

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾದ ವಿಜಯದಶಮಿ, ಜಂಬೂಸವಾರಿ ಹಿನ್ನೆಲೆಯಲ್ಲಿ ಈಗಾಗಲೇ ಆಚರಣೆಗಳು ಆರಂಭವಾಗಿದ್ದು, ಅರಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಿದೆ.
ಕಣ್ಮನ ಸೆಳೆಯುವ ದಸರಾ ವೀಕ್ಷಣೆಗೆ ಈ ಹಿಂದೆಲ್ಲ ಅಸಂಖ್ಯಾತ ಜನರು ಸೇರುತ್ತಿದ್ದರೆ, ಈ ಸಲ ಕರೊನಾ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ. ಮಾತ್ರವಲ್ಲ, ಈ ಬಾರಿ ದಸರಾ ವೀಕ್ಷಣೆಗೆ 300 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ.
ಭಾರಿ ಭದ್ರತೆ: ದಸರಾ ಹಿನ್ನೆಲೆಯಲ್ಲಿ ಮೈಸೂರು ಸುತ್ತಮುತ್ತ ಸಾವಿರಕ್ಕೂ ಅಧಿಕ ಪೊಲೀಸರನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿದೆ. ಅರಮನೆ ಆವರಣ ಸೇರಿ ಅರಮನೆಯ ಸುತ್ತ ತೀವ್ರ ಕಣ್ಗಾವಲು ಇರಿಸಲಾಗಿದ್ದು, ಬೆಳಗ್ಗೆಯಿಂದಲೇ ಭದ್ರತಾ ಪರಿಶೀಲನೆ ನಡೆಯುತ್ತಿದೆ. ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆಯನ್ನೂ ನಡೆಸಲಾಗಿದೆ. ಅರಮನೆಯ ಸುತ್ತ ಹಾಗೂ ಒಳ ಭಾಗದಲ್ಲಿ ಒಟ್ಟು 5 ತಂಡಗಳಿಂದ ತಪಾಸಣೆ ನಡೆಸಲಾಗಿದ್ದು, ಅರಮನೆ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
ಗಜಚಿತ್ತಾರ: ಮತ್ತೊಂದೆಡೆ ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು ಆನೆಗಳಿಗೆ ವರ್ಣಾಲಂಕಾರ ನಡೆಯುತ್ತಿದೆ. ಖ್ಯಾತ ಕಲಾವಿದ, ಹುಣಸೂರು ಮೂಲದ ನಾಗಲಿಂಗಪ್ಪ ಅವರ ನೇತೃತ್ವದಲ್ಲಿ ಗಜಪಡೆಗೆ ಚಿತ್ರ ಬಿಡಿಸಲಾಗುತ್ತಿದೆ. ಒಟ್ಟು ಐವರು ಕಲಾವಿದರು ಈ ಕಾರ್ಯದಲ್ಲಿ ನಿರತರಾಗಿದ್ದು ಅಭಿಮನ್ಯು, ಕಾವೇರಿ, ವಿಜಯಾ, ಗೋಪಿ, ವಿಕ್ರಮ ಆನೆಗಳ ಮೇಲೆ ಬಣ್ಣದ ಚಿತ್ತಾರವನ್ನು ಮೂಡಿಸುತ್ತಿದ್ದಾರೆ. ಜಂಬೂಸವಾರಿ ಆನೆಗಳ ಮೇಲೆ ಇವರು ಗಂಡಬೇರುಂಡ, ಶಂಖ, ಚಕ್ರ ತರು, ಲತೆ ಮುಂತಾದ ಚಿತ್ರಗಳನ್ನು ಚಿತ್ರಿಸುತ್ತಿದ್ದಾರೆ. ಈ ಕಲಾವಿದರು 16 ವರ್ಷಗಳಿಂದ ಆನೆಗಳ ಮೇಲೆ ಚಿತ್ರ ಬರೆದುಕೊಂಡು ಬಂದಿದ್ದಾರೆ.