ.

ಹರ್ ಘರ್ ತಿರಂಗಾ ಅಭಿಯಾನದಲ್ಲಿ ಬಳಸುವ ರಾಷ್ಟ್ರ ಧ್ವಜ ಮಾದರಿಯನ್ನು ಅನಾವರಣಗೊಳಿಸಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಆರ್‌ಎಲ್‌ಎಂ ಯೋಜನೆ ಮೂಲಕ ಸ್ವಸಹಾಯ ಸಂಘಗಳ ಸದಸ್ಯರೇ ಧ್ವಜ ಸಿದ್ಧಪಡಿಸಿರುವುದು ವಿಶೇಷವಾಗಿದೆ ಎಂದರು.

ವಿವಿಧ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಅಭಿಯಾನದಲ್ಲಿ ಕೈ ಜೋಡಿಸಿದ್ದಾರೆ. ಕೇಂದ್ರ ಸರ್ಕಾರ ರೂಪಿಸಿರುವ ಧ್ವಜ ಸಂಹಿತೆಯನ್ನು ಎಲ್ಲರೂ ಅನುಸರಿಬೇಕು. ಗ್ರಾಮೀಣ ಮಟ್ಟದಲ್ಲಿ ಗ್ರಾಪಂ ಸಿಬ್ಬಂದಿ ಧ್ವಜ ಸಂಹಿತೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ ಎಂದು ತಿಳಿಸಿದರು.

ಮನೆಗಳ ಮೇಲೆ ಸತತ ಮೂರು ದಿನ ಧ್ವಜ ಹಾರಿಸಬಹುದು. ಸಂಜೆ ಅದನ್ನು ಇಳಿಸುವ ಅಗತ್ಯವಿಲ್ಲ. ಆದರೆ ಪ್ರಸ್ತುತ ಪ್ರತಿ ದಿನ ಧ್ವಜ ಹಾರಿಸುತ್ತಿರುವ ಸರ್ಕಾರಿ ಕಚೇರಿಗಳು, ಗ್ರಾಪಂಗಳಲ್ಲಿ ಮಾತ್ರ ಎಂದಿನಂತೆ ಸಂಜೆ ಧ್ವಜ ಇಳಿಸಬೇಕು. ಮರು ದಿನ ಬೆಳಗ್ಗೆ ಮತ್ತೆ ಹಾರಿಸಬೇಕು. ಸರ್ಕಾರಿ ಇಲಾಖೆಯ ಸಿಬ್ಬಂದಿ ಮನೆಯ ಮೇಲೆ ಧ್ವಜಾರೋಹಣ ಮಾಡುವುದು ಕಡ್ಡಾಯವಾಗಿದೆ ಎಂದು ಡಾ.ಆರ್.ಸೆಲ್ವಮಣಿ ತಿಳಿಸಿದರು.

ಕೆಲವೆಡೆ ಕಳಪೆ ಧ್ವಜಗಳ ಮಾರಾಟ, ಧ್ವಜ ಸಂಹಿತೆಯನ್ನು ಉಲ್ಲಂಘಿಸುವ ಮಾದರಿಯಲ್ಲಿದ್ದ ಧ್ವಜಗಳ ಮಾರಾಟವಾಗಿರುವುದು ಗಮನಕ್ಕೆ ಬಂದ ಕೂಡಲೇ ಅವುಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಧ್ವಜಗಳನ್ನು ಹಾರಿಸಬಾರದು ಎಂದು ಸಾರ್ವಜನಿಕರಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net