

ನಾಪೋಕ್ಲು: ಸಮೀಪದ ನೆಲಜಿ ಮತ್ತು ಕುಂಜಿಲ ಗ್ರಾಮದ ಗಡಿಭಾಗದಲ್ಲಿ ಕಾಡು ಕುರಿಯೊಂದನ್ನು ಹುಲಿ ಅಟ್ಟಿಸಿಕೊಂಡು ಹೋಗಿರುವುದನ್ನು ಸ್ಥಳೀಯರೊಬ್ಬರು ಕಂಡಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಗಡಿಭಾಗದಲ್ಲಿ ಸುಳಿದಾಡಿದ ಕಾಡು ಪ್ರಾಣಿಯ ಬಗ್ಗೆ ಗ್ರಾಮಸ್ಥರಲ್ಲಿ ಕೆಲವು ಸಂಶಯಕ್ಕೂ ಕಾರಣವಾಗಿದೆ.
ನೆಲಜಿ ಗ್ರಾಮದ ಅಚ್ಚಾಂಡಿರ ಹಾಗೂ ಕಲಿಯಾಟಂಡ ತೋಟದ ಮಧ್ಯೆ ಬರುವ ಕೊಲ್ಲಿಯ ಬಳಿ ಚೀಯಕಪೂವಂಡ ಉಮೇಶ್ ಎಂಬುವರ ಕಾಫಿ ತೋಟದಲ್ಲಿ ಮಂಗಳವಾರ ಬೆಳಗ್ಗೆ ಕಾರ್ಮಿಕ ತಮಿಳರ ವೇಲು ಎಂಬಾತ ಕೆಲಸ ನಿರ್ವಹಿಸುತ್ತಿರುವಾಗ ಅಲ್ಲೇ ಸಮೀಪದ ಕಾಡಿನಲ್ಲಿ ಕಾಡು ಕುರಿಯನ್ನು ಹುಲಿ ಅಟ್ಟಿಸಿಕೊಂಡು ಹೋಗಿರುವುದನ್ನು ಕಂಡಿರುವುದಾಗಿ ಉಮೇಶ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ಲಭ್ಯವಾದ ಕೂಡಲೇ ಎಚ್ಚೆತ್ತ ಅರಣ್ಯ ಇಲಾಖೆಯ ಗಸ್ತು ಅರಣ್ಯ ಪಾಲಕರಾದ ಕಾಳೇಗೌಡ, ಸೋಮಣ್ಣಗೌಡ, ಸಿಬ್ಬಂದಿ ರಾಹುಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಹುಲಿ ಕಂಡುಬಂದಿದೆ ಎನ್ನಲಾದ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಹೊಸತಾಗಿ ನಿರ್ಮಾಣ ಮಾಡಿದ ರಸ್ತೆ ಇದ್ದು ಹುಡಿ ಮಣ್ಣಿನ ರಸ್ತೆಯಲ್ಲಿ ಕಾಡುಪ್ರಾಣಿಯ ಹೆಜ್ಜೆ ಗುರುತುಗಳನ್ನು ಸ್ಪಷ್ಟವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ ಎಂದು ಗಸ್ತು ಅರಣ್ಯಪಾಲಕ ಕಾಳೇಗೌಡ ಮಾಹಿತಿ ನೀಡಿದ್ದಾರೆ.
ನೆಲಜಿ ಗ್ರಾಮದ ಕಾಫಿ ಬೆಳೆಗಾರ ಮಾಳೆಯಂಡ ಅಪ್ಪಣ್ಣ ಪ್ರತಿಕ್ರಿಯಿಸಿ ನೆಲಜಿ ಗ್ರಾಮದ ಮಡಿವಾಳರ ಶಾರದಾ ಅವರ ಸಾಕು ನಾಯಿಯನ್ನು ವಾರದ ಹಿಂದೆ ಪ್ರಾಣಿಯೊಂದು ಕಚ್ಚಿಕೊಂಡು ಹೋಗಿದ್ದು ಅದು ಚಿರತೆ ಆಗಿರಬಹುದು ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಸಮೀಪದ ಮಲ್ಮ ಬೆಟ್ಟದಲ್ಲಿ ಚಿರತೆಯ ಹಿಕ್ಕೆಯನ್ನು ಗ್ರಾಮಸ್ಥರು ನೋಡಿದ್ದಾರೆ ಎಂದು ತಿಳಿಸಿದ್ದಾರೆ.
ನೆಲಜಿ ಮತ್ತು ಕುಂಜಿಲ ಎರಡೂ ಗ್ರಾಮಗಳ ಜನರು ಎಚ್ಚರಿಕೆಯಿಂದ ಇದ್ದು ಅಪಾಯಕಾರಿ ಕಾಡುಪ್ರಾಣಿಗಳು ಕಂಡುಬಂದರೆ ಕೂಡಲೇ ಗಮನಕ್ಕೆ ತರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.