

ಕರೊನಾ ಕಾಯಿಲೆಯ ಮಧ್ಯೆ ಜನರೆಲ್ಲ ಮನೆ ಸೇರಿದಾಗ ಹುಲಿರಾಜ ಆರಾಮವಾಗಿ ಈ ಬೀದಿಯಲ್ಲಿ ವಿಹರಿಸುತ್ತಿದ್ದಾನೆ.
ಇದು ಯಾವುದೋ ಒಂದು ಟಿವಿ ಸೀರಿಯಲ್ ಅಥವಾ ಮೂವಿ ಅಲ್ಲ. ಖುದ್ದು ಹುಲಿರಾಜನೇ ಮೆಕ್ಸಿಕೊದ ಗ್ವಾಡಲಜರಾ ನಗರದಲ್ಲಿ ಗುರಿಯಿಲ್ಲದೆ ನಡೆದುಕೊಂಡು ಹೋಗುತ್ತಿದ್ದಾನೆ
ಹೀಗೆ ನಗರದ ಬೀದಿಗಳಲ್ಲಿ ಅಲೆದಾಡುತ್ತಿರುವ ಹುಲಿಯನ್ನು ಒಬ್ಬಾತ ಹಗ್ಗದ ಮೂಲಕ ಬಂಧಿಸಲು ಯತ್ನಿಸಿದರೆ ಮತ್ತೊಬ್ಬಾತ ಖುರ್ಚಿಯನ್ನು ಅದರ ಬಳಿ ಒಗೆಯಲು ಪ್ರಯತ್ನಿಸುತ್ತಿದ್ದಾನೆ. ತನ್ನನ್ನು ಬೆನ್ನಟ್ಟಿ ಬರುವವರಿಗೆ ಹುಲಿ 'ನನ್ನ ನೀನು ಹಿಡಿಯಲಾರೆ' ಎಂದು ಎನ್ನುತ್ತ ರೇಗಿಸುತ್ತಿರುವಂತಿದೆ. 23 ಸೆಕೆಂಡುಗಳ ವಿಡಿಯೊದಲ್ಲಿ ಹುಲಿ ರಸ್ತೆ ಬದಿ ಆರಾಮಾಗಿ ಅಡ್ಡಾಡಿಕೊಂಡಿದ್ದರೆ, ಇತ್ತ ಇಬ್ಬರು ಅದನ್ನು ಹಿಡಿಯಲು ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ, ಪ್ರಾಣವನ್ನೂ ಲೆಕ್ಕಿಸದೆ ಹಿಡಿಯಲು ಹೊರಟಂತಿದೆ. ನಾಡಿನತ್ತ ಹುಲಿರಾಜನ ಆಗಮನವನ್ನು ಭಯ ಹಾಗೂ ಅಚ್ಚರಿಯಿಂದ ಕಾರಿನಲ್ಲಿ ನೋಡುತ್ತ ಕುಳಿತವರು ಇದನ್ನು ಚಿತ್ರೀಕರಿಸಿದ್ದಾರೆ. ಸುದ್ದಿಸಂಸ್ಥೆಯೊಂದರ ಪ್ರಕಾರ, ಈ ಹುಲಿ ಮೆಕ್ಸಿಕೋದ ಗ್ವಾಡಲಜರಾ ಉಪನಗರವೊಂದರ ಮನೆಯಿಂದ ತಪ್ಪಿಸಿಕೊಂಡಿದೆ.
ಈ ವೀಡಿಯೊ ಭಾರೀ ವೈರಲ್ ಆಗಿದೆ ಮತ್ತು ದೃಶ್ಯಾವಳಿ ನೋಡಿದ ಅನೇಕರು ಮನುಷ್ಯ ಮತ್ತು ಹುಲಿಯ ಮುಖಾಮುಖಿವಾದ ಅಚ್ಚರಿ ಸನ್ನಿವೇಶವನ್ನು ಹಾಲಿವುಡ್ ಚಲನಚಿತ್ರದ ದೃಶ್ಯದೊಂದಿಗೆ ಹೋಲಿಸಿದ್ದಾರೆ. ಅನೇಕರು ನೆಟ್‌ಫ್ಲಿಕ್ಸ್ ಸಿರೀಸ್ ಟೈಗರ್ ಕಿಂಗ್‌ಗೆ ಹೋಲಿಸಿದ್ದಾರೆ. ಇನ್ನೂ ಕೆಲವರು ಮುಂದೇನಾಯಿತು? ಎಂದು ಆಚ್ಚರಿಯಿಂದ ಕಾಮೆಂಟ್ ಮಾಡಿದ್ದಾರೆ.