

ಮೂಡಿಗೆರೆ: ಸಮಯ ಮತ್ತು ಸಮಾಧಾನ ಮಾನವ ಧರ್ಮದ ಮೂಲ ಮಂತ್ರ. ಮಾನವ ಜನ್ಮ ಇರುವುದು ಪರೋಪಕಾರಕ್ಕಾಗಿ ಎಂದು ಅರಿತು ಬದುಕಬೇಕು ಎಂದು ಬೇರುಗುಂಡಿ ಮಠದ ಶ್ರೀರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸೋಮವಾರ ಪಟ್ಟಣದ ಮಹಾಂತಿನ ಮಠದ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮಾನವ ಎಷ್ಟೇ ಸತ್ಕಾರ್ಯ ಮಾಡಿದರೂ ಸಮಾಜಕ್ಕೆ ಮಾರಕವಾಗುವ ಒಂದು ಕೆಟ್ಟ ಕೆಲಸ ಮಾಡಿದರೆ ಮಾಡಿದ ಎಲ್ಲ ಒಳ್ಳೆಯ ಕೆಲಸಗಳು ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಪ್ರತಿಯೊಬ್ಬರೂ ಸಮಾಜದ ಏಳಿಗೆಗಗೆ ಶ್ರಮಿಸುವ ಮೂಲಕ ಧರ್ಮ ಕಾರ್ಯ ಮಾಡಲು ಮುಂದಾಗಬೇಕು. ಸಂಘಟನೆ ಮೂಲಕ ಸಮಾಜವನ್ನು ಒಗ್ಗೂಡಿಸಬೇಕು. ಇತರರ ಬಗ್ಗೆ ಕಾಳಜಿ ತೋರಿದರೆ ಭಗವಂತನ ಅನುಗ್ರಹ ಲಭಿಸುತ್ತದೆ ಎಂದು ಹೇಳಿದರು.
ಮಹಾಸಭಾ ನೂತನ ಅಧ್ಯಕ್ಷ ಬಿ.ಎಸ್.ಓಂಕಾರ್ ಮಾತನಾಡಿ, ನನಗೆ ನೀಡಿದ ಜವಾಬ್ದಾರಿಯಿಂದ ಸಮಾಜದ ಮೇಲಿನ ಕೆಲಸ ಕಾರ್ಯಗಳು ಇನ್ನೂ ಹೆಚ್ಚಾಗಿದೆ. ಸಮಾಜವನ್ನು ಒಟ್ಟುಗೂಡಿಸಿ ತಾಲೂಕಿನಲ್ಲಿ ಲಿಂಗಾಯಿತ ಸಮುದಾಯ ಒಂದು ಪ್ರಬಲ ಸಮುದಾಯ ಎಂದು ಸಮಾಜಕ್ಕೆ ತೋರಿಸಿಕೊಡಬೇಕಿದೆ. ಯಾವುದೇ ಸಂಘಟನೆಗಳು ಪ್ರಭಲವಾಗಿ ಬೆಳೆಯಲು ಹಿರಿಯರೊಂದಿಗೆ ಯುವ ಸಮೂಹದ ಪಾಲ್ಗೊಳ್ಳುವಿಗೆ ಅಗತ್ಯ. ಯುವ ಸಮೂಹ ನಮ್ಮ ಸಂಘಟನೆಯಲ್ಲಿರುವುದರಿಂದ ಸಂಘ ಇನ್ನಷ್ಟು ಶಕ್ತಿ ಶಾಲಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು.
ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳಾದ ತಿಲಕ್ ಪಟೇಲ್, ಸನ್ನಿ, ಹೇಮಲತಾ, ಆಕಾಶ್, ಸಮಾಜದ ಹಿರಿಯರಾದ ರಾಜಶೇಖರ್ ಉಗ್ಗೇಹಳ್ಳಿ, ಮಹೇಶ್ ಮೇಗಲಪೇಟೆ, ಬಸವರಾಜ್, ಶೋಭಾ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಂ.ಲೋಕೇಶ್, ಕೊಡಗು ಜಿಲ್ಲಾ ವೀರಶೈವ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಸತೀಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವನಮಾಲಾ ಮೃತ್ಯುಂಜಯ, ಜಿಲ್ಲಾ ವೀರಶೈವ ಸಮಾಜದ ಉಪಾಧ್ಯಕ್ಷೆ ಶಾಲಿನಿ ಅನಿಲ್, ಜಿಲ್ಲಾ ನಿರ್ದೇಶಕರಾದ ಪೂರ್ಣೇಶ್ ಮೂರ್ತಿ, ಡಾ.ಮೋಹನ್ ರಾಜಣ್ಣ, ಸುಶೀಲಾ, ಆದರ್ಶ ಕನ್ನೆಹಳ್ಳಿ, ವೀರಶೈವ ಸಮಾಜದ ತಾಲೂಕು ಘಟಕದ ಅಧ್ಯಕ್ಷೆ ರಾಜಲಕ್ಷ್ಮೀ ಕಾಂತರಾಜ್, ಗೌರವಾಧ್ಯಕ್ಷ ಬಿ.ಬಸವರಾಜ್, ಪ್ರಧಾನ ಕಾರ್ಯದರ್ಶಿ ಬಿ.ಕೆ.ಚಂದ್ರಶೇಖರ್, ಯುವ ಘಟಕದ ಅಧ್ಯಕ್ಷ ಸಿ.ಎಸ್.ಚಂದ್ರಶೇಖರ್ ಮತ್ತಿತರರಿದ್ದರು.