

ದುಬೈ: ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಹಜರತುಲ್ಲಾ ಜಜೈ ಅವರ ಎರಡು ವರ್ಷದ ಮಗಳು ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರವನ್ನು ಅಫ್ಘಾನಿಸ್ತಾನ ತಂಡದ ಆಟಗಾರ ಕರೀಮ್ ಜನ್ನತ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪೋಸ್ಟ್ ನೋಡುವುದಾದರೆ, ನನ್ನ ಆತ್ಮೀಯ ಸ್ನೇಹಿತ ಸಹೋದರ ಹಜರತುಲ್ಲಾ ಜಜೈ ತನ್ನ ಮಗಳನ್ನು ಕಳೆದುಕೊಂಡಿದ್ದಾರೆ ಎಂಬ ದುಃಖಕರ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಈ ನಂಬಲಾಗದಷ್ಟು ಕಷ್ಟದ ಸಮಯದಲ್ಲಿ ಅವರ ಮತ್ತು ಅವರ ಕುಟುಂಬಕ್ಕಾಗಿ ನನ್ನ ಸಂತಾಪಗಳು. ಅವರಿಗಾಗಿ ಅವರ ಕುಟುಂಬಕ್ಕಾಗಿ ಎಲ್ಲರೂ ಪ್ರಾರ್ಥಿಸಿ ಎಂದು ಕರೀಮ್ ಜನ್ನತ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
2018 ರಲ್ಲಿ ನಡೆದ ಅಫ್ಘಾನಿಸ್ತಾನ್ ಪ್ರೀಮಿಯರ್ ಲೀಗ್ನಲ್ಲಿ ಹಜರತುಲ್ಲಾ ಜಜೈ ಒಂದೇ ಓವರ್ನಲ್ಲಿ 6 ಸಿಕ್ಸ್ ಸಿಡಿಸಿದ್ದರು. ಅಲ್ಲದೆ ಬಾಲ್ಖ್ ಲೆಜೆಂಡ್ಸ್ ವಿರುದ್ಧದ ಈ ಪಂದ್ಯದಲ್ಲಿ ಕಾಬೂಲ್ ಜ್ವಾನಾನ್ ಪರ ಕಣಕ್ಕಿಳಿದಿದ್ದ ಅವರು 14 ಎಸೆತಗಳಲ್ಲಿ 62 ರನ್ ಬಾರಿಸಿದ್ದರು. ಈ ಮೂಲಕ ಒಂದೇ ಓವರ್ನಲ್ಲಿ ಆರು ಸಿಕ್ಸ್ ಸಿಡಿಸಿದ ಅಫ್ಘಾನಿಸ್ತಾನದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಷ್ಟೇ ಅಲ್ಲದೆ ಯುವರಾಜ್ ಸಿಂಗ್ ಹಾಗೂ ಕ್ರಿಸ್ ಗೇಲ್ ಬಳಿಕ ಟಿ20 ಕ್ರಿಕೆಟ್‌ನಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದರು.
https://www.vijayavani.net/three-dead-12-missing-after-boat-carrying-15-to-funeral-capsizes