ಡ್ಯಾನ್ಸ್ ಮಾಡು ಇಲ್ಲಾಂದ್ರೆ ಸಸ್ಪೆಂಡ್ ಮಾಡಿಸ್ತೀನಿ; ಪೊಲೀಸ್ ಅಧಿಕಾರಿಗೆ ಲಾಲು ಪುತ್ರನ ಬೆದರಿಕೆಯ ವಿಡಿಯೋ ವೈರಲ್​

Tej Pratap Yadav
Published on

ಪಟ್ನಾ: ದೇಶಾದ್ಯಂತ ಹೋಳಿ ಸಂಭ್ರಮ ಮನೆ ಮಾಡಿದ್ದು, ಜನರು ಬಣ್ಣಗಳಲ್ಲಿ ಮಿಂದೇಳುತ್ತಿದ್ದಾರೆ. ಉತ್ತರಭಾರತದಲ್ಲಿ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಕೆಲವೆಡೆ ಅಹಿತಕರ ಘಟನೆಗಳು ನಡೆದಿವೆ. ಹೋಳಿ ಸಂಭ್ರಮದ ವೇಳೆ ಆರ್​ಜೆಡಿ ಶಾಸಕ, ಲಾಲು ಪ್ರಸಾದ್ (Lalu Prasad) ಪುತ್ರ ತೇಜ್ ಪ್ರತಾಪ್ ಯಾದವ್ ಪೊಲೀಸ್ ಅಧಿಕಾರಿಗೆ ಅವಾಜ್ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಪಟ್ನಾದಲ್ಲಿ ನಡೆದ ಹೋಳಿ ಸಂಭ್ರಮದ ವೇಳೆ ಲಾಲು ಪ್ರಸಾದ್ (Lalu Prasad) ಪುತ್ರ, ಆರ್​ಜೆಡಿ ಶಾಸಕ ತೇಜ್​ ಪ್ರತಾಪ್ ಯಾದವ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು. ಈ ವೇಳೆ ತೇಜ್ ಪ್ರತಾಪ್ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್ ಅಧಿಕಾರಿಯೊಬ್ಬರಿಗೆ ಡ್ಯಾನ್ಸ್ ಮಾಡುವಂತೆ ಹೇಳಿದ್ದಾರೆ. ಡ್ಯಾನ್ಸ್​ ಮಾಡಲು ಅಧಿಕಾರಿ ಹಿಂದೇಟು ಹಾಕಿದ್ದು, ಅಮಾನತು ಮಾಡಿಸುವುದಾಗಿ ಬೆದರಿಕೆ ಹಾಕಿರುವ ವಿಡಿಯೋ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ವೇದಿಕೆ ಮೇಲೆ ಸಹಚರನೊಂದಿಗೆ ಕುಳಿತುಕೊಂಡಿರುವ ಶಾಸಕ ತೇಜ್ ಪ್ರತಾಪ್ ಯಾದವ್ ಕರ್ತವ್ಯನಿರತ ಪೊಲೀಸ್ ಅಧಿಕಾರಿಗೆ, ನಾನು ಈಗ ಒಂದು ಹಾಡನ್ನು ಹಾಕಿಸುತ್ತೇನೆ. ನೀವು ಅದಕ್ಕೆ ಡ್ಯಾನ್ಸ್ ಮಾಡಬೇಕು. ಇಲ್ಲವಾದರೆ ನಿಮ್ಮನ್ನು ಸಸ್ಪೆಂಡ್ ಮಾಡಿಸುತ್ತೇನೆ ಎಂದು ಹೇಳುತ್ತಾರೆ. ಇದಾದ ಬಳಿಕ ಹಾಡನ್ನು ಪ್ಲೇ ಮಾಡಲಾಗಿದ್ದು, ಪೊಲೀಸ್ ಅಧಿಕಾರಿ ಡ್ಯಾನ್ಸ್​ ಮಾಡುವುದನ್ನು ನೋಡಬಹುದಾಗಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಕಿಡಿಕಾರಿರುವ ಎನ್​ಡಿಎ ನಾಯಕರು ಇದು ಲಾಲು-ರಾಬ್ರಿ (Lalu-Rabri) ಆಡಳಿತವನ್ನು ನೆನಪಿಸುತ್ತದೆ ಎಂದು ಕಿಡಿಕಾರಿದ್ದಾರೆ. ಬಿಹಾರದಲ್ಲಿರುವುದು ನಿತೀಶ್ ಕುಮಾರ್ ಸರ್ಕಾರ. ಯಾವುದೋ ಜಂಗಲ್ ರಾಜ್ ಸರ್ಕಾರವಲ್ಲ. ಕರ್ತವ್ಯನಿರತ ಪೊಲೀಸ್ ಅಧಿಕಾರಿಗೆ ಈ ರೀತಿ ಮಾತನಾಡಿರುವುದು ಸರಿಯಲ್ಲ ಎಂದು ಎನ್​ಡಿಎ ನಾಯಕರು ವಾಗ್ದಾಳಿ ನಡೆಸಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net