ಅಂತೂ ವನವಾಸ ಅಂತ್ಯ, ರಾಮದರ್ಶನ ನಿತ್ಯ

Lord Ram
Published on

ಭುವನಕ್ಕೇ ಒಡೆಯನಾದರೂ, ಜನ್ಮಭೂಮಿಯಲ್ಲಿ ಸ್ವಂತಕ್ಕೊಂದು ಮಂದಿರವಿಲ್ಲದೆ ಶತಮಾನಗಳ ‘ವನವಾಸ’ ಅನುಭವಿಸಿದ್ದ ಪ್ರಭು ರಾಮಚಂದ್ರ ಕೊನೆಗೂ ಭವ್ಯ ಮಂದಿರದಲ್ಲಿ ವಿರಾಜಮಾನನಾಗಿದ್ದಾನೆ. ಹಲವು ದಶಕಗಳಿಂದ ಪುಟ್ಟ ಗುಡಾರದಲ್ಲಿದ್ದ ಬಾಲರಾಮ ಕೊನೆಗೂ ಅಯೋಧ್ಯೆಯಲ್ಲಿ ಭವ್ಯ, ದಿವ್ಯ ಮಂದಿರದಲ್ಲಿ ಪುನಃ ಪ್ರತಿಷ್ಠಾಪನೆಗೊಂಡಿದ್ದು, ಕೋಟ್ಯಂತರ ರಾಮಭಕ್ತರ ಪ್ರಾರ್ಥನೆ ಫಲಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಯಾಜಮಾನ್ಯದಲ್ಲಿ ಸೋಮವಾರ ಪ್ರಾಣಪ್ರತಿಷ್ಠಾಪನೆ ಸಂಪನ್ನಗೊಳ್ಳುತ್ತಿದ್ದಂತೆಯೇ ಬಾಲರಾಮನ ದಿವ್ಯದರ್ಶನವನ್ನು ನೂರಾರು ಕೋಟಿ ಕಂಗಳು ಕಣ್ತುಂಬಿಕೊಂಡವು. ಅಯೋಧ್ಯೆಯಲ್ಲಿ 8000ಕ್ಕೂ ಅಧಿಕ ಗಣ್ಯರು, ಸಹಸ್ರಾರು ಭಕ್ತರು ಹಾಜರಿದ್ದರೆ, ನೂರಾರು ದೇಶಗಳ ಭಕ್ತರು ತಾವಿದ್ದಲ್ಲಿಂದಲೇ ಕಾರ್ಯಕ್ರಮ ವೀಕ್ಷಿಸಿದರು. ಮೆಕ್ಸಿಕೋ ಸೇರಿ ವಿವಿಧೆಡೆ ರಾಮಮಂದಿರಗಳು ಉದ್ಘಾಟನೆಗೊಂಡವು. ದೇಶಾದ್ಯಂತ ರಾಮತಾರಕ ಯಜ್ಞ, ವಿಶೇಷ ಪೂಜೆ, ಹೋಮ-ಹವನ ನಡೆಸಲಾಯಿತು.

ಬಾಲರಾಮನಿಗೆ ಆಟಿಕೆಗಳು...!: ಐದು ವರ್ಷ ಪ್ರಾಯದ ಬಾಲರಾಮ ಪ್ರತಿಷ್ಠಾಪನೆಗೊಂಡಿರುವುದರಿಂದ ಗರ್ಭಗುಡಿಯಲ್ಲಿ ಶ್ರೀರಾಮನ ಚರಣಗಳಲ್ಲಿ ಆಟಿಕೆಗಳನ್ನು ಇಡಲಾಗಿದೆ. ಗಿಲಿಗಿಲಿ, ಆನೆ, ಒಂಟೆ, ಕುದುರೆ, ಗಾಡಿ ಹಾಗೂ ಲಾಡುವನ್ನು ಇಡಲಾಗಿದೆ.

ಪ್ರಾಣಪ್ರತಿಷ್ಠೆ ಕಾರ್ಯಕ್ರಮ

  • 84 ಸೆಕೆಂಡುಗಳ ಮುಹೂರ್ತದ ಪವಿತ್ರ ಗಳಿಗೆಯಲ್ಲಿ ಪ್ರಾಣಪ್ರತಿಷ್ಠೆ
  • ಬೆಳ್ಗೊಡೆಯನ್ನು ರಾಮನ ಪಾದ ಕಮಲಗಳಿಗೆ ಅರ್ಪಿಸಿದ ಮೋದಿ
  • ಮುಖ್ಯ ಅರ್ಚಕ 22 ವರ್ಷದ ಮೋಹಿತ್ ಪಾಂಡೆ ಮತ್ತು ಇತರ ವೈದಿಕರಿಂದ ವಿಧಿ-ವಿಧಾನ
  • ವಾಯುಪಡೆ 2 ಹೆಲಿಕಾಪ್ಟರ್​ನಲ್ಲಿ ಮಂದಿರ, ಇತರ ದೇಗುಲ, ಸರಯೂ ನದಿ ಮೇಲೆ ಪುಷ್ಪವೃಷ್ಟಿ
  • ಜಟಾಯು ಪ್ರತಿಮೆ ಅನಾವರಣಗೊಳಿಸಿದ ಮೋದಿ, ಕಾರ್ಯಕ್ರಮದ ಬಳಿಕ ಕುಬೇರ್ ಟಿಲಾ, ಶಿವ ಮಂದಿರಕ್ಕೆ ಭೇಟಿ
  • ದೇಗುಲದಲ್ಲಿ ಪಾನಕ ಸೇವಿಸಿ 11 ದಿನಗಳ ಉಪವಾಸ ಅಂತ್ಯಗೊಳಿಸಿದ ಪ್ರಧಾನಿ
  • ಸಂಜೆ ಬಳಿಕ ದೇಶಾದ್ಯಂತ ಮನೆಗಳಲ್ಲಿ ರಾಮಜ್ಯೋತಿ ಬೆಳಗಿ ಸಂಭ್ರಮಿಸಿದ ಭಕ್ತರು
  • ಬಾಲರಾಮನ ಪ್ರಾಣಪ್ರತಿಷ್ಠೆಯಿಂದ ದೇಶದಲ್ಲಿ ಹೊಸ ಕಾಲ ಚಕ್ರದ ಆರಂಭ

ಮೋದಿ ಭಾವ ಸ್ಪುರಣ

  • ಇಷ್ಟು ದಿನ ವಿಳಂಬಕ್ಕೆ ಪ್ರಭುರಾಮನಲ್ಲಿ ಕ್ಷಮೆ ಕೇಳುತ್ತೇನೆ, ನಮ್ಮನ್ನು ಕ್ಷಮಿಸುತ್ತಾನೆ ಎಂಬ ನಂಬಿಕೆಯಿದೆ
  • ಶತಮಾನಗಳ ತಾಳ್ಮೆ, ಅಸಂಖ್ಯ ಬಲಿದಾನ, ತ್ಯಾಗ, ತಪಸ್ಸಿನ ಫಲ
  • 11 ದಿನಗಳ ಅನುಷ್ಠಾನ, ಉಪವಾಸದ ವೇಳೆ ರಾಮನ ಹಾದಿ ರ್ಸ³ಸಲು ಯತ್ನಿಸಿದ್ದೇನೆ
  • ದೇವನಿಂದ ದೇಶ, ರಾಮನಿಂದ ರಾಷ್ಟ್ರದ ಹಂತಕ್ಕೆ ನಮ್ಮ ಪ್ರಜ್ಞೆಯನ್ನು ವಿಸ್ತರಿಸಿಕೊಳ್ಳಬೇಕಿದೆ.
  • ರಾಮ ಮಂದಿರ ರಾಷ್ಟ್ರ ಪ್ರಜ್ಞೆಯ ದೇಗುಲ. ರಾಮ ಭಾರತದ ನಂಬಿಕೆ, ಬುನಾದಿ, ಚಿಂತನೆ.
  • ಮುಂದಿನ ಒಂದು ಸಾವಿರ ವರ್ಷಗಳ ಭಾರತಕ್ಕೆ ನಾವು ಅಡಿಪಾಯ ಹಾಕಬೇಕಿದೆ.
  • ಇದು ಭಾರತದ ಸಮಯ ಹಾಗೂ ನಾವು ಈ ದಿಸೆಯಲ್ಲಿ ಮುಂದುವರಿಯಬೇಕಿದೆ.

ಸರ್ವಾಭರಣಭೂಷಿತ ರಾಮ

  • ಪ್ರಾಣಪ್ರತಿಷ್ಠಾಪನೆ ಬಳಿಕ ರಾಮನಿಗೆ ಸಾಂಪ್ರದಾಯಿಕ ಸ್ವರ್ಣ, ವಜ್ರ ಹಾಗೂ ಅಮೂಲ್ಯ ರತ್ನಾಭರಣಗಳನ್ನು ತೊಡಿಸಲಾಗಿದೆ. ಅವುಗಳ ಮಾಹಿತಿ ಇಂತಿದೆ.
  • ಕಿರೀಟ, ಕರ್ಣಕುಂಡಲ, ಕಂಠಾಭರಣ
  • ಕೌಸ್ತುಭಮಣಿ, ಪದಕ ಹಾರ, ವೈಜಯಂತಿ/ವಿಜಯಮಾಲೆ, ನಡುಪಟ್ಟಿ, ಭುಜಬಂಧಿ
  • ಮುದ್ರಿಕೆಗಳು, ಸ್ವರ್ಣ ಪಾದುಕೆ, ಚಿನ್ನದ ಬಿಲ್ಲು, ಬಾಣ, ಹಣೆಗೆ ಮಂಗಲ ತಿಲಕ

ಗರ್ಭಗುಡಿಯಲ್ಲಿ ಉಪಸ್ಥಿತಿ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ರಾಜ್ಯಪಾಲೆ ಆನಂದಿಬೆನ್ ಪಟೇಲ್, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಟ್ರಸ್ಟ್ ಸದಸ್ಯ ಗೋವಿಂದ ಗಿರಿ ಮಹಾರಾಜ್, ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗವತ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net