ತನ್ನನ್ನು ತಾನೇ ಮದ್ವೆಯಾಗಿದ್ದ ಸೋಶಿಯಲ್​​ ಮೀಡಿಯಾ ಸ್ಟಾರ್ ಸಾವಿಗೆ ಶರಣು! ಡೆತ್​ನೋಟ್​ನಲ್ಲಿತ್ತು ಶಾಕಿಂಗ್​ ಕಾರಣ | Kubra Aykut

Kubra Aykut
Published on

ಅಂಕಾರ: ತನಗೆ ಸೂಕ್ತವಾದ ವರನನ್ನು ಹುಡುಕಲು ವಿಫಲವಾದ ಬಳಿಕ ತನ್ನನ್ನು ತಾನೇ ಮದುವೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಟರ್ಕಿ ಮೂಲದ ಟಿಕ್​ಟಾಕರ್​ ಕುಬ್ರಾ ಆಯ್ಕುತ್ ( Kubra Aykut ) ಸಾವಿಗೆ ಶರಣಾಗಿದ್ದಾರೆ. ಆಕೆಗೆ ಕೇವಲ 26 ವರ್ಷ ವಯಸ್ಸಾಗಿತ್ತು.

ಇಸ್ತಾಂಬುಲ್​ನ ಸುಲ್ತಾನ್‌ಬೆಯ್ಲಿ ಜಿಲ್ಲೆಯ ಐಷಾರಾಮಿ ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಿಂದ ಬಿದ್ದು ಅಯ್ಕುತ್ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಮೃತದೇಹದ ಬಳಿ ಸೂಸೈಡ್ ನೋಟ್ ಪತ್ತೆಯಾಗಿದ್ದು, ಘಟನೆಯ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಟರ್ಕಿ ಟುಡೆ ವೆಬ್​ಸೈಟ್​ ಪ್ರಕಾರ, ಈ ಘಟನೆ ಸೆಪ್ಟೆಂಬರ್ 23 ರಂದು ಸಂಭವಿಸಿದೆ. ಆರಂಭದಲ್ಲಿ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿದ್ದವು. ಆದರೀಗ ಆಕೆಯ ಮನೆಯಲ್ಲಿ ಪೊಲೀಸರು ಡೆತ್​ನೋಟ್​ ಪತ್ತೆಮಾಡಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ. ನಾನು ನನ್ನ ಸ್ವಂತ ಇಚ್ಛೆಯಿಂದ ಮೇಲಿಂದ ಹಾರಿದ್ದೇನೆ. ಏಕೆಂದರೆ ನಾನು ಇನ್ನು ಮುಂದೆ ಬದುಕಲು ಬಯಸುವುದಿಲ್ಲ. ಫಿಸ್ಟಿಕ್ ಅನ್ನು ಚೆನ್ನಾಗಿ ನೋಡಿಕೊಳ್ಳಿ. ನನ್ನ ಜೀವನದಲ್ಲಿ ನಾನು ಎಲ್ಲರಿಗೂ ಒಳ್ಳೆಯವಳಾಗಿದ್ದೆ. ಆದರೆ, ನನಗೆ ನಾನು ಒಳ್ಳೆಯವಳಾಗಲು ಸಾಧ್ಯವಾಗಲಿಲ್ಲ ಎಂದು ಡೆತ್​ನೋಟ್​ನಲ್ಲಿ ಆಯ್ಕುತ್​ ಬರೆದಿದ್ದಾಳೆ. "ಫಿಸ್ಟಿಕ್" ಎಂದರೆ ಆಕೆಯ ಸಾಕುಪ್ರಾಣಿ ಎಂದು ನಂಬಲಾಗಿದೆ.

ಒಳ್ಳೆಯ ವ್ಯಕ್ತಿಯಾಗಿ ಬದುಕಿದ್ದಕ್ಕೆ ನನಗೆ ಈ ಜೀವನದಲ್ಲಿ ಏನೂ ಸಿಗಲಿಲ್ಲ. ಈ ಜೀವನದಲ್ಲಿ ಸ್ವಾರ್ಥಿಯಾಗಿರಿ. ಆ ರೀತಿ ಇದ್ದರೆ ಮಾತ್ರ ನೀವು ಸಂತೋಷವಾಗಿರುತ್ತೀರಿ. ನಾನು ಬಹಳ ದಿನಗಳಿಂದ ತುಂಬಾ ಕಷ್ಟಪಡುತ್ತಿದ್ದೇನೆ ಆದರೆ, ಯಾರೂ ನನ್ನನ್ನು ಗಮನಿಸಲಿಲ್ಲ ಎಂದು ಆಯ್ಕುತ್ ತನ್ನ ಅಳಲನ್ನು ಡೆತ್​ನೋಟ್​ನಲ್ಲಿ ತಿಳಿಸಿದ್ದಾಳೆ.

ಇದಲ್ಲದೆ, ತನ್ನ ಸಾವಿಗೂ ಮುನ್ನ ಸಾಮಾಜಿಕ ಜಾಲತಾಣದಲ್ಲೂ ಆಯ್ಕುತ್​ ದುರಂತ ಸಂದೇಶವೊಂದನ್ನು ಪೋಸ್ಟ್​ ಮಾಡಿದ್ದರು. ಅದರಲ್ಲಿ ಅವರು ತಮ್ಮ ದೇಹದ ತೂಕ ಕಳೆದುಕೊಳ್ಳುತ್ತಿರುವ ಬಗ್ಗೆ ಬಹಳ ಆತಂಕ ವ್ಯಕ್ತಪಡಿಸಿದ್ದರು. ನಾನು ನನ್ನ ಶಕ್ತಿಯನ್ನು ಸಂಗ್ರಹಿಸಿದ್ದೇನೆ ಆದರೆ, ತೂಕವನ್ನು ನಿರ್ವಹಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನಾನು ಪ್ರತಿದಿನ ಒಂದು ಕೆಜಿ ಕಳೆದುಕೊಳ್ಳುತ್ತೇನೆ. ಏನು ಮಾಡಬೇಕೆಂದು ನನಗೆ ಗೊತ್ತಾಗುತ್ತಿಲ್ಲ. ನಾನು ತುರ್ತಾಗಿ ತೂಕವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಬರೆದುಕೊಂಡಿದ್ದರು.

ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದ ಕುಬ್ರಾ ಆಯ್ಕುತ್ ಟಿಕ್‌ಟಾಕ್‌ನಲ್ಲಿ ಒಂದು ಮಿಲಿಯನ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 2,00,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದರು. ಇದೀಗ ಅವರ ಸಾವು ಅವರ ಫಾಲೋವರ್ಸ್​ಗೆ ಆಘಾತ ಉಂಟುಮಾಡಿದ್ದು, ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net