ರೈತರಿಗೆ ಸಕಾಲದಲ್ಲಿ ಮಾಹಿತಿ ತಲುಪಿಸುವುದು ಮುಖ್ಯ: ಬೆಂಗಳೂರು ಕೃಷಿ ವಿವಿ ಕುಲಪತಿ ಡಾ. ಎಸ್.ವಿ.ಸುರೇಶ

gkvk
Published on

ಬೆಂಗಳೂರು: ವ್ಯವಸಾಯ ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿಯನ್ನು ರೈತರಿಗೆ ಸಕಾಲದಲ್ಲಿ ತಲುಪಿಸುವ ಕೆಲಸ ಆದಲ್ಲಿ ಅನ್ನದಾತರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಈ ಅಂಶವನ್ನು ಗಮನದಲ್ಲಿರಿಸಿ ಕೃಷಿ ವಿಸ್ತರಣಾ ವಿದ್ಯಾರ್ಥಿಗಳು/ಕಾರ್ಯಕರ್ತರು ಕೆಲಸ ಮಾಡಬೇಕಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ವಿ.ಸುರೇಶ ಅಭಿಪ್ರಾಯಪಟ್ಟರು.

ಬೆಂಗಳೂರು ಕೃಷಿ ವಿವಿ ಕ್ಯಾಂಪಸ್ ಜಿಕೆವಿಕೆಯಲ್ಲಿ ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ (ಎಟಿಐಸಿ), ಕೌಶಲ ಅಭಿವೃದ್ಧಿ ಕೇಂದ್ರ ಹಾಗೂ ‘ವಿಜಯವಾಣಿ’ಯ ‘ರೈತ ಮಿತ್ರ’ ಅಂಕಣದ ಎರಡನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಶುಕ್ರವಾರ ಮಾತನಾಡಿದರು.

ಡಿಜಿಟಲ್ ಯುಗದಲ್ಲಿ ಸಂವಹನ ಮುಖ್ಯ. ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿದ್ದು, ಮಾರುಕಟ್ಟೆ ದರ ಏರಿಳಿತದ ಮಾಹಿತಿ ಕೊರತೆಯನ್ನು ರೈತರು ಅನುಭವಿಸುತ್ತಿದ್ದಾರೆ. ಇದರಿಂದ ಅವರಿಗೆ ಸಕಾಲದಲ್ಲಿ ಬೆಳೆ ಮಾರಾಟ ಮಾಡಲಾಗದೆ ಆದಾಯ ಖೋತಾ ಆಗುತ್ತಿದೆ. ಈ ಕೊರತೆ ನೀಗಿಸಲು ವಿಸ್ತರಣಾ ವಿಭಾಗವು ಕೃಷಿಕರಿಗೆ ನಿರಂತರವಾಗಿ ಮಾಹಿತಿ ಒದಗಿಸಲು ಹೆಚ್ಚು ಸಕ್ರಿಯವಾಗಬೇಕಿದೆ ಎಂದು ಪ್ರತಿಪಾದಿಸಿದರು.

ರೈತ ಪರ ಸಂಶೋಧನೆಗಳು ಹೆಚ್ಚು ಹೆಚ್ಚು ಬಂದಲ್ಲಿ ಅವುಗಳನ್ನು ಕೃಷಿಕರು ಪುರಸ್ಕರಿಸುತ್ತಾರೆ. ಇದರಿಂದ ವಿಶ್ವವಿದ್ಯಾಲಯದ ಕಾರ್ಯವೈಖರಿ ಮೇಲೆ ಇನ್ನಷ್ಟು ವಿಶ್ವಾಸ ಇಡುವಂತಾಗಲಿದೆ. ಜತೆಗೆ ವಿವಿಗಳು ಪರಿಣಾಮಕಾರಿ ಕೆಲಸ ಮಾಡಲು ಸಾಮರ್ಥ್ಯ ವೃದ್ಧಿಸಿಕೊಳ್ಳಬಹುದು ಎಂದು ಕುಲಪತಿ ಕಿವಿಮಾತು ಹೇಳಿದರು.

ಉಳುಮೆಯಿಂದ ಉದ್ದಿಮೆದಾರನವರೆಗೆ:

ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಇಲ್ಲಿನ ಬಹುತೇಕ ಜನರ ಬದುಕು ವ್ಯವಸಾಯ ಕೇಂದ್ರಿತವಾಗಿದೆ. ಆದರೆ, ಸಾಂಪ್ರದಾಯಿಕ ಕೃಷಿ ವಿಧಾನದಿಂದ ರೈತ ತಾನು ಬೆಳೆದ ಬೆಳೆಯನ್ನು ಮಾರ್ಕೆಟಿಂಗ್ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಉಳುಮೆ, ಬಿತ್ತನೆ ಜತೆಗೆ ಉತ್ಪಾದಕ, ಮಾರಾಟಗಾರನಾಗುವ ಜತೆಗೆ ಉದ್ದಿಮೆದಾರನಾಗಿ ಬದಲಾಗಬೇಕಿದೆ. ಇಂತಹ ಸನ್ನಿವೇಶದಲ್ಲಿ ರೈತರ ಬೆನ್ನೆಲುಬಾಗಿ ವಿವಿಯ ವಿಸ್ತರಣಾ ವಿಭಾಗ ನಿಲ್ಲಬೇಕಿದೆ ಎಂದು ಡಾ. ಎಸ್.ವಿ.ಸುರೇಶ ತಿಳಿಸಿದರು.

ಹವಾಮಾನ ವೈಪರೀತ್ಯದಿಂದ ಕೃಷಿಗೆ ಹೊಡೆತ:

‘ವಿಜಯವಾಣಿ’ ಸಂಪಾದಕ ಚನ್ನೇಗೌಡ ಕೆ.ಎನ್. ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಕೃಷಿ ಕ್ಷೇತ್ರಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಕೃಷಿ ಜಮೀನು ಕುಗ್ಗುತ್ತಿದ್ದು, ಇಳುವರಿ ಕೂಡ ಕಡಿಮೆಯಾಗುತ್ತಿದೆ. ನಿರೀಕ್ಷಿತ ಆದಾಯ ಕೈಸೇರದೆ ರೈತರು ಕೃಷಿಯಿಂದ ಹಿಂದೆ ಸರಿಯುವ ಸನ್ನಿವೇಶ ಸೃಷ್ಟಿಯಾಗಿದೆ. ಈ ಸಮಸ್ಯೆಗಳನ್ನು ಹೋಗಲಾಡಿಸಲು ವಿವಿಯ ವಿಸ್ತರಣಾ ಕಾರ್ಯಕರ್ತರು ಹೊಸ ಆವಿಷ್ಕಾರಗಳ ಮೂಲಕ ರೈತರಲ್ಲಿ ವಿಶ್ವಾಸ ವೃದ್ಧಿಸಬೇಕು. ಸ್ವಯಂ ವಿಜ್ಞಾನಿ, ಕೃಷಿ ಡಾಕ್ಟರ್ ರೀತಿ ಕಾರ್ಯನಿರ್ವಹಿಸುವ ಮೂಲಕ ಕೃಷಿ ಕ್ಷೇತ್ರವನ್ನು ಸಬಲಗೊಳಿಸುವ ಸಂಕಲ್ಪ ಕೈಗೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ವಿಜಯವಾಣಿ ಕಾಳಜಿಗೆ ಶಹಬ್ಬಾಷ್‌ಗಿರಿ:

‘ವಿಜಯವಾಣಿ’ ಪ್ರತೀ ಸೋಮವಾರ ಪ್ರಕಟಿಸುವ ‘ರೈತ ಮಿತ್ರ’ ಅಂಕಣ ರೈತರು ಹಾಗೂ ಕೃಷಿ ವಿವಿ ನಡುವೆ ಸೇತುವೆಯಾಗಿ ಮಾರ್ಪಟ್ಟಿದೆ. ರೈತರು ಎದುರಿಸುತ್ತಿರುವ ಕೃಷಿ ಸಂಬಂಧಿತ ಸಂದೇಹಗಳಿಗೆ ವಿಜ್ಞಾನಿಗಳು ನೀಡುವ ಪರಿಹಾರೋಪಾಯಗಳು ಅನ್ನದಾತರಿಗೆ ಸಾಕಷ್ಟು ಉಪಯೋಗವಾಗುತ್ತಿದೆ. ಇಂತಹ ವೇದಿಕೆ ಸೃಷ್ಟಿಗೆ ಪತ್ರಿಕೆಯು ವಿವಿ ಜತೆ ಕೈಜೋಡಿಸಿರುವುದು ಶ್ಲಾಘನೀಯ ಎಂದು ವಿವಿ ಕುಲಪತಿಯವರು ವಿಜಯವಾಣಿಗೆ ಶಹಬ್ಬಾಷ್‌ಗಿರಿ ನೀಡಿದರು.

ವಿಸ್ತರಣಾ ವಿದ್ಯಾರ್ಥಿಗಳಿಗೆ ಪತ್ರಿಕಾಲಯದಲ್ಲಿ ತರಬೇತಿ:

ವಿವಿಯ ಕೃಷಿ ವಿಸ್ತರಣಾ ವಿದ್ಯಾರ್ಥಿಗಳು ಕೃಷಿ ಸಂಬಂಧಿತ ಬರಹಗಳು ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಪತ್ರಿಕಾಲಯದಲ್ಲಿ ತಿಂಗಳ ಕಾಲ ಇನ್‌ಟರ್ನಿ ರೂಪದಲ್ಲಿ ತರಬೇತಿ ನೀಡಲು ವಿಜಯವಾಣಿ ಸಿದ್ಧವಿದೆ. ಈ ಕಾರ್ಯಕ್ಕೆ ವಿದ್ಯಾರ್ಥಿಗಳಿಗೆ ಇಂತಿಷ್ಟು ಅಂಕ ನೀಡುವ ಪದ್ಧತಿ ಅಳವಡಿಸಿಕೊಳ್ಳಬಹುದು ಎಂದು ವಿಜಯವಾಣಿ ಸಂಪಾದಕರು ವಿವಿ ಕುಲಪತಿ ಗಮನಕ್ಕೆ ತಂದರು. ಇದಕ್ಕೆ ಕುಲಪತಿಯಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net