

ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಸ್ವದೇಶಿ ಉತ್ಪನ್ನಗಳ ಬಳಕೆಗೆ ಹೆಚ್ಚು ಒತ್ತು ನೀಡಿ, ಅದನ್ನೇ ನಿತ್ಯ ಬಳಕೆ ಮಾಡುವಂತೆ ದೇಶದ ಜನತೆಗೆ ಕರೆ ನೀಡಿದ್ದರು. ಇದೀಗ ಆ ಒಂದು ಮಾತಿಗೆ ದೇಶವ್ಯಾಪಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿದೇಶಿ ವಸ್ತುಗಳ ಬಳಕೆಯನ್ನು ನಿಷೇಧ ಮಾಡಿ ದೇಸಿ ಉತ್ಪನ್ನಗಳತ್ತ ಜನ ಮನಸು ಮಾಡಿದ್ದಾರೆ. ಅದರಲ್ಲೂ ಈ ಒಂದು ನೀತಿಯಿಂದ ಚೀನಾ ಮೂಲದ ಟಿಕ್ಟಾಕ್ ಕಂಪನಿಗೂ ದೊಡ್ಡ ಹೊಡೆತ ಬಿದ್ದಿದೆ!
ಸದ್ಯ ಭಾರತದಲ್ಲಿ ಕೋಟ್ಯಂತರ ಜನ ಟಿಕ್ಟಾಕ್ ಬಳಕೆ ಮಾಡುತ್ತಿದ್ದಾರೆ. ಉಳಿದ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ, ಚೀನಾ ಮೂಲದ ಈ ಕಂಪನಿಗೆ ಅತಿ ಹೆಚ್ಚು ಆದಾಯ ಹರಿದು ಹೋಗುತ್ತಿರುವುದು ನಮ್ಮ ಭಾರತದಿಂದಲೇ! ಇದೀಗ ಸ್ವಾವಲಂಬಿ ಭಾರತ ಘೋಷಣೆ ಹಿನ್ನೆಲೆಯಲ್ಲಿ ಟಿಕ್ಟಾಕ್ ರೇಟಿಂಗ್ ಗಣನೀಯವಾಗಿ ಕುಸಿತ ಕಂಡಿದೆ. ಅದ್ಯಾವ ಮಟ್ಟಿಗೆ ಅಂದರೆ, ಗೋಗಲ್ ಪ್ಲೇ ಸ್ಟೋರ್ನಲ್ಲಿ ಘೋಷಣೆಗೂ ಮುನ್ನ 4.6 ಇದ್ದ ರೇಟಿಂಗ್, ಘೋಷಣೆ ಬಳಿಕ 2ಕ್ಕೆ ಕುಸಿದಿದೆ.
ಇದೆಲ್ಲ ಒಂದೆಡೆಯಾದರೆ ಸೋಷಿಯಲ್ ಮೀಡಿಯಾದಲ್ಲಿ ಟಿಕ್ಟಾಕ್ಬ್ಯಾನ್, ಟಿಕ್ಟಾಕ್ಎಕ್ಸ್ಪೋಸ್ಡ್ ಎಂಬ ಹ್ಯಾಷ್ಟ್ಯಾಗ್ನಲ್ಲಿ ಬ್ಯಾನ್ಗೆ ಭಾರತೀಯರು ಕರೆಕೊಡುತ್ತಿದ್ದಾರೆ. ಟಿಕ್ಟಾಕ್ನಲ್ಲೇ ಮಿಲಿಯನ್ಗಟ್ಟಲೇ ಫಾಲೋವರ್ಸ್ ಹೊಂದಿದ ಕೆಲವರು ಸ್ವತಃ ತಾವೇ ಆ್ಯಪ್ ಅನ್ ಇನ್ಸ್ಟಾಲ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಸ್ವದೇಶಿ ಉತ್ಪನ್ನಗಳ ಬಳಕೆಗೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ಶುರುವಾದ ಈ ಅಭಿಯಾನ, ಕರೊನಾ ಹೊತ್ತು ತಂದ ಚೀನಾ ದೇಶಕ್ಕೆ ಬಿಸಿ ಮುಟ್ಟಿಸುತ್ತಿದೆ. (ಏಜೆನ್ಸೀಸ್)