

Thug Life: ಮಣಿರತ್ನಂ ನಿರ್ದೇಶನದ ಹಾಗೂ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ತಮಿಳು ನಟ ಕಮಲ್ ಹಾಸನ್ ಅಭಿನಯದ 'ಥಗ್ ಲೈಫ್' ಚಿತ್ರ ಇದೇ ಜೂನ್ 05ರಂದು ತೆರೆಕಂಡಿದೆ. ಕರ್ನಾಟಕ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ಬಿಡುಗಡೆಗೊಂಡಿರುವ ಕಮಲ್ ಹಾಸನ್ ಸಿನಿಮಾಗೆ ಸ್ವತಃ ತಮಿಳುನಾಡಿನಲ್ಲೇ ಉತ್ತಮ ಪ್ರತಿಕ್ರಿಯೆ ಲಭಿಸದೆ ಇರುವುದು ದುರಾದೃಷ್ಟಕರ. ಇದು ಚಿತ್ರಕ್ಕೆ ತವರಿನಲ್ಲೇ ಭಾರೀ ಮುಖಭಂಗ ತಂದೊಡ್ಡಿದೆ.
'ಕನ್ನಡ ತಮಿಳಿನಿಂದ ಹುಟ್ಟಿದ್ದು' ಎಂಬ ಹೇಳಿಕೆ ಮೂಲಕ ವಿವಾದ ಸೃಷ್ಟಿಸಿದ ಕಮಲ್ ಹಾಸನ್ಗೆ ಕನ್ನಡಿಗರಿಂದ ಭಾರೀ ಆಕ್ರೋಶ, ಛೀಮಾರಿ, ವಿರೋಧಗಳು ವ್ಯಕ್ತವಾಗಿವೆ. ಕರುನಾಡಿನಲ್ಲಿ ಥಗ್ ಲೈಫ್ ಸಿನಿಮಾ ರಿಲೀಸ್ ಬಗ್ಗೆ ನಟ ಸಲ್ಲಿಸಿದ್ದ ಅರ್ಜಿಗೂ ಭಾರೀ ಹಿನ್ನಡೆ ಉಂಟಾಗಿದೆ. ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ನಟನ ಸೊಕ್ಕಿನ ಮಾತಿಗೆ ಹಿಗ್ಗಾಮುಗ್ಗಾ ಥರಾಟೆ ತೆಗೆದುಕೊಂಡಿತು. ಅರ್ಜಿ ವಿಚಾರಣೆಯನ್ನು ಜೂ.10ಕ್ಕೆ ಮುಂದೂಡುವ ಮೂಲಕ ಸದ್ಯಕ್ಕೆ ಥಗ್ ಲೈಫ್ ಕರುನಾಡಿನಲ್ಲಿ ರಿಲೀಸ್ ಆಗಲ್ಲ ಎಂಬುದನ್ನು ಮುಖಕ್ಕೆ ಹೊಡೆದಂತೆ ಹೇಳಿತು. ಕೋರ್ಟ್ನ ಈ ಆದೇಶ ಕಮಲ್ ಹಾಸನ್ಗೆ ಭಾರೀ ಮುಖಭಂಗ ಉಂಟುಮಾಡಿತು ಎಂಬುದರಲ್ಲಿ ಆಶ್ಚರ್ಯವೇ ಇಲ್ಲ.
ಪ್ರಸ್ತುತ ತಮಿಳುನಾಡಿನಲ್ಲಿ ತೆರೆಕಂಡಿರುವ ಕಮಲ್ ಚಿತ್ರಕ್ಕೆ ಸಿನಿಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆಗಳು ಲಭಿಸಿವೆ. ಜಾಲತಾಣಗಳಲ್ಲಿಯೂ ನೆಗೆಟಿವ್ ವಿಮರ್ಶೆ, ಅಭಿಪ್ರಾಯಗಳು ವ್ಯಕ್ತವಾಗಿವೆ. ಮಣಿರತ್ನಂ-ಕಮಲ್ ಹಾಸನ್ ಕಾಂಬಿನೇಷನ್ನ ಈ ಸಿನಿಮಾ 'ಇಂಡಿಯನ್-2'ಗಿಂತಲೂ ಕಳಪೆಯಾಗಿದೆ ಎಂದು ಸಿನಿ ವರದಿ ತಿಳಿಸಿದೆ. 'ದಿ ಹಿಂದೂ' ವರದಿ ಪ್ರಕಾರ, ಕೇವಲ ಕರ್ನಾಟಕದಲ್ಲಿ 'ಥಗ್ ಲೈಫ್' ಬ್ಯಾನ್ ಆಗಿರುವ ಹಿನ್ನಲೆ ಚಿತ್ರಕ್ಕೆ ಬಾಕ್ಸ್ ಆಫೀಸ್‌ನಲ್ಲಿ 35-40 ಕೋಟಿ ರೂ. ನಷ್ಟ ಉಂಟಾಗಲಿದೆ ಎಂದು ಹೇಳಲಾಗಿದೆ.
"ಕರ್ನಾಟಕದಲ್ಲಿ 'ಥಗ್ ಲೈಫ್' ಚಿತ್ರ ಬಿಡುಗಡೆಯಾಗದ ಹಿನ್ನೆಲೆ, ಚಿತ್ರತಂಡ ಬಾಕ್ಸ್ ಆಫೀಸ್‌ನಲ್ಲಿ 35ರಿಂದ 40 ಕೋಟಿ ರೂ. ಗಳಿಕೆ ಮತ್ತು ನಿರ್ಮಾಪಕರಿಗೆ 12ರಿಂದ 15 ಕೋಟಿ ರೂ. ಲಾಭವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ತಮಿಳು ಚಿತ್ರಗಳಾದ 'ಜೈಲರ್', 'ಲಿಯೋ', 'ಪೊನ್ನಿಯಿನ್ ಸೆಲ್ವನ್', 'ದಿ ಗೋಟ್' ಮತ್ತು 'ವಿಕ್ರಮ್'ನಂತಹ ಅತಿ ಹೆಚ್ಚು ಗಳಿಕೆಯ ತಮಿಳು ಚಿತ್ರಗಳು ಸಹ ಕರ್ನಾಟಕದಲ್ಲಿ ಮಾರುಕಟ್ಟೆಯ ಪ್ರಮುಖ ಪಾಲನ್ನು ಹೊಂದಿವೆ" ಎಂದು ನಿರ್ಮಾಪಕ ಹಾಗೂ ವಿತರಕರಾದ ಜಿ. ಧನಂಜಯನ್ ಹೇಳಿದ್ದಾರೆ.(ಏಜೆನ್ಸೀಸ್).
“ಕಮಲ್ ಹಾಸನ್ ಅವರಿಗೆ ಕನ್ನಡದ ಮೇಲೆ ಪ್ರೀತಿಯಿದೆ. ಈಗಾಗಲೇ ಅವರನ್ನು ಅದನ್ನು ಪತ್ರದ ಮೂಲಕ ತಿಳಿಸಿದ್ದಾರೆ. ಕನ್ನಡದ ಬಗ್ಗೆ ನಟ ಎಲ್ಲಿಯೂ ಅಸಂಬದ್ಧ ಹೇಳಿಕೆ ನೀಡಿಲ್ಲ. ಈ ವಿಚಾರಣೆಯನ್ನು ಒಂದು ವಾರ ಮುಂದೂಡಿ” ಎಂದು ಕೋರ್ಟ್ಗೆ ನಟನ ಪರ ವಕೀಲರಾದ ಧ್ಯಾನ್ ಚಿನ್ನಪ್ಪ ವಾದ ಮಂಡಿಸಿದರು. ವಾದ ಆಲಿಸಿದ ನ್ಯಾ. ನಾಗಪ್ರಸನ್ನ ಅವರ ಪೀಠವು, ಇದೀಗ ವಿಚಾರಣೆಯನ್ನು ಜೂ.10ಕ್ಕೆ ಮುಂದೂಡಿದೆ. ಅಂತೆಯೇ ಜೂನ್.5ರಂದು ಕರ್ನಾಟಕದಲ್ಲಿ “ಥಗ್ ಲೈಫ್” ಸಿನಿಮಾ ರಿಲೀಸ್ ಆಗಿಲ್ಲ. ಜೂ.10ರ ವಿಚಾರಣೆ ಬಳಿಕ ಕೋರ್ಟ್ ಹೊರಡಿಸಲಿರುವ ಆದೇಶದ ಮೇಲೆ ರಿಲೀಸ್ ಭಾಗ್ಯದ ಬಗ್ಗೆ ತಿಳಿಯಲಿದೆ.