ಟೊಮ್ಯಾಟೋ ಬೆಳೆಗೆ ಟೈಟ್ ಸೆಕ್ಯೂರಿಟಿ

tomato
ಕಡೂರು ಎಪಿಎಂಸಿಗೆ ಬಂದಿರುವ ಟೊಮ್ಯಾಟೊ ಬಾಕ್ಸ್‌ಗಳು
Published on

ಕಡೂರು: ಟೊಮ್ಯಾಟೋ ಬೆಲೆ ಏರಿಕೆಯಾಗಿ ಒಂದು ತಿಂಗಳ ಮೇಲಾಯಿತು. ಈ ದರ ಸದ್ಯಕ್ಕೆ ಕಡಿಮೆಯಾಗುವ ಸಾಧ್ಯತೆಯೂ ಕಡಿಮೆ. ಮಾರುಕಟ್ಟೆಯಲ್ಲೂ ಬೇಡಿಕೆ ಇರುವುದರಿಂದ ರೈತರ ಮೊಗದಲ್ಲಿ ಸಂತಸ ಇಮ್ಮಡಿಯಾಗಿದೆ. ಜತೆಗೆ ಹೊಲದಲ್ಲಿ ಇರುವ ಫಸಲನ್ನು ಜತನದಿಂದ ಕಾಪಾಡಿಕೊಳ್ಳುವ ಸವಾಲುಗಳು ಕೂಡ ಎದುರಾಗಿದೆ.

ಟೊಮ್ಯಾಟೋ ಬೆಳೆದ ಕೆಲ ರೈತರು ಲಕ್ಷಾಧಿಪತಿಗಳಾಗಿದ್ದಾರೆ. ವರ್ತಕರೂ ಸಹ ಇದಕ್ಕಿಂತ ತುಸು ಹೆಚ್ಚು ಲಾಭವನ್ನೇ ಮಾಡಿಕೊಂಡಿದ್ದಾರೆ. ದರ ಹೆಚ್ಚಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ, ಹೊಲಗಳಲ್ಲಿ ಟೊಮ್ಯಾಟೋ ಕಳ್ಳತನ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಈ ಕಾರಣಕ್ಕೆ ಕಳ್ಳರಿಂದ ಬೆಳೆ ರಕ್ಷಿಸಿಕೊಳ್ಳಲು ಕಡೂರು ತಾಲೂಕಿನ ರೈತರು ಹಗಲು-ರಾತ್ರಿ ಹೊಲಗಳಲ್ಲಿಯೇ ಕಾವಲು ಕಾಯುತ್ತಿದ್ದಾರೆ.
ಅತಿವೃಷ್ಟಿ ಉಂಟಾದಾಗ ಎಲ್ಲ ತರಕಾರಿಗಳ ಬೆಲೆ ಒಂದಷ್ಟು ದಿನ ದರ ಹೆಚ್ಚಾಗುವುದು ಸಹಜ. ಇವುಗಳ ಜತೆಗೆ ಟೊಮ್ಯಾಟೋ ರೇಟ್ ಕೂಡಾ ಏರಿಕೆಯಾಗುತ್ತಿತ್ತು. ಇದನ್ನು ಹೊರತುಪಡಿಸಿದರೆ ಬಹುದಿನಗಳವರೆಗೆ ಪ್ರತಿ ಕೆ.ಜಿ.ಗೆ 80-90 ರೂ. ದರ ಸ್ಥಿರವಾಗಿದ್ದುದು ಕಡಿಮೆಯೇ. ಹಾಗಾಗಿ ತಾಲೂಕಿನ ರೈತರು ಟೊಮ್ಯಾಟೊ ಬೆಳೆದ ಹೊಲದಲ್ಲಿ ರಾತ್ರಿ ವೇಳೆ ಸುತ್ತಲೂ ವಿದ್ಯುತ್ ಅಳವಡಿಸಿಕೊಂಡು ಬೆಳೆ ರಕ್ಷಣೆಗೆ ಮುಂದಾಗಿದ್ದಾರೆ. ಅಲ್ಲದೆ ಇದಕ್ಕಾಗಿ 7-8 ಕೂಲಿ ಕಾರ್ಮಿಕರನ್ನು ನೇಮಿಸಿಕೊಂಡು ಪಾಳಿಯಲ್ಲಿ ಕಾವಲು ಕಾಯುತ್ತಿದ್ದಾರೆ.
ರೈತರು ಕಳೆದ ತಿಂಗಳಿನಿಂದ ಟೊಮ್ಯಾಟೋ ಬೆಳೆಯನ್ನು ಜಿಲ್ಲೆಯ ಎರಡು ಮುಖ್ಯ ಮಾರುಕಟ್ಟೆಗಳಾದ ಚಿಕ್ಕಮಗಳೂರು, ಕಡೂರು ಎಪಿಎಂಸಿಗಳಿಗೆ ಕಳುಹಿಸುತ್ತಿದ್ದಾರೆ. ಪ್ರಸ್ತುತ ಕಡೂರಿನಲ್ಲಿ 15 ಕೆ.ಜಿ ತೂಕದ ಬಾಕ್ಸ್ 2,400 ರೂ.ವರೆಗೆ ಮಾರಾಟ ಮಾಡಲಾಗಿದೆ. ಇದೇ ರೀತಿ ಬೆಲೆ ಮುಂದುವರಿದರೆ ಮತ್ತಷ್ಟು ಲಾಭಗಳಿಸಬಹುದೆಂಬ ನಿರೀಕ್ಷೆ ರೈತರದು.
ಲಾಟರಿ ಬೆಳೆಯಾದ ಟೊಮ್ಯಾಟೋ ದರ ಈ ಬಾರಿ ಏರಿಕೆಯಾಗಿ ರೈತನಿಗೆ ಸಂತಸ ತಂದಿದೆ. ಆದರೆ ಜುಲೈ ತಿಂಗಳಲ್ಲಿ ಏರಿಕೆ ಕಂಡಿದ್ದ ಬೆಲೆ ಒಂದು ತಿಂಗಳು ಕಾಲ ದಾಖಲೆಯ ಪ್ರಮಾಣದಲ್ಲಿ ಬೆಲೆ ಏರಿಕೆಯಾಗಿ ನಿಂತಿರುವುದು ಮಂಡಿ ವರ್ತಕರಲ್ಲಿ ಆಚ್ಚರಿಮೂಡಿಸಿದೆ.
ರಾತ್ರಿ ಇಡೀ ಗಸ್ತು!: ರಾತ್ರಿ ವೇಳೆ ಕಳ್ಳರು ಹೊಲಕ್ಕೆ ನುಗ್ಗದಂತೆ ಮತಿಘಟ್ಟ-ಬಾಣಾವರ ಭಾಗದ ಮಾರ್ಗದಲ್ಲಿ ಟೊಮ್ಯಾಟೊ ಬೆಳೆದ ರೈತರು ರಾತ್ರಿ ಪೂರ್ತಿ ಕಾವಲು ಕಾಯಲು ಕೂಲಿ ಕಾರ್ಮಿಕರನ್ನು ನೇಮಿಸಿಕೊಂಡಿದ್ದಾರೆ. ಈ ಕೂಲಿ ಕಾರ್ಮಿಕರು ಬೆಳಗಿನ ಸಮಯ ನೋಡಿಕೊಳ್ಳಬೇಕು. ಎರಡು ದಿನಕ್ಕೊಮ್ಮೆ ಬಂದ ಬೆಳೆಯನ್ನು ಕಿತ್ತು ಬಾಕ್ಸ್‌ಗೆ ಹಾಕಬೇಕು. ಇನ್ನೂ ಕೆಲವರಿಗೆ ರಾತ್ರಿ ಇಡೀ ಗಸ್ತು ನಡೆಸಬೇಕು ಎಂಬ ನಿಯಮ ವಿಧಿಸಲಾಗಿದೆ. ಗಡಿ ಕಾಯುವ ಯೋಧರಂತೆ ರೈತರು ಟೊಮ್ಯಾಟೋ ಹೊಲವನ್ನು ಕಾಯ್ದುಕೊಳ್ಳುತ್ತಿದ್ದಾರೆ.
ಕಸಬಾ ಭಾಗದಲ್ಲೇ ಹೆಚ್ಚು: ತಾಲೂಕಿನ ಇತರೆ ಭಾಗಕ್ಕಿಂತ ಕಸಬಾ ಭಾಗದ ಮತಿಘಟ್ಟ, ಮಲ್ಲಪ್ಪನಹಳ್ಳಿ, ಕೆರೆಸಂತೆ, ಕೋಡಿಹಳ್ಳಿ, ಬಾಣಾವರ ಸಮೀಪದ ಭೈರಾಪುರ, ತಾವರೆಹಳ್ಳಿ, ಮಲ್ಲಾಪುರ ಭಾಗದಲ್ಲಿ ಟೊಮ್ಯಾಟೊ ಬೆಳೆಯನ್ನು ಹೆಚ್ಚು ಬೆಳೆಯಲಾಗುತ್ತದೆ. ಈ ಭಾಗದಲ್ಲಿ ಬೆಳೆದ ಟೊಮ್ಯಾಟೋ ಮಹಾರಾಷ್ಟ್ರ, ಗುಜರಾತ್, ದೆಹಲಿ, ಕೇರಳ, ದಕ್ಷಿಣ ಕನ್ನಡ ಭಾಗದಲ್ಲಿ ಹೆಚ್ಚು ಬೇಡಿಕೆಯಿದೆ.
ನಾಟಿ ಮಾಡಲು ಸಸಿಗಳಿಲ್ಲ: ಮಾರುಕಟ್ಟೆಯಲ್ಲಿ ದಾಖಲೆ ಪ್ರಮಾಣದಲ್ಲಿ ದರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಟೊಮ್ಯಾಟೋ ಬೆಳೆಯಲು ಹೆಚ್ಚು ಆಸಕ್ತಿ ತೋರಿರುವ ರೈತರು ನರ್ಸರಿಗಳ ಎಡತಾಕುತ್ತಿದ್ದಾರೆ. ಆದರೆ ಬೇಡಿಕೆ ಪ್ರಮಾಣದಲ್ಲಿ ಸಸಿಗಳೇ ಲಭ್ಯವಾಗದಿರುವುದು ರೈತರಲ್ಲಿ ನಿರಾಸೆ ಮೂಡಿಸಿದೆ. ಈ ಮುಂಚೆ ಒಂದು ಎಕರೆಯಲ್ಲಿ ಟೊಮ್ಯಾಟೊ ಬೆಳೆಯಲು 70-80 ಸಾವಿರ ರೂ. ಖರ್ಚು ತಗುಲುತ್ತಿತ್ತು. ಆದರೆ ಮಾರುಕಟ್ಟೆಯಲ್ಲಿ ದರ ಏರಿಕೆಯಾಗುತ್ತಿದ್ದಂತೆ 1.50 ಲಕ್ಷ ರೂ. ವೆಚ್ಚವಾಗುತ್ತಿದೆ. ಒಂದೆಡೆ ರಸಗೊಬ್ಬರಗಳ ಬೆಲೆ ಹೆಚ್ಚಾದರೆ, ಇತ್ತ ಕೂಲಿ ಕಾರ್ಮಿಕರನ್ನು ಹಿಡಿದಿಟ್ಟುಕೊಂಡು, ಅವರು ಕೇಳಿದಷ್ಟು ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ.
ಇಳುವರಿ ಕುಂಠಿತ: ಹವಾಮಾನ ವೈಪರೀತ್ಯಗಳಿಂದ ಟೊಮ್ಯಾಟೋ ಬೆಳೆಗೂ ಕೊಳೆರೋಗ ತಗುಲಿ ಇಳುವರಿ ಪ್ರಮಾಣ ಕುಂಠಿತವಾಗುತ್ತಿದೆ. ಈ ಹಿಂದೆ ಒಂದು ಎಕರೆಗೆ ಉತ್ತಮ ದರ್ಜೆಯ ಟೊಮ್ಯಾಟೋ 25 ಕೆ.ಜಿ. ಸಾಮರ್ಥ್ಯದ 1200 ಬಾಕ್ಸ್‌ವರೆಗೆ ಇಳುವರಿ ಬರುತ್ತಿತ್ತು. ಆದರೆ ಕೊಳೆರೋಗದಿಂದ ಈಗ 500-600 ಬಾಕ್ಸ್ ಇಳುವರಿ ಬರುತ್ತಿದೆ.
ಮಾರುಕಟ್ಟೆಗೆ ಹೆಚ್ಚು ಆವಕ: ಕಡೂರಿನ ಎಪಿಎಂಸಿಯಲ್ಲಿ 15 ಕೆ.ಜಿ, ಚಿಕ್ಕಮಗಳೂರಿನಲ್ಲಿ 25 ಕೆ.ಜಿ ಸಾಮರ್ಥ್ಯದ ಬಾಕ್ಸ್‌ಗಳು ಹೆಚ್ಚು ಮಾರಾಟವಾಗುತ್ತವೆ. ಕಳೆದ ವಾರ ಕಡೂರಲ್ಲಿ 2400 ರೂ.ನಂತೆ ನಾಲ್ಕು ಸಾವಿರ ಬಾಕ್ಸ್, ಚಿಕ್ಕಮಗಳೂರಲ್ಲಿ 6 ಸಾವಿರ ಬಾಕ್ಸ್‌ಗಳನ್ನು ರೈತರು ಮಾರಾಟ ಮಾಡಿದ್ದಾರೆ. ಗುರುವಾರ ಚಿಕ್ಕಮಗಳೂರು ಮಾರುಕಟ್ಟೆಗೆ 15 ಸಾವಿರಕ್ಕೂ ಹೆಚ್ಚು ಬಾಕ್ಸ್‌ಗಳು, ಕಡೂರು ಎಪಿಎಂಸಿಗೆ 7 ಸಾವಿರ ಬಾಕ್ಸ್‌ಗಳು ಟೊಮ್ಯಾಟೋ ಆವಕವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net