ಜಿಲ್ಲಾಧಿಕಾರಿಗಳ ತಾಲೂಕು ಭೇಟಿಗೆ ಸಚಿವರಿಂದಲೇ ವೇಳಾಪಟ್ಟಿ: ಸಾರ್ವಜನಿಕರು- ಅಧಿಕಾರಿಗಳ ಅಂತರ ತಗ್ಗಿಸಲು ಅಶೋಕ್ ಪ್ರಯತ್ನ

ashok
Published on

ಬೆಂಗಳೂರು: ಅಧಿಕಾರಿಗಳು ಮತ್ತು ಸಾಮಾನ್ಯ ಜನರ ನಡುವಿನ ಅಂತರ ಇನ್ನಷ್ಟು ಕಡಿಮೆ ಆಗಬೇಕು ಎಂಬ ಉದ್ದೇಶದಿಂದ ಜಿಲ್ಲಾಧಿಕಾರಿಗಳ ತಾಲೂಕು ಕಚೇರಿ ಭೇಟಿಗೆ ಕಂದಾಯ ಸಚಿವ ಆರ್. ಅಶೋಕ್ ಅವರೇ ವೇಳಾಪಟ್ಟಿ ಸಿದ್ಧಪಡಿಸುತ್ತಿದ್ದು, ಮುಂದಿನ ಮಂಗಳವಾರದಿಂದ ವಿನೂತನ ಕಾರ್ಯಕ್ರಮ ಜಾರಿಗೆ ಬರಲಿದೆ.

ಸರ್ಕಾರಿ ಸೌಲಭ್ಯಗಳನ್ನು ಸುಲಭವಾಗಿ ಜನರು ಪಡೆಯುವಂತಾಗಬೇಕು ಎನ್ನುವ ನಿಟ್ಟಿನಲ್ಲಿ ಪ್ರಾರಂಭಿಸಿದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಯಶಸ್ಸು ಕಂಡಿದೆ. ಸಾವಿರಾರು ಜನರಿಗೆ ಅನುಕೂಲ ಆಗಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಅದರ ಮುಂದುವರೆದ ಭಾಗವಾಗಿ ಜಿಲ್ಲಾಧಿಕಾರಿಗಳು ವಾರಕ್ಕೊಮ್ಮೆ ತಾಲೂಕು ಕಚೇರಿಯಲ್ಲಿದ್ದು ಜನರ ಸಂಕಷ್ಟಕ್ಕೆ ನೆರವಾಗಬೇಕು ಎಂಬ ಉದ್ದೇಶದಿಂದ ತಾಲೂಕು ಕಚೇರಿಗೆ ಕಡ್ಡಾಯ ಭೇಟಿ ನಿಗದಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನನ್ನ ಸಾರ್ವಜನಿಕ ಜೀವನದ ಪಾಠಶಾಲೆ ಇದ್ದ ಹಾಗೆ. ಜನರ ಸಮಸ್ಯೆ ಸರಿಯಾಗಿ ತಿಳಿಯಲು ವಾಸ್ತವ್ಯ ಮಾಡಿ, ಅವರ ಜತೆ ಮುಕ್ತವಾಗಿ ವ್ಯವಹರಿಸಿದಾಗ ಮಾತ್ರ ಸಾಧ್ಯ. ಕೇವಲ ಅಧಿಕಾರಿಗಳ ಸಭೆ ನಡೆಸಿದರೆ ಸಮಸ್ಯೆಗಳ ಸಂಪೂರ್ಣ ಅರಿವು ಆಗುವುದಿಲ್ಲ ಎನ್ನುವುದನ್ನು ನಾನು ತಿಳಿದುಕೊಂಡಿದ್ದೇನೆ. ಆದ್ದರಿಂದ ಜಿಲ್ಲಾಧಿಕಾರಿಗಳು ಒಂದು ದಿನ ತಾಲೂಕು ಕಚೇರಿಯಲ್ಲಿದ್ದರೆ ಅಲ್ಲಿನ ಸಮಸ್ಯೆಗಳ ಅರಿವಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮ ಏಕೆ?: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಕೆಲ ತಾಲೂಕು ಕೇಂದ್ರಗಳಿಂದ ಸುಮಾರು 80-120 ಕಿ.ಮೀ ಗಳಷ್ಟು ದೂರ ಇದೆ. ವಯೋವೃದ್ದರು, ಅಂಗವಿಕಲರು, ಮಹಿಳೆಯರಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅರ್ಜಿ ನೀಡುವುದಕ್ಕೆ ಕಷ್ಟ ಆಗುತ್ತಿತ್ತು. ಪ್ರತಿ ತಾಲೂಕಿನಲ್ಲಿಯೂ ಅದರದ್ದೇ ಆದ ಸಮಸ್ಯೆಗಳಿರುತ್ತವೆ.

ವಿವಿಧ ಇಲಾಖೆಗಳ ಹೊಂದಾಣಿಕೆ ಕೊರತೆಯಿಂದಲೂ ಅನೇಕ ಸಮಸ್ಯೆಗಳು ಉದ್ಭವಿಸಿರುತ್ತದೆ. ಇವು ಜಿಲ್ಲಾಧಿಕಾರಿಗಳ ಗಮನಕ್ಕೇ ಬಂದಿರುವುದಿಲ್ಲ. ತಾಲೂಕು ಕಚೇರಿಗೆ ಹೋದರೆ ಅಲ್ಲಿನ ವ್ಯವಸ್ಥೆಯ ಸಾಕ್ಷತ್ ದರ್ಶನ ಜಿಲ್ಲಾಧಿಕಾರಿಗಳಿಗೆ ಆಗುತ್ತದೆ. ಕೆಳ ಹಂತದ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವುದಕ್ಕೂ ಸಾಧ್ಯವಾಗುತ್ತದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಇದು ಅನುಕೂಲವಾಗಲಿದೆ. ಜನರಿಗೆ ನಿರ್ದಿಷ್ಟ ಸಮಯದಲ್ಲಿ ಖುದ್ದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ತೊಂದರೆಗಳನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳಲು ಸಹಾಯವಾಗುತ್ತದೆ. ಕಡತ ವಿಲೇವಾರಿ, ತಾಲೂಕು ಕಚೇರಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದ್ದರೆ, ಸರಿಪಡಿಸುವುದಕ್ಕೆ ಜಿಲ್ಲಾಡಳಿತಕ್ಕೆ ಅನುಕೂಲ ಆಗಲಿದೆ. ಜನಸಾಮಾನ್ಯರಿಗೆ ಖುದ್ದು ಜಿಲ್ಲಾಧಿಕಾರಿಗಳನ್ನು ಭೇಟಿಮಾಡಿ ಅಹವಾಲು ಸಲ್ಲಿಸಲು ಇದರಿಂದ ನೆರವಾಗಲಿದೆ.

ಜಿಲ್ಲಾಧಿಕಾರಿಗಳು ಯಾವ ತಾಲ್ಲೂಕಿನ ಕಚೇರಿಗೆ ಭೇಟಿ ನೀಡಬೇಕು ಎನ್ನುವುದನ್ನು ಖುದ್ದು ನಾನೇ ವೇಳಾಪಟ್ಟಿ ಸಿದ್ಧಪಡಿಸು ತ್ತಿದ್ದೇನೆ. ಪ್ರತಿ ಮಂಗಳವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ಅಲ್ಲಿಯೇ ಇರಬೇಕು. ಇದು ನಿರಂತರ ನಡೆಯಬೇಕು. ಜನರ ಮನೆಬಾಗಿ ಲಿಗೆ ಸರ್ಕಾರವೇ ಹೋಗಬೇಕು ಎನ್ನುವುದು ನನ್ನ ಆಶಯ. | ಆರ್. ಅಶೋಕ್ ಕಂದಾಯ ಸಚಿವ

ಡಿಸಿಗಳ ಅಭಿಪ್ರಾಯ ಕೋರಿಕೆ: ತಾಲೂಕು ಕಚೇರಿಗೆ ಡಿಸಿಗಳ ಭೇಟಿ ಕುರಿತು ಎಲ್ಲ ಜಿಲ್ಲಾಧಿಕಾರಿ ಗಳಿಂದ ಅಭಿಪ್ರಾಯವನ್ನು ಸಚಿವ ಅಶೋಕ್ ಕೋರಿದ್ದಾರೆ. ಮಂಗಳವಾರ ಯಾವುದೇ ಸಭೆ, ನ್ಯಾಯಾಲಯ ಕಲಾಪಗಳನ್ನು ಇಟ್ಟುಕೊಳ್ಳದಂತೆಯೂ ನೋಡಿಕೊಳ್ಳುವ ಸಂಬಂಧ ಅಭಿಪ್ರಾಯ ಕೋರಲಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ಹೇಳಿವೆ.

ಸಿದ್ದರಾಮಯ್ಯಗೆ ಅಭದ್ರತೆ ಭಯ

ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್​ನಲ್ಲಿ ಅಭದ್ರತೆ ಭಯ ಕಾಡಲಾರಂಭಿಸಿದ್ದು, ಆರ್​ಎಸ್​ಎಸ್ ಬಗ್ಗೆ ಪದೇಪದೆ ಲಘು ಹೇಳಿಕೆಗಳನ್ನು ನೀಡಿ ಹೈಕಮಾಂಡ್ ಗಮನಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಲೇವಡಿ ಮಾಡಿದರು. ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಹೈಕಮಾಂಡ್ ಹಂತದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿಕಟವಾಗುತ್ತಿದೆ. ಪ್ರತಿದಿನ ಮಾಧ್ಯಮದಲ್ಲಿ ಅವರೇ ಕಾಣಲಾರಂಭಿಸಿದ್ದು, ಸಿದ್ದರಾಮಯ್ಯ ಅವರಿಗೆ ಮೂಲೆಗುಂಪಾಗುವ ಭೀತಿ ಶುರುವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net